ಕರ್ನಾಟಕವೆಂಬ ವಿಶಿಷ್ಟ ನಾಡಿಗೆ ಸುದೀರ್ಘ ಚರಿತ್ರೆಯಿದೆ. ಕನ್ನಡ ಸೀಮೆಯ ಬಗ್ಗೆ (Kannada Rajyotsava) ಪ್ರಾಗೈತಿಹಾಸಿಕ ಕಾಲದ (ಬರಹ ಆರಂಭವಾಗುವ ಮೊದಲಿನ ಕಾಲ) ಚರಿತ್ರೆ ಲಭ್ಯವಿಲ್ಲ. ಆದರೆ ರಾಮಾಯಣ ಮತ್ತು ಮಹಾಭಾರತದಂಥ ಪುರಾಣ ಕಾಲದ ಜೊತೆಗೆ ಕರ್ನಾಟಕದ ನಂಟಿದೆಯೆಂದು ಹೇಳಲಾಗುತ್ತದೆ. ಸುಗ್ರೀವನ ರಾಜಧಾನಿ ಕಿಷ್ಕಿಂಧೆಯನ್ನು ನಮ್ಮ ಹಂಪೆಯ ಬಳಿ ಗುರುತಿಸಲಾಗಿದೆ. ʻಕರ್ನಾಟ ದೇಶʼವೆಂಬ ಹೆಸರನ್ನು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಮಹಾಭಾರತದಲ್ಲಿ ಬಳಸಲಾದ ಕುಂತಳ ಎಂಬ ಸ್ಥಳನಾಮವನ್ನು ಕರ್ನಾಟಕಕ್ಕೂ ಕೆಲವೆಡೆ ಪರ್ಯಾಯವೆಂಬಂತೆ ಅನ್ವಯಿಸಲಾಗಿದೆ. ಮುನಿ ಅಗಸ್ತ್ಯರೊಂದಿಗೆ ನಂಟಿರುವ ವಾತಾಪಿ ಪ್ರದೇಶ ಬಾಗಲಕೋಟೆಯ ಬಾದಾಮಿ ಕ್ಷೇತ್ರ. ನಿಖರವಾಗಿ ಲಭ್ಯವಿರುವ ಕರ್ನಾಟಕದ ಚರಿತ್ರೆಯ ಬಗೆಗೊಂದು ಪಕ್ಷಿನೋಟವಿದು.
ಕರ್ನಾಟಕದ ಲಿಖಿತ ಚರಿತ್ರೆ
ಕರ್ನಾಟಕದ ಲಿಖಿತ ಚರಿತ್ರೆ ಲಭ್ಯವಿರುವುದು ಕ್ರಿ.ಪೂ. 4 ಮತ್ತು 3ನೇ ಶತಮಾನದಿಂದ. ನಂದರು ಮತ್ತು ಮೌರ್ಯರ ಸಾಮ್ರಾಜ್ಯದಲ್ಲಿ ಕರ್ನಾಟಕ ಸೇರಿತ್ತು. ಸಾಮ್ರಾಟ ಅಶೋಕನಿಗೆ ಸೇರಿದ ಶಾಸನವೊಂದು ಚಿತ್ರದುರ್ಗದಲ್ಲಿ ದೊರೆತಿದ್ದು, ಈ ವಿಷಯವನ್ನು ಪುಷ್ಟೀಕರಿಸುತ್ತದೆ. ಮೌರ್ಯ ಸಾಮ್ರಜ್ಯದ ನಂತರ ಕರ್ನಾಟಕದ ಪ್ರಾಂತ್ಯದಲ್ಲಿ ಶಾತವಾಹನರ ಆಡಳಿತವಿತ್ತು. ಕ್ರಿ.ಪೂ. ಮೂರನೇ ಶತಮಾನದ ನಂತರದ ಸುಮಾರು ೩೦೦ ವರ್ಷಗಳು ಇದೇ ರಾಜವಂಶವು ಆಳಿದ್ದು, ಪ್ರಾಕೃತ ಇವರ ಆಡಳಿತ ಭಾಷೆಯಾಗಿತ್ತು. ಶಾತವಾಹನ ವಂಶದ ನಂತರ ಗಂಗರು ಮತ್ತು ಕದಂಬರು ಕರ್ನಾಟಕವನ್ನು ಆಳಿದರು.
