Site icon Vistara News

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದದ್ದು ಬಿಜೆಪಿ ಕಾರ್ಯಕರ್ತನಲ್ಲ, ಕಾಂಗ್ರೆಸ್‌ ಕಾರ್ಯಕರ್ತ! ಹಾಗಿದ್ದರೆ ಎಸೆದಿದ್ಯಾಕೆ?

kodagu sampath arrest

ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಕೊಡಗಿನಲ್ಲಿ ಮೊಟ್ಟೆ ಎಸೆದವನು ಬಿಜೆಪಿ ಕಾರ್ಯಕರ್ತನಲ್ಲ, ಕಾಂಗ್ರೆಸ್‌ ಕಾರ್ಯಕರ್ತ ಎಂಬುದು ಬೆಳಕಿಗೆ ಬಂದಿದೆ. ಗುಡ್ಡೆಹೊಸೂರಿನಲ್ಲಿ ಮೊಟ್ಟೆ ಎಸೆದ ಸೋಮವಾರ ಪೇಟೆಯ ಸಂಪತ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತನ ತಾನು ಕಾಂಗ್ರೆಸ್‌ ಕಾರ್ಯಕರ್ತನೆಂದು ಒಪ್ಪಿಕೊಂಡಿದ್ದಾನೆ ಮತ್ತು ತಾನೇಕೆ ಮೊಟ್ಟೆ ಎಸೆದೆ ಎಂಬುದಕ್ಕೂ ಸ್ಪಷ್ಟನೆ ನೀಡಿದ್ದಾನೆ. ಇದರೊಂದಿಗೆ ಮೊಟ್ಟೆ ಎಸೆತದ ರಾಜಕಾರಣದಲ್ಲಿ ಕಾಂಗ್ರೆಸ್‌ ಭಾರಿ ಹಿನ್ನಡೆ ಅನುಭವಿಸಿದಂತಾಗಿದೆ.

ಸೋಮವಾರಪೇಟೆಯ ಸಂಪತ್ ಎಂಬಾತ ಸಿದ್ದರಾಯ ಕಾರಿಗೆ ಮೊಟ್ಟೆ ಎಸದಿದ್ದ ಎನ್ನುವುದು ಆಗಲೇ ಸ್ಪಷ್ಟವಾಗಿತ್ತು. ಆದರೆ, ಆತ ಕಾಂಗ್ರೆಸ್ ಬಾವುಟ ಹಿಡಿದು ಸೋನಿಯಾ ಗಾಂಧಿ ಭಾವಚಿತ್ರವುಳ್ಳ ಶಲ್ಯ ಧರಿಸಿ‌ ನಿಂತಿರುವ ಫೋಟೊ ಒಂದೆಡೆಯಾದರೆ‌ ಮತ್ತೊಂದೆಡೆ ಕೇಸರ ಶಲ್ಯ ಧರಿಸಿ ಶಾಸಕ ಅಪ್ಪಚ್ಚುರಂಜನ್ ಜೊತೆ ನಿಂತು ಫೋಟೊಗೆ ಪೋಸ್‌ ಕೊಟ್ಟಿರುವ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ ಆತ ಕಾಂಗ್ರೆಸಿಗನೋ, ಬಿಜೆಪಿಗನೋ ಎಂಬ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು. ಬಿಜೆಪಿಗರು ಆತ ಕಾಂಗ್ರೆಸ್‌ ಕಾರ್ಯಕರ್ತನೆಂದೂ, ಕಾಂಗ್ರೆಸ್‌ ಕಾರ್ಯಕರ್ತರು ಆತ ಬಿಜೆಪಿಯವನೆಂದೂ ದೂರುತ್ತಿದ್ದರು.

ಕಾಂಗ್ರೆಸ್‌ ಅಂತೂ ಮೊಟ್ಟೆ ಎಸೆತ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಭಾರಿ ಪ್ರತಿಭಟನೆಯನ್ನು ನಡೆಸಿತ್ತು ಮತ್ತು ಆಗಸ್ಟ್‌ ೨೬ರಂದು ಕೊಡಗಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಆದರೆ, ಸಂಪತ್‌ ನೀಡಿರುವ ಹೇಳಿಕೆಯಿಂದ ಎಲ್ಲವೂ ಬುಡಮೇಲಾದಂತಾಗಿದೆ.

