ಬೆಳಗಾವಿ: ರಾಜ್ಯದ ನೂತನ ನಾಲ್ಕು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ವ್ಯಕ್ತಿಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಕುರಿತ ನಿರ್ಣಯಕ್ಕೆ ವಿಧಾನಸಭೆಯಲ್ಲಿ (Belagavi Winter Session) ಸರ್ವಾನುಮತದ ಅಂಗೀಕಾರ ನೀಡಲಾಗಿದೆ. ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ವಿಜಯಪುರ ನಿಲ್ದಾಣಗಳಿಗೆ ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲು ನಿರ್ಧರಿಸಲಾಗಿದೆ.
ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿಡಲು ರಾಜ್ಯಸರ್ಕಾರ ತೀರ್ಮಾನ ಮಾಡಿದೆ.
ವಿಮಾನ ನಿಲ್ದಾಣಗಳಿಗೆ ನಾಮಕರಣ ವಿಚಾರವನ್ನು ಸಚಿವ ಎಂ.ಬಿ.ಪಾಟೀಲ್ ಅವರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಸುನಿಲ್ ಕುಮಾರ್ ಅವರು, ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಿ ಎಂದು ಮನವಿ ಮಾಡಿದರು. ಈ ವೇಳೆ ವೀರ ರಾಣಿ ಅಬ್ಬಕ್ಕ ದೇವಿ ಹೆಸರೂ ಕೇಳಿ ಬರುತ್ತಿದೆ ಎಂದು ಸ್ಪೀಕರ್ ಖಾದರ್ ಹೇಳಿದರು. ಆಗ ಈ ನಾಲ್ಕು ಹೆಸರುಗಳನ್ನು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಇದನ್ನೂ ಓದಿ | Karnataka Holiday List 2024: ರಾಜ್ಯದ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿ ಬಿಡುಗಡೆ
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ
ಚರ್ಚೆಯಲ್ಲಿ ಅರವಿಂದ್ ಬೆಲ್ಲದ್ ಅವರು ಮಾತನಾಡಿ, ಸರ್ಕಾರದ ನಿರ್ಧಾರವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ. ನೀವು ಶಿಫಾರಸು ಮಾಡಿ, ನಾವು ಹೆಸರನ್ನು ಅಂತಿಮ ಮಾಡಿಸುತ್ತೇವೆ ಎಂದರು. ಈ ವೇಳೆ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಿ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ ಸದನದಲ್ಲಿ ಆಡಳಿತ-ವಿಪಕ್ಷ ಶಾಸಕರ ನಡುವೆ ಗದ್ದಲ ಶುರುವಾಯಿತು.
ನಂತರ ನಾಲ್ಕು ವಿಮಾನ ನಿಲ್ದಾಣಗಳಿಗೆ ಐತಿಹಾಸಿಕ ಪುರುಷರ ಹೆಸರಿಡಲು ಸರ್ವಾನುಮತದಿಂದ ನಿರ್ಣಯ ಮಾಡಲಾಗಿದೆ. ಕೇಂದ್ರಕ್ಕೆ ಶಿಫಾರಸು ಕಳುಹಿಸಲು ನಿರ್ಧಾರ ಮಾಡಲಾಗಿದೆ ನಿರ್ಣಯವನ್ನು ಸ್ಪೀಕರ್ ಯು.ಟಿ. ಖಾದರ್ ಓದಿದರು.
ಸ್ಮಾರಕಗಳ ಅಭಿವೃದ್ಧಿಗೆ ಒತ್ತಾಯ
ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ನೂರು ವರ್ಷ ಕಳೆದ ಹಿನ್ನೆಲೆಯಲ್ಲಿ ಸ್ಮಾರಕಗಳ ಅಭಿವೃದ್ಧಿ ಮಾಡಬೇಕು ಎಂದು ಶಾಸಕ ಅಭಯ್ ಪಾಟೀಲ್ ಅವರು ಖಾಸಗಿ ಬಿಲ್ ಮೂಲಕ ಒತ್ತಾಯ ಮಾಡಿದರು. 200 ಕೋಟಿ ರೂ. ಅನುದಾನ ಬಿಡುಗಡೆಗೆ ಮನವಿ ಮಾಡಿದರು. ಇದಕ್ಕೆ ಸಚಿವ ಶಿವರಾಜ್ ತಂಗಡಗಿ ಉತ್ತರಿಸಿ, ಖಂಡಿತವಾಗಿ ಸ್ಮಾರಕಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ಕೂಡ ಈ ವಿಚಾರವಾಗಿ ಸಹಕಾರ ಕೊಡಬೇಕು ಎಂದರು. ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಖಾಸಗಿ ಬಿಲ್ ಅಂಗೀಕಾರ ಮಾಡಲಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