ಕನ್ನಡದ ರಾಜಮನೆತನಗಳು
ಕರ್ನಾಟಕದ ಪ್ರಾಚೀನ ದೇಶೀಯ ಅರಸು ಮನೆತನ ಬನವಾಸಿಯ ಕದಂಬರದ್ದು. ಮಯೂರವರ್ಮನಿಂದ ಆರಂಭವಾದ ಈ ರಾಜವಂಶ, ಕ್ರಿ.ಶ. 325ರಿಂದ 540ರವರೆಗೆ ಕರ್ನಾಟಕದ ಉತ್ತರ ಭಾಗ ಮತ್ತು ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಆಡಳಿತ ನಡೆಸಿತ್ತು. ಆನಂತರ ಕದಂಬರ ಸಾಮ್ರಾಜ್ಯದ ಹೆಚ್ಚಿನ ಭಾಗ ಬಾದಾಮಿ ಚಾಲುಕ್ಯರ ಕೈವಶವಾಯಿತು. ಕದಂಬರು ಕರ್ನಾಟಕದ ಉತ್ತರ ಭಾಗವನ್ನು ತಮ್ಮದಾಗಿಸಿಕೊಂಡ ಸಂದರ್ಭದಲ್ಲಿ, ದಕ್ಷಿಣದಲ್ಲಿ ಗಂಗರು ಆಡಳಿತ ಆರಂಭಿಸಿದರು. ನಂದಗಿರಿ ಮತ್ತು ತಲಕಾಡಿನಲ್ಲಿ ಆಡಳಿತ ನಡೆಸಿದ ಗಂಗರು ಹಿಂದೂ ಮತ್ತು ಜೈನ ಧರ್ಮಗಳ ಪೋಷಕರಾಗಿದ್ದರು. ಕನ್ನಡ ಸಾಹಿತ್ಯದ ಬೆಳವಣಿಗೆಯ ಮಹತ್ವದ ಹಂತವನ್ನು ಈ ಕಾಲಘಟ್ಟದಲ್ಲಿ ಗುರುತಿಸಲಾಗಿದೆ. ಸುಮಾರು 700 ವರ್ಷಗಳ ಕಾಲ, ಕರ್ನಾಟಕದ ದಕ್ಷಿಣ ಭಾಗ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳ ಕೆಲ ಭಾಗಗಳನ್ನು ಈ ಅರಸರು ಆಳಿದರು. ಶ್ರವಣಬೆಳಗೊಳದ ವೈರಾಗ್ಯದ ಮಹಾಮೂರ್ತಿ ಗೊಮ್ಮಟನನ್ನು ಸ್ಥಾಪಿಸಿದ್ದು ಗಂಗರ ಕಾಲದಲ್ಲಿ.
