ಹಾಸನ: ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಚಾಮರಾಜ ಕ್ಷೇತ್ರದ ಸ್ವಪಕ್ಷದ ಶಾಸಕ ಎಲ್. ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಅವಕಾಶ ಸಿಗದ ಕಾರಣ ಒಬ್ಬ ಶಾಸಕ ದೇಗುಲಕ್ಕೆ ಬಂದಾಗ ಫೋನ್ ರಿಸೀವ್ ಮಾಡುವ ಸೌಜನ್ಯವಿಲ್ಲ ಎಂದು ಬಿಜೆಪಿ ಕಾರ್ಯಕರ್ತರ ಎದುರು ಸ್ಥಳೀಯ ಶಾಸಕನ ವಿರುದ್ಧ ಅಸಮಾಧಾನ ಹೊರಹಾಕಿ ದರ್ಶನ ಪಡೆಯದೆ ವಾಪಸ್ ತೆರಳಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ಮೈಸೂರು ಜಿಲ್ಲೆ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಅವರು ಭಾನುವಾರ ಆಗಮಿಸಿದ್ದರು. ಆದರೆ 1 ಗಂಟೆ ಹೊತ್ತು ಕಾದರೂ ದೇವಾಲಯದೊಳಗೆ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಕಾದು ಕಾದು ಸುಸ್ತಾಗಿ ಶಾಸಕ ನಾಗೇಂದ್ರ ವಾಪಸ್ ತೆರಳುವ ವೇಳೆ ಶಾಸಕ ಪ್ರೀತಂ ಗೌಡ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ | ಮಹಿಳೆಯ ಕಪಾಳಕ್ಕೆ ಹೊಡೆದ ವಿ.ಸೋಮಣ್ಣ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ: Sorry ಎಂದ ಸಚಿವ
ನಿಮ್ಮ ಎಂಎಲ್‌ಎ ಈ ಮಟ್ಟಕ್ಕೆ ನಡೆದುಕೊಳ್ಳುತ್ತಾನಲ್ಲಾ, ಅವನ ನಿಧಿ ಅಥವಾ ಆಸ್ತಿ ಕೇಳುತ್ತಿದ್ದೇವೆಯೇ? ಒಬ್ಬ ಶಾಸಕ ಬಂದರೆ ಒಂದು ಫೋನ್ ತೆಗೆಯೋ ಸೌಜನ್ಯ ಇಲ್ಲ ಅವನಿಗೆ ಎಂದು ಏಕವಚನದಲ್ಲಿ ಪ್ರೀತಂ ಗೌಡ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ದೌಲತ್ತು ಹೆಚ್ಚು ದಿನ ನಡೆಯುವುದಿಲ್ಲ ಬಿಡಿ. ನನಗೆ ಗೊತ್ತಿದೆ, ನಾಳೆ ಜಿಲ್ಲಾಡಳಿತದ ಕಡೆಯಿಂದ ಬಂದು ದರ್ಶನ ಪಡೆಯುತ್ತೇನೆ ಎಂದು ಬೇಸರದಿಂದ ವಾಪಸ್ ತೆರಳಿದ್ದಾರೆ.
