Site icon Vistara News

Budget Session: ಪರಿಷತ್‌ನಲ್ಲಿ ಹಿಂದು ಧಾರ್ಮಿಕ ವಿಧೇಯಕ ತಿರಸ್ಕಾರ; ರಾಜ್ಯ ಸರ್ಕಾರಕ್ಕೆ ಮುಖಭಂಗ

The Religious Institutions and Charitable Endowments (Amendment) Bill

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಹಿಂದು ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ-2024 ಅನ್ನು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು ಶುಕ್ರವಾರ ಮಂಡನೆ (Budget Session) ಮಾಡಿದ್ದು, ವಿಧೇಯಕದಲ್ಲಿನ ಕೆಲವು ಅಂಶಗಳಿಗೆ ಬಿಜೆಪಿ ಸದಸ್ಯರು ತೀವ್ರ ಅಕ್ಷೇಪ ವ್ಯಕ್ತಪಡಿಸಿದರು. ದೇಗುಲಗಳ ನಿವ್ವಳ ಆದಾಯದಲ್ಲಿ ಶೇ.10 ನಿಧಿ ಸಂಗ್ರಹ ಮಾಡುವುದು ಸರಿಯಲ್ಲ. ಈ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಕೊನೆಗೆ ವಿಧೇಯಕ ತಿರಸ್ಕಾರವಾಗಿದ್ದರಿಂದ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ.

ಚರ್ಚೆ ವೇಳೆ ಬಿಜೆಪಿ, ಜೆಡಿಎಸ್‌ ಸದಸ್ಯರಿಂದ ವಿಧೇಯಕಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ನಂತರ ವಿಧೇಯಕವನ್ನು ಧ್ವನಿಮತಕ್ಕೆ ಹಾಕಲು ಉಪ ಸಭಾಪತಿ ಸೂಚಿಸಿದರು. ಆದರೆ, ಬಿಲ್ ವಿರುದ್ಧ ಬಿಜೆಪಿ-ಜೆಡಿಎಸ್ ಸದಸ್ಯರು ಮತ ಹಾಕಿದ್ದರಿಂದ ಬಿಲ್‌ ತಿರಸ್ಕಾರಗೊಂಡಿತು.

ಇದಕ್ಕೂ ಮುನ್ನಾ ವಿಧೇಯಕದ ಬಗ್ಗೆ ಮಾತನಾಡಿದ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರು, 2003ರಿಂದ ವಿಧೇಯಕ ಜಾರಿಯಲ್ಲಿದೆ. 2003ರ ಮೇ 1 ರಿಂದ ದೇವಸ್ಥಾನಗಳಿಂದ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಈಗ ಇರುವ ನಿಯಮಗಳ ಪ್ರಕಾರ 8 ಕೋಟಿ ಸರ್ಕಾರಕ್ಕೆ ಸಲ್ಲಿಕೆ ಆಗುತ್ತಿದೆ. 2011ರಲ್ಲಿ ರಲ್ಲಿ ಬಿ.ವಿ. ಆಚಾರ್ಯ ಅವರು ಸಚಿವರಾಗಿದ್ದಾಗ ತಿದ್ದುಪಡಿ ತರಲಾಗಿತ್ತು. ಈಗಿನ‌ ಸಾಮಾನ್ಯ ಸಂಗ್ರಹಣ ನಿಧಿ ಯಾವುದೇ ಧಾರ್ಮಿಕ ಕೆಲಸ ಮಾಡಲು ಸಾಕಾಗುವುದಿಲ್ಲ. ಹೊಸ ನಿಯಮದಿಂದ 60 ಕೋಟಿ ಸಂಗ್ರಹ ಆಗುತ್ತಿದೆ. ಇದರಿಂದ ಸಿ ದರ್ಜೆಯ ದೇವಸ್ಥಾನಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

