ಬೆಳಗಾವಿ: ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದ ಹಿಂಡಲಗಾ ಜೈಲಿನ ಕೈದಿ ಜಯೇಶ್ ಕಾಂತಾನನ್ನು ಮಹಾರಾಷ್ಟ್ರ ಪೊಲೀಸರು ಬುಧವಾರ ನಾಗಪುರಕ್ಕೆ ಕರೆದೊಯ್ದಿದ್ದಾರೆ.
ಕಳೆದ ವಾರ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಇದರ ತನಿಖೆ ಆರಂಭಿಸಿದ ಮಹಾ ಪೊಲೀಸರಿಗೆ ಕರೆ ಮಾಡಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಜಯೇಶ್ ಕಾಂತಾ ಎಂಬುದು ಸ್ಪಷ್ಟವಾಗಿತ್ತು. ಆದರೆ, ಜಯೇಶ್ ಪೂಜಾರಿ ಕರೆ ಮಾಡಿದ್ದ ಫೋನ್ ನಂಬರ್ ಮಂಗಳೂರಿನಲ್ಲಿ ಉದ್ಯೋಗದಲ್ಲಿರುವ ಮಹಿಳೆಯೊಬ್ಬರ ಹೆಸರಿನಲ್ಲಿತ್ತು. ಪೊಲೀಸರು ಅವರನ್ನು ಕೂಡಾ ಸಂಪರ್ಕಿಸಿ ವಿಚಾರಣೆ ನಡೆಸಿದ್ದರು. ಆ ಮಹಿಳೆ ಮಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡಿಕೊಂಡಿದ್ದಾರೆ. ಈ ಕರೆಯಲ್ಲಿ ಆ ಮಹಿಳೆಯ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ.
ಇದೀಗ ಮಹಾರಾಷ್ಟ್ರದ ಪೊಲೀಸರು ಬೆಳಗಾವಿಯ ಹಿಂಡಲಗಾ ಜೈಲಿಗೆ ಬಂದು ಕೈದಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ. ಜಯೇಶ್ ಕಾಂತಾ ಹಿಂದೆಯೂ ನಿತಿನ್ ಗಡ್ಕರಿ ಅವರಿಗೆ ಕರೆ ಮಾಡಿದ್ದರಿಂದ ಈ ಬಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.
ಜಯೇಶ್ ಕಾಂತಾ ಕಳೆದ ಜನವರಿ 14ರಂದು ಕೂಡಾ ಕರೆ ಮಾಡಿದ್ದರಿಂದ ಆತನ ಉದ್ದೇಶವೇನು ಎನ್ನುವುದನ್ನು ಈ ಬಾರಿ ಸ್ಪಷ್ಟ ಮಾಡಿಕೊಳ್ಳಲಿದ್ದಾರೆ. ಕಳೆದ ಜನವರಿ 14ರಂದು ನಾಗಪುರದ ನಿತಿನ್ ಗಡ್ಕರಿ ಅವರ ಕಚೇರಿಗೆ ರಾತ್ರಿ 11.25, 11.32 ಮತ್ತು 12.32ಕ್ಕೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದು ಹಿಂಡಲಗಾ ಜೈಲಿನಿಂದ ಬಂದ ಕರೆ ಇದೆಂದು ಪ್ರಾಥಮಿಕ ತನಿಖೆಯಲ್ಲೇ ಬಯಲಾಗಿತ್ತು.
ಆವತ್ತು ಕರೆ ಮಾಡಿದವನು ಜೈಲಿನಲ್ಲಿರುವ ಹಿಂಡಲಗಾ ಜೈಲಿನಲ್ಲಿರುವ ಕೈದಿಯಾಗಿರುವ ಗ್ಯಾಂಗ್ ಸ್ಟರ್ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂದು ಪತ್ತೆ ಹಚ್ಚಲಾಗಿತ್ತು. ಆವತ್ತು ಜಯೇಶ್ ಪೂಜಾರಿಯ ಕೋಣೆಯನ್ನು ಶೋಧಿಸಿದಾಗ ಒಂದು ಡೈರಿ ಪತ್ತೆಯಾಗಿತ್ತು. ಆದರೆ, ಈ ವಿಚಾರದಲ್ಲಿ ತನಿಖೆ ತುಂಬಾ ದೂರ ಹೋಗಿರಲಿಲ್ಲ. ಆದರೆ, ಈ ಬಾರಿ ಆ ರೀತಿ ಆಗಲಾರದು ಎನ್ನಲಾಗಿದೆ.
ಹಿಂಡಲಗಾ ಜೈಲಿನ ಕೈದಿಗೆ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡುವ ಧೈರ್ಯ ಎಲ್ಲಿಂದ ಬರುತ್ತದೆ? ಮತ್ತು ಕರೆ ಮಾಡಲು ಫೋನ್ ಹೇಗೆ ಸಿಗುತ್ತದೆ ಎನ್ನುವ ವಿಚಾರವನ್ನೂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೂ ಓದಿ : Nitin Gadkari: ಬಿಜೆಪಿ ಹೈಕಮಾಂಡ್ ಜತೆ ಮುನಿಸು, ನಿತಿನ್ ಗಡ್ಕರಿ ರಾಜಕೀಯ ನಿವೃತ್ತಿ?