Site icon Vistara News

ಸ್ಮಶಾನಕ್ಕೆ ಸಾಗಿಸುತ್ತಿದ್ದ ಮೃತದೇಹ ತಡೆದ ಪೊಲೀಸರು ಪೋಸ್ಟ್‌ ಮಾರ್ಟಂಗೆ ಕೊಂಡೊಯ್ದರು!

ಬಾಲಕರ ಸಾವು

ಶಿವಮೊಗ್ಗ: ಗ್ರಾಮಸ್ಥರು ಮೃತ ವ್ಯಕ್ತಿಯ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದರು. ಆದರೆ, ಮಾರ್ಗಮಧ್ಯೆ ಎದುರಾದ ಪೊಲೀಸರು ಶವವನ್ನು ಚಟ್ಟದಿಂದ ಕೆಳಗಿಳಿಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದ ಸಮೀಪದ ಮಾರುತಿ ಕ್ಯಾಂಪ್‌ನಲ್ಲಿ ಇಂಥದ್ದೊಂದು ಪ್ರಸಂಗ ನಡೆದಿದೆ. ಅಂತ್ಯಕ್ರಿಯೆಗೆ ಬಂದ ಗ್ರಾಮಸ್ಥರಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು.

ಮಾರುತಿ ಕ್ಯಾಂಪ್‌ನ ವಿಠ್ಠಲ ಎಂಬುವರು ಮೃತ ವ್ಯಕ್ತಿ. ಬುಧವಾರ ಬೆಳಗ್ಗೆ ವಿಠ್ಠಲನು ಸ್ನೇಹಿತನೊಬ್ಬನ ಜೊತೆಗೆ ಲಕ್ಕಿನಕೊಪ್ಪ ಕಾಡಿಗೆ ತೆರಳಿದ್ದ. ಆದರೆ, ವಿಠಲ ಅಲ್ಲಿಂದ ವಾಪಸಾಗಲಿಲ್ಲ. ಅಲ್ಲಿ ಮೃತಪಟ್ಟಿರುವ ಸುದ್ದಿ ತಿಳಿದ ಗ್ರಾಮಸ್ಥರು ವಿಠ್ಠಲ ಮೃತದೇಹವನ್ನ ಗ್ರಾಮಕ್ಕೆ ತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಅಷ್ಟರಲ್ಲಿ ಮತ್ತೊಂದು ತಿರುವು ಪಡೆದಿದೆ.

ಕಾಡಿಗೆ ತೆರಳಿದ್ದ ವಿಠ್ಠಲ‌ ಮತ್ತವನ ಸ್ನೇಹಿತ ಕಂಠಪೂರ್ತಿ ಮದ್ಯ ಸೇವಿಸಿ ಅಲ್ಲೇ ಮಲಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಸ್ನೇಹಿತ ಅಲ್ಲಿಂದ ಎದ್ದು ಬಂದಿದ್ದಾಗಿ ಹೇಳಿಕೊಂಡಿದ್ದಾನೆ. ಆದರೆ, ಮಲಗಿದ್ದಲ್ಲಿಯೇ ವಿಠಲ ಮೃತಪಟ್ಟಿದ್ದಾನೆ ಎಂದು ಹೇಳಲಾಗಿತ್ತು. ಗ್ರಾಮಸ್ಥರೊಬ್ಬರು ಕಾಡಿಗೆ ತೆರಳಿದಾಗ ವಿಠಲನ ಶವ ಪತ್ತೆಯಾಗಿದೆ. ಆತನ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ. ಅತಿಯಾದ ಕುಡಿತದಿಂದ ಮೃತಪಟ್ಟಿರಬಹುದು ಎಂದು ಕುಟುಂಬಸ್ಥರು ಭಾವಿಸಿ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರೊಂದಿಗೆ ಸಿದ್ಧತೆ ಮಾಡಿಕೊಂಡಿದ್ದರು. ಶವವನ್ನು ಚಟ್ಟದ ಮೇಲೆ ಮಲಗಿಸಿ ಸ್ಮಶಾನಕ್ಕೆ ಸಾಗಿಸುತ್ತಿದ್ದರು.

ಅಷ್ಟರಲ್ಲಿ ಗ್ರಾಮಸ್ಥರೊಬ್ಬರು ವಿಠ್ಠಲನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತುಂಗಾನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಅಂತ್ಯಸಂಸ್ಕಾರವನ್ನು ತಡೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮರುಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದಾರೆ.

ಇದನ್ನೂ ಓದಿ: ‌ಕುಟುಂಬದ ವೀಕೆಂಡ್‌ ಸಂಭ್ರಮಕ್ಕೆ ರಕ್ತತರ್ಪಣ, ಒಟಿಪಿ ಹೆಸರಲ್ಲಿ ಶುರುವಾದ ಜಗಳದಲ್ಲಿ ಶವವಾಗಿ ಹೋದ ಟೆಕ್ಕಿ

Exit mobile version