ಬೆಂಗಳೂರು: ನಾವು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದಾಗಲೆಲ್ಲ ಸಿಎಂ ಬಸವರಾಜ ಬೊಮ್ಮಾಯಿ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದರು. ಇದೀಗ ಲೋಕಾಯುಕ್ತ ಅಧಿಕಾರಿಗಳೇ (Lokayukta Raid) ಸಾಕ್ಷಿ ಕೊಟ್ಟಿದ್ದಾರೆ… ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ವಿಷಯದ ಕುರಿತು ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಶರತ್ ಬಚ್ಚೇಗೌಡ ಅವರು ಅನುದಾನ ತಾರತಮ್ಯ ಆರೋಪಿಸಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೊಮ್ಮಾಯಿ ನೇತೃತ್ವದ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬುದನ್ನು ನಾನು ಹಿಂದೆಯೇ ಬಹಿರಂಗಪಡಿಸಿದ್ದೆವು. ಆದರೆ, ಬೊಮ್ಮಾಯಿ ಅವರು ಸಾಕ್ಷಿ ಕೊಡಿ ಎಂದು ಹೇಳುತ್ತಾ ತಪ್ಪಿಸಿಕೊಳ್ಳುತ್ತಿದ್ದರು. ಇದೀಗ ಲೋಕಾಯುಕ್ತ ಅಧಿಕಾರಿಗಳೇ ಸಾಕ್ಷಿ ಕೊಟ್ಟಿದ್ದಾರೆ. ಈಗ ಯಾರು ರಾಜೀನಾಮೆ ಕೊಡುತ್ತಾರೆ ಕಾದು ನೋಡಬೇಕು. ಸಿಎಂ ಕೊಡುತ್ತಾರೆಯೇ ಅಥವಾ ಸಚಿವರು ಕೊಡುತ್ತಾರೆಯೇ ಅಥವಾ ನಿಗಮ ಮಂಡಳಿ ಅಧ್ಯಕ್ಷರು ಕೊಡುತ್ತಾರೆಯೇ ಎಂಬುದನ್ನು ನೋಡಬೇಕಾಗಿದೆ ಎಂದು ಹೇಳಿದರು.
ನಾನು ಮತ್ತು ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ವಿರುದ್ಧ ಪೋಸ್ಟರ್ ಅಭಿಯಾನ ನಡೆಸಿದ್ದೆವು. ಕೆಂಪಣ್ಣ ಶೇ. 40 ಲಂಚದ ಆರೋಪ ಮಾಡಿದ್ದರು. ಸ್ವಾಮೀಜಿಗಳು ಶೇಕಾಡ 30 ಲಂಚದ ಆರೋಪ ಮಾಡಿದ್ದರು. ವಿಶ್ವನಾಥ್ ಶೇಕಡಾ 20 ಲಂಚದ ಆರೋಪ ಮಾಡಿದ್ದರು. ಇದೀಗ ಅದಕ್ಕೆ ಸೂಕ್ತ ಸಾಕ್ಷಿ ದೊರಕಿದೆ.
ಇದನ್ನೂ ಓದಿ : Lokayukta raid : ಬಿಜೆಪಿ ನಾಯಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ, ಕಾಂಗ್ರೆಸ್ ಕೈಗೆ ಮತ್ತೊಂದು ಕಮಿಷನ್ ಅಸ್ತ್ರ
ಲೋಕಾಯುಕ್ತ ದಾಳಿಯಲ್ಲಿ ದೊಡ್ಡ ಮೊತ್ತ ಲಭಿಸಿದೆ. 10-20 ಲಕ್ಷಕ್ಕೆ ಐಟಿ ದಾಳಿ ನಡೆಸಲಾಗುತ್ತದೆ. ಈಗ ಏನು ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು. ಇದೇ ವೇಳೆ ದಾಳಿ ನಡೆಸಿದ ಲೋಕಾಯುಕ್ತರಿಗೆ ಅಭಿನಂದನೆ ಸಲ್ಲಿಸಿದರು.