34 ಸಾವಿರ ಸಿ ದರ್ಜೆಯ ದೇವಸ್ಥಾನಗಳಲ್ಲಿ 40 ಸಾವಿರಕ್ಕಿಂತ ಹೆಚ್ಚು ಅರ್ಚಕರಿದ್ದಾರೆ. 34,165 ದೇವಸ್ಥಾನಗಳ ಅರ್ಚಕರ ಮನೆ ಕಟ್ಟಲು ಅನುದಾನ ನೀಡುತ್ತೇವೆ. ಅರ್ಚಕರ ಮಕ್ಕಳ ಶಾಲಾ ಕಾಲೇಜು ಅಧ್ಯಯನಕ್ಕೆ ಸ್ಕಾಲರ್‌ಶಿಪ್ ನೀಡಲು ನಿರ್ಧರಿಸಿದ್ದೇವೆ. ಇದಕ್ಕೆ 5 ಕೋಟಿ ಹಣ ಮೀಸಲಿಡುತ್ತೇವೆ. ಅರ್ಚಕರು ಮೃತಪಟ್ಟರೆ 2 ಲಕ್ಷ ಹಣ ನೀಡುತ್ತೇವೆ. ಅರ್ಚಕರಿಗೆ ವಿಮೆ ಕೂಡ ಮಾಡಲು ತೀರ್ಮಾನಿಸಿದ್ದೇ,ವೆ ಅದಕ್ಕೆ 7 ಕೋಟಿ ಬೇಕು ಎಂದರು.

25 ಕೋಟಿ ರೂ.ಗಳನ್ನು ಸಿ ದರ್ಜೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮೀಸಲಿಡುತ್ತೇವೆ. ಅರ್ಚಕರು, ನೌಕರರು, ದೇವಸ್ಥಾನಗಳ ಅಭಿವೃದ್ಧಿಗೆ ಹಣ ಮೀಸಲಿಡುತ್ತೇವೆ. ಈ ಹಣವನ್ನು ಸಿ ಗ್ರೇಡ್ ದೇವಸ್ಥಾನಗಳಿಗೆ ಮಾತ್ರ ಮೀಸಲಿಡುತ್ತೇವೆ ಎಂದು ಸಚಿವರು ತಿಳಿಸಿದರು.

ವಿಧೇಯಕದ ಕೆಲವು ಅಂಶಗಳಿಗೆ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿ, ನಿವ್ವಳ ಆದಾಯದಲ್ಲಿ ಶೇ.10 ನಿಧಿ ಸಂಗ್ರಹ ಮಾಡುವುದು ಸರಿಯಲ್ಲ. 100 ಕೋಟಿ ಸಂಗ್ರಹವಾದರೆ, 10 ಕೋಟಿ ಸರ್ಕಾರಕ್ಕೆ ಕೊಡಬೇಕು. ನಿವ್ವಳ ಖರ್ಚು ವೆಚ್ಚ ತೆಗೆದು ಅದರಲ್ಲಿ ಶೇ. ತೆಗೆದುಕೊಂಡರೆ ಸರಿ. ಆದರೆ ಇಡೀ ಆದಾಯದಲ್ಲಿ ಶೇ.10 ಪಡೆಯುವುದು ಸರಿಯಲ್ಲ. ಅರ್ಚಕರು, ಸಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ 200 ಕೋಟಿ ನೀಡಲಿ ಎಂದರು.

ಈ ವೇಳೆ ಹಿಂದಿನ ಸರ್ಕಾರಗಳು ಹಣ ಕೊಡಲಿಲ್ವಲ್ಲ ಎಂದು ರಾಮಲಿಂಗ ರೆಡ್ಡಿ ಹೇಳಿದರು. ಸಾಮಾನ್ಯ ನಿಧಿ ಸಂಗ್ರಹಣ ಮಾಡಿದ ಹಣ ಸರ್ಕಾರಕ್ಕೆ ಬರುವುದಿಲ್ಲ, ಅದು ರಾಜ್ಯ ಧಾರ್ಮಿಕ
ಪರಿಷತ್‌ಗೆ ಬರುತ್ತದೆ ಎಂದು ಹೇಳಿದರು.