ಬಾದಾಮಿಯ ಚಾಲುಕ್ಯರು
ಮಧ್ಯ ಮತ್ತು ದಕ್ಷಿಣ ಭಾರತದ ದೊಡ್ಡ ಭಾಗದಲ್ಲಿ ಈ ರಾಜವಂಶ ಆಡಳಿತ ನಡೆಸಿತು. ಕರ್ನಾಟಕ ಮತ್ತು ಮಹಾರಾಷ್ಟ್ರದ ಬಹುತೇಕ ಭಾಗ, ಆಂಧ್ರಪ್ರದೇಶದ ದೊಡ್ಡ ಪ್ರಾಂತ್ಯ, ಮಧ್ಯಪ್ರದೇಶ, ಗುಜರಾತ್ ಮತ್ತು ಒರಿಸ್ಸಾದ ಹಲವು ಭಾಗಗಳು ಬಾದಾಮಿ ಚಾಲುಕ್ಯರ ಸಾಮ್ರಾಜ್ಯಕ್ಕೆ ಸೇರಿದ್ದವು. ವೈಷ್ಣವ ಪಂಥಕ್ಕೆ ಸೇರಿದ ಈ ರಾಜವಂಶ ಕ್ರಿ.ಶ. 500ರಿಂದ 757ರವರೆಗೆ ಅಧಿಕಾರದಲ್ಲಿತ್ತು. ಚಾಲುಕ್ಯರ ಪ್ರಖ್ಯಾತ ದೊರೆ ಎರಡನೇ ಪುಲಕೇಶಿಯ ಕಾಲದಲ್ಲಿ ಆತನ ಆಸ್ಥಾನಕ್ಕೆ ಭೇಟಿ ನೀಡಿದ್ದ ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಆತನ ರಾಜಸತ್ತೆಯ ಬಗ್ಗೆ ತನ್ನ ಪ್ರವಾಸಿ ಟಿಪ್ಪಣಿಯಲ್ಲಿ ವಿವರಗಳನ್ನು ನೀಡಿದ್ದಾನೆ. ಸುಪ್ರಸಿದ್ಧ ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ದೇಗುಲಗಳು ಚಾಲುಕ್ಯರ ಕಾಲದಲ್ಲೇ ನಿರ್ಮಾಣಗೊಂಡವು.
ಆನಂತರ ವರ್ಷಗಳಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪೂರ್ಣ ಭಾಗ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಧ್ಯಪ್ರದೇಶದ ಒಂದಿಷ್ಟು ಭಾಗಗಳು ಸೇರಿ ರಾಷ್ಟ್ರಕೂಟರ ಸಾಮ್ರಾಜ್ಯವೆನಿಸಿತ್ತು. ಕ್ರಿ.ಶ 757ರಿಂದ 973ರವರೆಗೆ ವ್ಯಾಪಿಸಿದ್ದ ಇವರ ಕಾಲದಲ್ಲಿ ಕೆಲವು ಮಹತ್ವದ ಸಾಹಿತ್ಯಿಕ ಕೆಲಸಗಳು ನಡೆದಿವೆ. ರಾಷ್ಟ್ರಕೂಟರ ದೊರೆ ನೃಪತುಂಗ ಅಮೋಘವರ್ಷನ ಕಾಲದಲ್ಲಿ ಕನ್ನಡದ ಮೇರು ಕೃತಿ ಕವಿರಾಜಮಾರ್ಗ ರಚನೆಗೊಂಡಿತ್ತು. ಇವರ ನಂತರ ಪ್ರಬಲರಾಗಿದ್ದು ಕಲ್ಯಾಣದ ಚಾಲುಕ್ಯರು. ಇವರ ಆಳ್ವಿಕೆಯ ಕಾಲದಲ್ಲೇ ಮಹತ್ವದ ವಚನ ಚಳುವಳಿ ನಡೆದಿದ್ದು. 1198ರಲ್ಲಿ ಇವರ ಆಳ್ವಿಕೆ ಕೊನೆಗೊಂಡ ನಂತರ ಉತ್ತರದಲ್ಲಿ ಸೇವುಣರು ಮತ್ತು ದಕ್ಷಿಣದಲ್ಲಿ ಹೊಯ್ಸಳರು ಪ್ರವರ್ಧಮಾನಕ್ಕೆ ಬಂದರು.
