Site icon Vistara News

ಮಾನವೀಯತೆ ಮರೆತ ಮಗ-ಸೊಸೆ; 70 ವರ್ಷದ ವೃದ್ಧೆಯ ಶೌಚಾಲಯದಲ್ಲಿಟ್ಟರು!

70 ವರ್ಷದ ವೃದ್ದೆಯನ್ನು

ಮಂಗಳೂರು: ಜಗತ್ತು ಬಹಳವೇ ಸ್ವಾರ್ಥವಾಗುತ್ತಿವೆಯೇ..? ಮಾನವೀಯತೆಗೆ ಇಲ್ಲಿ ಬೆಲೆಯೇ ಇಲ್ಲವೇ..? ಸಂಬಂಧಗಳು ಯಾರಿಗೂ ಬೇಕಿಲ್ಲವೇ…? ಎಂಬ ಪ್ರಶ್ನೆಯನ್ನು ಇತ್ತೀಚೆಗೆ ನಡೆಯುತ್ತಿರುವ ಹಲವು ಪ್ರಕರಣಗಳು ಹುಟ್ಟುಹಾಕುತ್ತಿವೆ. ಅಮ್ಮ ಎಂದರೆ ಹಾಗೇ ಮಕ್ಕಳ ಲಾಲನೆ ಪಾಲನೆ ಸಹಿತ ಅವರ ಮಲವನ್ನೂ ಬಳಿಯುತ್ತಾಳೆ. ಆದರೆ, ಕೆಲವು ಮಕ್ಕಳು ದೊಡ್ಡವರಾದ ಮೇಲೆ ಅಮ್ಮನ ತ್ಯಾಗವನ್ನು, ಸೇವೆಯನ್ನು ಮರೆತೇ ಬಿಡುತ್ತಾರೆ. ಈಗ ಹೆತ್ತಾಕೆಯನ್ನು ೨ ವರ್ಷದಿಂದ ಶಾಚಾಲಯದಲ್ಲಿಟ್ಟ ಪಾಪಿ ಮಗ-ಸೊಸೆ ಪ್ರಕರಣವೊಂದು ಬೆಳಕಿಗೆ ಬಂದಿದೆ.

ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ 70 ವರ್ಷದ ವೃದ್ಧೆ ಗಿರಿಜಾ ಎಂಬುವವರನ್ನು ಮಗ-ಸೊಸೆ ಸೇರಿ ಶೌಚಾಲಯದಲ್ಲಿ ಇರಿಸಿದ್ದಾರೆ. ಗಿರಿಜಾ ಅವರು ಎರಡು ವರ್ಷದ ಹಿಂದೆ ಮನೆಯಲ್ಲಿ ಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ದರು.

ಅಂದಿನಿಂದ ಗಿರಿಜಾರಿಗೆ ಓಡಾಡಲು ಸಾದ್ಯವಾಗುತ್ತಿಲ್ಲ. ಈ ಕಾರಣದಿಂದ ಅವರ ಮಗ ಹರಿರಾಂ ಮತ್ತು ಸೊಸೆ ಪೂಜಾ ಗಿರಿಜಾರನ್ನು ಶೌಚ ಗೃಹದಲ್ಲಿ ಇಟ್ಟಿದ್ದಾರೆ. ಇವರ ಈ ಕೃತ್ಯ ಇತ್ತೀಚೆಗೆ ಅಕ್ಕಪಕ್ಕದ ನಿವಾಸಿಗಳ ಗಮನಕ್ಕೆ ಬಂದಿದ್ದರಿಂದ ನಾಗರಿಕ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ನಾಗರಿಕರ ಹೆಲ್ಪ್‌ಲೈನ್‌ ಸಿಬ್ಬಂದಿ ಬಂಟ್ವಾಳ ಟೌನ್ ಪೊಲೀಸರ ಜತೆ ಬೆಂಜನಪದವು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಪೊಲೀಸರ ಜತೆ ಸ್ಥಳಕ್ಕೆ ಭೇಟಿ ನೀಡಿದಾಗ ವೃದ್ಧೆ ಗಿರಿಜಾ ಅವರನ್ನು ಶೌಚಾಲಯದಲ್ಲಿ ಇರಿಸಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರನ್ನು ರಕ್ಷಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಬಂಟ್ವಾಳ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಲತಂದೆಯಿಂದ ರೇಪ್, ತಾಯಿಯಿಂದ ಮಗಳ ಅಂಡ ಮಾರಾಟ: ತಮಿಳುನಾಡಿನಲ್ಲಿ ರಾಕ್ಷಸೀ ಕೃತ್ಯ

Exit mobile version