ಬಿಜೆಪಿ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ದೇವಸ್ಥಾನಗಳಿಂದ ಶೇ.10 ಹಣ ಪಡೆಯುವುದು ಬಿಟ್ಟು ಬಿಡಿ, ರಾಜ್ಯ ಸರ್ಕಾರಕ್ಕೆ 60 ಕೋಟಿ ಯಾವ ದೊಡ್ಡ ಮೊತ್ತ ಅಲ್ಲ. ಅಲ್ಪಸಂಖ್ಯಾತ ಸಮುದಾಯಕ್ಕೆ 100-200 ಕೋಟಿ ಕೊಟ್ಟ ಹಾಗೇ ಹಿಂದು ದೇವಸ್ಥಾನಗಳಿಗೆ 350 ಕೋಟಿ ಕೊಡಿ. ಆಗ ಸಿ ಗ್ರೇಡ್ ದೇವಸ್ಥಾನಗಳಿಗೆ ಬದಲಾವಣೆ ತರಬಹುದು ಎಂದರು.

ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಶೇ. 10 ನಿಧಿ ಸಂಗ್ರಹಕ್ಕೆ ನಮ್ಮ ವಿರೋಧ ಇದೆ. ಬಿಲ್‌ನ ಉಳಿದ ವಿಷಯಕ್ಕೆ ನಮ್ಮ ವಿರೋಧವಿಲ್ಲ. ವಿರೋಧ ಇರುವ ಅಂಶ ವಾಪಸ್ ಪಡೆಯದೇ ಇದ್ದರೆ ಧ್ವನಿ ಮತಕ್ಕೆ ಹಾಕಿ ಎಂದು ಆಗ್ರಹಿಸಿದರು.

ಇದನ್ನೂ ಓದಿ | 40 percent commission: ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿಕೆಶಿಗೆ‌ ಖುದ್ದು ಹಾಜರಾಗಲು ಸಮನ್ಸ್; ಶ್ರೀರಾಮುಲುಗೆ ಸಂಕಷ್ಟ

ಕ್ಷಣ ಕ್ಷಣಕ್ಕೂ ಜಟಾಪಟಿ ಉಂಟಾಗಿದ್ದರಿಂದ ವಿರೋಧ ಪಕ್ಷಗಳ ಒತ್ತಡಕ್ಕೆ ಕೊಂಚ ಮೆತ್ತಗಾದ ರಾಮಲಿಂಗಾರೆಡ್ಡಿ ಅವರು, ಬಿಲ್ ಅನ್ನು ಮತ್ತೊಮ್ಮೆ ಸೋಮವಾರ ಮಂಡಿಸುತ್ತೇನೆ ಎಂದು ಹೇಳಿದರು. ಇದಕ್ಕೆ ಉಪ ಸಭಾಪತಿ ಪ್ರಾಣೇಶ್ ಆಕ್ಷೇಪ ವ್ಯಕ್ತಪಡಿಸಿ, ಒಮ್ಮೆ ಪರ್ಯಾಲೋಚನೆಗೆ ತೆಗೆದುಕೊಂಡ ಬಿಲ್ ಮುಂದೂಡಲು ಸಾಧ್ಯವಿಲ್ಲ ಎಂದರು. ಬೇಕಿದ್ದರೆ ಸೋಮವಾರವೇ ಮಂಡನೆ ಮಾಡಿ ಎಂದು ಬಿಜೆಪಿ ಸದಸ್ಯರೂ ಹೇಳಿದರು. ಆದರೆ, ನಂತರ ನಡೆದ ಧ್ವನಿ ಮತದಲ್ಲಿ ವಿಧೇಯಕ ತಿರಸ್ಕಾರಗೊಂಡಿತು.

Exit mobile version