ಎಎಸ್‌ಪಿ ವರ್ತನೆ ಬಗ್ಗೆಯೂ ಕಿಡಿ
ಬೆಂಬಲಿಗರ ಜತೆ ಹಾಸನಾಂಬೆ ದರ್ಶನಕ್ಕೆ ಬಂದಿದ್ದಾಗ ನಿಮ್ಮ ಜತೆ ನಾಲ್ಕು ಜನ ಮಾತ್ರ ಒಳಗೆ ಬರಲು ಅವಕಾಶವಿದೆ ಎಂದು ಹೇಳಿದ್ದಕ್ಕೆ ಎಎಸ್ಪಿ ಎಂ.ಕೆ.ತಮ್ಮಯ್ಯ ವಿರುದ್ಧ ಶಾಸಕ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿ, ಗೃಹ ಇಲಾಖೆಗೆ ಫೋನ್ ಮಾಡಿ ಪೊಲೀಸ್ ಅಧಿಕಾರಿ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ನೋಡಿ ನಾನೊಬ್ಬ ಶಾಸಕ ಬಂದಿದ್ದೇನೆ, ನನ್ನ ಜತೆ 25 ಜನ ನಿಂತಿದ್ದಾರೆ. ಶಾಸಕರಾದರೆ ನೀವೊಬ್ಬರೇ ಬರುವುದಾದರೆ ಬನ್ನಿ ಎನ್ನುತ್ತಾನೆ ಅವನು. ನೋಡಿ ಅವನಿಗೆ ನಿರ್ದೇಶನ ನೀಡಿ, ಶಾಸಕನ ಜತೆಗೆ ಅಗೌರವವಾಗಿ ನಡೆದುಕೊಳ್ಳುತ್ತಾನೆ, ಅವನು ಡಿಪಾರ್ಟ್‌ಮೆಂಟ್‌ಗೆ ನಾಲಾಯಕ್. ನಾನು ಹೋಮ್ ಮಿನಿಸ್ಟರ್ ಅವರನ್ನು ಭೇಟಿಯಾಗಿ ಈ ಬಗ್ಗೆ ತಿಳಿಸುತ್ತೇನೆ. ಕೂಡಲೆ ಹಾಸನ ಎಸ್‌ಪಿಗೂ ನಿರ್ದೇಶನ ನೀಡಿ, ನಾನು ಒಳಹೋಗಬೇಕು ಎಂದು ಎಚ್ಚರಿಕೆ ನೀಡಿದ್ದರು.
ಶಾಸಕಿ ಅನಿತಾ ಕುಮಾರಸ್ವಾಮಿಗೆ ಆತ್ಮೀಯ ಸ್ವಾಗತ
ಹಾಸನಾಂಬೆ ದೇವಿ ದರ್ಶನಕ್ಕೆ ಎಚ್.ಡಿ.ರೇವಣ್ಣ ಆಗಮಿಸಿದ್ದಾಗ ಅವರನ್ನು ಮಾತನಾಡಿಸದ ಶಾಸಕ ಪ್ರೀತಂ ಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಬಂದಾಗ ಅಕ್ಕ ಬನ್ನಿ ಎಂದು ಆತ್ಮೀಯವಾಗಿ ಸ್ವಾಗತ ಕೋರಿದ್ದು ಕಂಡುಬಂತು.
ಶಾಸಕಿ ಅನಿತಾ ಕುಮಾರಸ್ವಾಮಿ ಅವರು ದೇಗುಲದ ಒಳಗೆ ಪ್ರವೇಶಿಸಿದಾಗ ಗರ್ಭಗುಡಿಯ ಹೊರಭಾಗದಲ್ಲಿ ಕುಳಿತಿದ್ದ ಶಾಸಕ ಪ್ರೀತಂ ಗೌಡ, ಶಾಸಕಿಗೆ ಅತ್ಯಂತ ವಿನಯದಿಂದ ಕೈಮುಗಿದು ನಮಸ್ಕರಿಸಿ, ಅಕ್ಕ ಚೆನ್ನಾಗಿದ್ದೀರಾ ಎಂದು ಯೋಗಕ್ಷೇಮ ವಿಚಾರಿಸಿದರು. ಬಳಿಕ ಶಾಸಕಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಆದರೆ ನಾಲ್ಕು ಬಾರಿ ಭೇಟಿ ನೀಡಿದ್ದ ಎಚ್.ಡಿ.ರೇವಣ್ಣ ಅವರನ್ನು ಕಂಡೂ ಕಾಣದಂತೆ ಪ್ರೀತಂ ಗೌಡ ಓಡಾಡುತ್ತಿದ್ದದ್ದು ಕಂಡು ಬಂದಿತ್ತು.
ಇದನ್ನೂ ಓದಿ | Modi In Ayodhya | ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಆಗಮಿಸಿದ ಮೋದಿ, ರಾಮನ ದರ್ಶನ