ಕುಶಾಲ ನಗರದಲ್ಲಿ ಬಂಧನ
ಮೊಟ್ಟೆ ಎಸೆದ ಸಂಪತ್‌ ಶನಿವಾರ ನ್ಯಾಯಾಲಯಕ್ಕೆ ಶರಣಾಗುವುದಕ್ಕಾಗಿ ಕುಶಾಲನಗರಕ್ಕೆ ಬಂದಿದ್ದ. ಆ ಸಂದರ್ಭದಲ್ಲಿ ಪೊಲೀಸರು ಆತನನ್ನು ಬಂಧಿಸಿದರು. ಈ ವೇಳೆ ಆತ ನೀಡಿದ ಹೇಳಿಕೆ ಆತ ಕಾಂಗ್ರೆಸ್‌ ಕಾರ್ಯಕರ್ತ ಎನ್ನುವ ಕಡೆಗೆ ಬೆಟ್ಟು ಮಾಡಿದೆ.

ಮೊಟ್ಟೆ ಎಸೆದಿದ್ಯಾಕೆ? ಸಂಪತ್‌ ಹೇಳಿದ್ದೇನು?
ʻʻನಾನು ಈ ಹಿಂದೆ ಜೆಡಿಎಸ್ ಕಾರ್ಯಕರ್ತನಾಗಿದ್ದೆ. ಮಾಜಿ ಸಚಿವ ಜೀವಿಜಯ ಕಾಂಗ್ರೆಸ್ ಸೇರಿಕೊಂಡಾಗ ನಾನೂ ಅವರ ಜತೆ ಕಾಂಗ್ರೆಸ್‌ಗೆ ಬಂದಿದ್ದೇನೆʼʼ ಎಂದು ಸಂಪತ್‌ ಹೇಳಿದ್ದಾನೆ.
ʻʻಈ ಹಿಂದೆ ಸಿದ್ದರಾಮಯ್ಯ ಕೊಡಗಿನವರು ದನದ ಮಾಂಸ ಭಕ್ಷಣೆ ಮಾಡುತ್ತಾರೆಂದು ಹೇಳಿದ್ದರು. ಟಿಪ್ಪು ಸುಲ್ತಾನ್‌ ವಿಷಯದಲ್ಲೂ ಕೊಡಗಿನ ಜನರ ಭಾವನೆಗೆ ಧಕ್ಕೆ ಉಂಟು ಮಾಡಿದರು. ಇದು ನನಗೆ ಇಷ್ಟವಾಗಿಲ್ಲ. ಅದೇ ಕಾರಣಕ್ಕಾಗಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿದ್ದೇನೆʼʼ ಎಂದು ಆತ ಹೇಳಿದ್ದಾನೆ.

ಅಪ್ಪಚ್ಚು ರಂಜನ್‌ ಜತೆಗಿನ ಫೋಟೊ ಎಲ್ಲಿಂದ?
ಈ ನಡುವೆ, ಶಾಸಕ ಅಪ್ಪಚ್ಚು ರಂಜನ್‌ ಜತೆಗಿನ ಫೋಟೊ ಹೇಗೆ ಬಂತು ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದು ಹೀಗೆ: ಯಾವುದೋ ಹಿಂದು ಸಂಘಟನೆಯ ಕಾರ್ಯಕ್ರಮದಲ್ಲಿ ಫೋಟೊ ತೆಗೆದುಕೊಂಡಿದ್ದೆ.

ಅಪ್ಪಚ್ಚು ರಂಜನ್‌ ಸವಾಲು
ಈ ನಡುವೆ, ಸಂಪತ್‌ ಬಿಜೆಪಿ ಕಾರ್ಯಕರ್ತನಲ್ಲ, ಕಾಂಗ್ರೆಸ್‌ ಕಾರ್ಯಕರ್ತ. ನನ್ನ ಜತೆ ಫೋಟೊ ಇದ್ದ ಮಾತ್ರಕ್ಕೆ ನಮ್ಮ ಪಕ್ಷದವನಾಗಬೇಕಾಗಿಲ್ಲ. ಅವನು ಪಕ್ಷದ ಸದಸ್ಯನೇ ಅಲ್ಲ ಎಂದು ಅಪ್ಪಚ್ಚು ರಂಜನ್‌ ಸ್ಪಷ್ಟಪಡಿಸಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರಿಗೆ ಸವಾಲೂ ಹಾಕಿದ್ದಾರೆ.

ʻʻಸಿದ್ದರಾಮಯ್ಯ ಬಂದು ಮಡಿಕೇರಿಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲಿʼʼ ಎಂದು ಅಪ್ಪಚ್ಚು ರಂಜನ್‌ ಚಾಲೆಂಜ್‌ ಮಾಡಿದ್ದಾರೆ

ಇದನ್ನೂ ಓದಿ| ಸಿದ್ದರಾಮಯ್ಯ ಕೊಡಗಿಗೆ ಬಂದ್ರೆ ಕೌಂಟರ್‌ ಪ್ರತಿಭಟನೆ ಮಾಡ್ತೇವೆ: ಶಾಸಕ ಅಪ್ಪಚ್ಚು ರಂಜನ್

Exit mobile version