ಉತ್ತರ ಕರ್ನಾಟಕ, ಮಹಾರಾಷ್ಟ್ರದ ಹೆಚ್ಚಿನ ಭಾಗ ಮತ್ತು ಆಂಧ್ರದ ಕೆಲವು ಪ್ರಾಂತ್ಯಗಳನ್ನು ಕೂಡಿಸಿ, 1198ರಲ್ಲಿ ಆಳ್ವಿಕೆ ಆರಂಭಿಸಿದ ಸೇವುಣರು ದೇವಗಿರಿಯನ್ನು ರಾಜಧಾನಿಯನ್ನಾಗಿಸಿಕೊಂಡಿದ್ದರು. ಆದರೆ ಹೊಯ್ಸಳರೊಂದಿಗೆ ಪದೇಪದೆ ಯುದ್ಧದಲ್ಲಿ ತೊಡಗಿಸಿಕೊಂಡಿದ್ದರಿಂದ, ರಾಜ್ಯ ಸ್ಥಿರವಾಗದೆ, ದಿಲ್ಲಿಯ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿಗೆ ಸೋಲಬೇಕಾಯಿತು.
ಹೊಯ್ಸಳರು
ಸಳನೆಂಬ ವೀರನಿಂದ ಸ್ಥಾಪನೆಗೊಂಡ ಈ ಸಾಮ್ರಾಜ್ಯ, ಅದ್ಭುತವಾಗ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಹುಲಿಯೊಂದಿಗೆ ವೀರನೊಬ್ಬ ಹೋರಾಡುತ್ತಿರುವ ಚಿತ್ರವೇ ಹೊಯ್ಸಳರ ಲಾಂಛನವೂ ಆಗಿತ್ತು. ಹಲವು ಮತ-ಧರ್ಮಗಳ ಪೋಷಕರಾಗಿದ್ದ ಹೊಯ್ಸಳರ ಕಾಲದಲ್ಲಿ ಸೋಮನಾಥಪುರ, ಬೇಲೂರು, ಹಳೇಬೀಡಿನ ಸುಂದರ ದೇವಾಲಯಗಳು ನಿರ್ಮಾಣಗೊಂಡವು. 1349ರವರೆಗೆ ಇವರ ಆಳ್ವಿಕೆಯ ಕಾಲವಾಗಿದ್ದು, ವಿಷ್ಣುವರ್ಧನ ಮಹಾರಾಜ ಮತ್ತು ಆತನ ಪತ್ನಿ ನಾಟ್ಯರಾಣಿ ಶಾಂತಲೆಯ ಕಥೆ ಇಂದಿಗೂ ಪ್ರಚಲಿತದಲ್ಲಿದೆ.
ಗುರು ವಿದ್ಯಾರಣ್ಯರ ಪ್ರೋತ್ಸಾಹದಿಂದ ಸಂಗಮ ವಂಶೀಯರಾದ ಹಕ್ಕ-ಬುಕ್ಕರು (ಹರಿಹರ ಮತ್ತು ಬುಕ್ಕರಾಯ) ನಿರ್ಮಿಸಿದ ವಿಜಯನಗರ ಸಾಮ್ರಾಜ್ಯದ ಬಗ್ಗೆಯೂ ಕಥೆಗಳು ಪ್ರಚಲಿತದಲ್ಲಿವೆ. ಮೊಲವೊಂದು ಬೇಟೆ ನಾಯನ್ನು ಹಿಮ್ಮೆಟ್ಟಿಸಿದ್ದನ್ನು ಕಂಡು, ಇದು ವೀರಭೂಮಿ ಎಂದು ವಿದ್ಯಾರಣ್ಯರು ನಿರ್ಧರಿಸಿ, ಅದರಿಂದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಯಿತೆಂಬ ಕಥೆಗಳಿವೆ. ಕೃಷ್ಣದೇವರಾಯನ ಕಾಲದಲ್ಲಿ ತನ್ನ ಉತ್ತುಂಗವನ್ನು ಮುಟ್ಟಿದ್ದ ಸಾಮ್ರಾಜ್ಯ, ಆತನ ಮರಣಾನಂತರ ಅವನತಿಯ ಹಾದಿ ಹಿಡಿಯಿತು. ದಖನ್ನಿನ ಸುಲ್ತಾನರೊಂದಿಗೆ ಕ್ರಿ.ಶ. 1565ರಲ್ಲಿ ತಾಳಿಕೋಟೆಯಲ್ಲಿ ನಡೆದ ಯುದ್ಧದಲ್ಲಿ ಅಳಿಯ ರಾಮರಾಯ ಸೋತ ಮೇಲೆ ಸಾಮ್ರಾಜ್ಯ ಪತನಗೊಂಡಿತು. ಅವರ ಅದ್ಭುತ ವಾಸ್ತುಶಿಲ್ಪದ ಕುರುಹಾಗಿ ಹಂಪೆ ಇಂದಿಗೂ ನಿಂತಿದೆ.
ದಖನ್ನಿನ ಸುಲ್ತಾನರು
ಬಹಮನಿ ಮತ್ತು ಬಿಜಾಪುರದ ಸುಲ್ತಾನರುಗಳ ಆಳ್ವಿಕೆಯು 1347ರಿಂದ ಆರಂಭವಾಗಿ 1686ರಲ್ಲಿ ಅಂತ್ಯಗೊಂಡಿತು. ಉತ್ತರ ಭಾರತದ ಕಡೆಯಿಂದ ದಕ್ಷಿಣಕ್ಕೆ ದಾಳಿ ಮಾಡಿದ ಸುಲ್ತಾನರು, ದೇವಗಿರಿ, ವಾರಂಗಲ್ ಪ್ರಾಂತ್ಯಗಳು, ತಮಿಳುನಾಡು ಭಾಗದಲ್ಲಿ ಪಾಂಡ್ಯರು ಮತ್ತು ಕರ್ನಾಟಕದಲ್ಲಿ ಹೊಯ್ಸಳರ ಆಡಳಿತನ್ನು ಬುಡಮೇಲು ಮಾಡಿದ್ದರು. 1490ರಲ್ಲಿ ಬಹಮನಿ ಸಾಮ್ರಾಜ್ಯ ಐದು ತುಂಡುಗಳಾಗಿ ಒಡೆದು, ಕರ್ನಾಟಕದಲ್ಲಿ ಬೀದರ್ ಮತ್ತು ಬಿಜಾಪುರಗಳಲ್ಲಿ ಎರಡು ಪ್ರತ್ಯೇಕ ಸಂಸ್ಥಾನಗಳಾದವು. 1686ರಲ್ಲಿ ಮೊಘಲರ ಔರಂಗಜೇಬನಿಂದ ಸಿಕಂದರ್ ಅಲಿ ಷಾ ಸೋತ ಮೇಲೆ ಕರ್ನಾಟಕದಲ್ಲಿ ಆದಿಲ್ ಷಾಹಿಗಳ ಆಳ್ವಿಕೆ ಕೊನೆಗೊಂಡಿತು.
ಕೆಳದಿಯ ನಾಯಕರು 1500ರಲ್ಲೇ ಆಡಳಿತ ಆರಂಭಿಸಿದ್ದರು. ತನ್ನ ಉನ್ನತಿಯ ಕಾಲದಲ್ಲಿ ಬನವಾಸಿಯಿಂದ ಕೇರಳದ ಕಣ್ಣೂರಿನವರೆಗೆ ಘಟ್ಟದ ಮೇಲೆ ಮತ್ತು ಕೆಳಗಿನ ಭಾಗಗಳಲ್ಲಿ ಹರಡಿದ್ದ ಈ ರಾಜವಂಶದಲ್ಲಿ ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮನ (ಕಿತ್ತೂರು ಚೆನ್ನಮ್ಮ ಅಲ್ಲ, ಕೆಳದಿ ಚೆನ್ನಮ್ಮ) ಕಥೆಗಳು, ಔರಂಗಜೇಬನನ್ನು ರಾಣಿ ಎದುರಿಸಿದ ವೀರಗಾಥೆ ಇಂದಿಗೂ ಪ್ರಚಲಿತವಿವೆ. 1763ರಲ್ಲಿ ರಾಣಿ ವೀರಮ್ಮಾಜಿಯ ಕಾಲದಲ್ಲಿ ಹೈದರಾಲಿಯ ಜೊತೆಗಿನ ಯುದ್ಧದಲ್ಲಿ ಸಂಸ್ಥಾನ ಪತನಗೊಂಡಿತು.
ಮೈಸೂರಿನ ಒಡೆಯರು
1399ರಲ್ಲಿ ಯದುರಾಯನಿಂದ ಆರಂಭಗೊಂಡ ಈ ವಂಶ, ದೇಶಕ್ಕೆ ಸ್ವಾತಂತ್ರ ಬರುವವರೆಗೂ ಆಳ್ವಿಕೆಯಲ್ಲಿತ್ತು. ಆರಂಭದಲ್ಲಿದ್ದ ಸಣ್ಣ ಸಂಸ್ಥಾನ ದೊಡ್ಡ ರಾಜ್ಯವಾಗಿ ವಿಸ್ತರಿಸಿದ್ದು ರಾಜ ಒಡೆಯರ್. 1761ರಲ್ಲಿ ಹೈದರಾಲಿಯು ರಾಜ್ಯವನ್ನು ವಶಪಡಿಸಿಕೊಂಡು, ಶ್ರೀರಂಗಪಟ್ಟಣದಿಂದ ಆಡಳಿತವನ್ನು ಮುಂದುವರಿಸಿದ. ಆತನ ನಂತರ, ಮಗ ಟಿಪ್ಪು ಸುಲ್ತಾನ್ ಆಡಳಿತ ಮುಂದುವರಿಸಿದ. ಆದರೆ ಅಷ್ಟರಲ್ಲಾಗಲೇ ಭಾರತದೆಲ್ಲೆಡೆ ಹರಡಿದ್ದ ಬ್ರಿಟಿಷರೊಂದಿಗೆ ಹಲವು ಬಾರಿ ಯುದ್ಧ ಮಾಡಬೇಕಾಯಿತು. 1799ರಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಅಸುನೀಗಿದ. ಆನಂತರ ರಾಜ್ಯದ ಉತ್ತರ ಭಾಗಗಳು ನಿಜಾಮರು ಮತ್ತು ಮರಾಠರ ನಡುವೆ ಹಂಚಿಹೋಯಿತು. ಮೈಸೂರಿನ ಭಾಗ ಒಡೆಯರ್ ಮನೆತನಕ್ಕೆ ಉಳಿಯಿತು. ಕರ್ನಾಟಕದ ಉಳಿದ ಭಾಗಗಳು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. 1824ರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನಿಂದ ಪ್ರಬಲ ಪ್ರತಿರೋಧ ಎದುರಾದರೂ, ಅದು ಹೆಚ್ಚು ಸಮಯ ನಿಲ್ಲಲಿಲ್ಲ. ಭಾರತದ ಒಕ್ಕೂಟದಲ್ಲಿ ವಿಲೀನ ಆಗುವವರೆಗೂ ಮೈಸೂರು ಸಂಸ್ಥಾನ ಅಸ್ತಿತ್ವದಲ್ಲಿಲ ಇತ್ತು.
ಭಾರತಕ್ಕೆ ಸ್ವಾತಂತ್ರ ಬಂದ ಕೆಲವು ವರ್ಷಗಳ ನಂತರ, 1956ರ ನವೆಂಬರ್ 1ರಂದು ಭಾಷಾವಾರು ಪ್ರಾಂತ್ಯಗಳ ವಿಲೀನವಾಗಿ, ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ನಂತರ 1973ರ ನವೆಂಬರ್ 1ರಂದು ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಅಧಿಕೃತವಾಯಿತು.
ಇದನ್ನೂ ಓದಿ: Kannada Rajyotsava: ಒಮ್ಮೆ ನೋಡಲೇಬೇಕಾದ ಕರ್ನಾಟಕದ ವಿಶ್ವ ಪರಂಪರೆ ತಾಣಗಳಿವು