ಬೆಳಗಾವಿ: ಬರ ನಿರ್ವಹಣೆ ವೈಫಲ್ಯ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ವತಿಯಿಂದ ನಗರದ ಮಾಲಿನಿ ಸಿಟಿಯಲ್ಲಿ ಬುಧವಾರ ಸಂಜೆ ಬೃಹತ್ ಪ್ರತಿಭಟನೆ (BJP Protest) ನಡೆಸಲಾಯಿತು. ರಾಜ್ಯದಲ್ಲಿ ತೀವ್ರ ಬರಗಾಲದಿಂದ (Drought Situation) ಸಂಕಷ್ಟದಲ್ಲಿರುವ ರೈತರ ಮೇಲೆ ಈ ಸರ್ಕಾರ ಬರೆ ಎಳೆಯುತ್ತಿದೆ, ಬರಗಾಲ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಅವರು, ಹಣ, ಹೆಂಡ, ತೋಳ್ಬಲ ಬಳಸಿ, ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರಬಹುದು ಅಂತ ಕಾಂಗ್ರೆಸ್ ಭಾವಿಸುತ್ತಿತ್ತು. ಆದರೆ, ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆ ಫಲಿತಾಂಶ ಕಾಂಗ್ರೆಸ್ ಆಲೋಚನೆಯನ್ನು ಬದಲಾಯಿಸಿದೆ. ಸಿಎಂ ಸಿದ್ದರಾಮಯ್ಯನವರು ಇನ್ನು 25 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ಬರ ಪರಿಹಾರವನ್ನು ಪ್ರಕಟಿಸದಿದ್ದರೆ ರಾಜ್ಯಾದ್ಯಂತ ನಾನು ಹೋರಾಟ ಮಾಡುವೆ ಎಂದು ಎಚ್ಚರಿಕೆ ನೀಡಿದರು.
ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುವ ನಿಮ್ಮ ನೀತಿ ಎಷ್ಟರಮಟ್ಟಿಗೆ ಸರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಅವರು, ರಾಜ್ಯದ ಜನರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ರೈತರಿಗೆ ನಮ್ಮ ಕಾಲದಲ್ಲಿ ನೀಡಿದ ವಿದ್ಯುತ್ ಸೇವೆ ಮುಂದುವರಿಸದಿದ್ದರೆ ದೊಡ್ಡ ಹೋರಾಟ ಮಾಡುತ್ತೇವೆ. ಕಳಸ-ಬಂಡೂರಿ ಯೋಜನೆ ಒಂದು ಪೈಸೆ ಕೂಡ ಸರ್ಕಾರ ನೀಡಿಲ್ಲ. ನೀರಾವರಿ ಯೋಜನೆಗಳಿಗೆ ನೀಡುವ ಅನುದಾನ ಬಂದ್ ಆಗಿದೆ. ಈ ಸರ್ಕಾರದ ನೀತಿಗಳ ವಿರುದ್ಧ ಹೋರಾಡಲು ನಾನು ಸದಾ ಸಿದ್ಧ. ನಾವೆಲ್ಲರೂ ಒಂದಾಗಿ ಈ ಸರ್ಕಾರದ ಮೂಗಿಡಿದು ಕೆಲಸ ಮಾಡಿಸಿಕೊಳ್ಳೊಣ ಎಂದು ಕರೆ ನೀಡಿದರು.
ಅಲ್ಪಸಂಖ್ಯಾತರರಿಗೆ ಹಣ ನೀಡಲು ಯಾವುದೇ ಅಭ್ಯಂತರ ಇಲ್ಲ, ಆದರೆ ನಾಡಿಗೆ ಅನ್ನ ನೀಡುವ ರೈತನಿಗೆ ನೀವು ಹಣ ನೀಡಬೇಕಿತ್ತು. ನಾವೆಲ್ಲರೂ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸಜ್ಜಾಗಬೇಕಿದೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಇದನ್ನೂ ಓದಿ | Security Breach in Lok Sabha: ಪ್ರತಾಪ್ ಸಿಂಹಗೆ ಬುದ್ಧಿ ಹೇಳಿ ಎಂದ ಡಿಕೆಶಿ; ತಿರುಗಿಬಿದ್ದ ಬಿಜೆಪಿ
ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ 6 ಸಾವಿರ ಕೊಟ್ಟರೆ ನಾನು 4 ಸಾವಿರ ಕೊಡುತ್ತಿದ್ದೆ. ಅದನ್ನು ನಿಲ್ಲಿಸಿ ದ್ರೋಹ ಬಗೆದಿದ್ದೀರಲ್ಲವೇ? ನಿಮಗೆ ಅಧಿಕಾರಕ್ಕೆ ಮುಂದುವರೆಯಲು ನೈತಿಕ ಹಕ್ಕಿಲ್ಲ. ರೈತರ ಜೀವನದ ಜೊತೆ ಚೆಲ್ಲಾಟ ಸಲ್ಲದು ಎಂದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲೂಟಿ, ಹಗಲು ದರೋಡೆ ಮುಂದುವರಿದಿದೆ ಎಂದ ಅವರು, ತಮ್ಮ ಕಾಲದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೆವು. ಆದರೆ, ಈಗ ಎಲ್ಲ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗಿದೆ. ರೈತವಿರೋಧಿ, ಜನ ವಿರೋಧಿ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಅವರು ಪ್ರಕಟಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಭರವಸೆಗಳನ್ನು ಜನರಲ್ಲಿ ಮೂಡಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 14 ಬಜೆಟ್‌ಗಳನ್ನು ಮಂಡಿಸಿರುವ ಸಿದ್ದರಾಮಯ್ಯ ರೈತರ ಪರಿಹಾರಕ್ಕೆ ಸೂಚನೆ ನೀಡಿಲ್ಲ. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುತ್ತೀನಿ ಅಂತಾರೆ. ಆದರೆ ರೈತರಿಗೆ ಏನೂ ಇಲ್ಲ. ಪ್ರತಿ ಎಕರೆಗೆ 25 ಸಾವಿರ ರೂ. ಕೊಡಬೇಕು ಅಂತ ಅಧಿವೇಶನದಲ್ಲಿ ಕೇಳಿದ್ದೇವೆ. ಆದರೆ ಕಣ್ಣಿದ್ದೂ ಕುರುಡರಂತೆ ಕಿವಿಯಿದ್ದು ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಮಾತನಾಡಿ, ರಾಜ್ಯ ಸರ್ಕಾರ ಬಂದು 6 ತಿಂಗಳು ಕಳೆದಿದೆ. ಭೀಕರ ಬರಗಾಲ ಇದ್ದರೂ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಹುಸಿಯಾಗಿದೆ. 14 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಪ್ರಕಟಿಸಿದ ಸಿಎಂ ಅವರು, ರೈತರ ಬಗ್ಗೆ ಮಾತನಾಡಿಲ್ಲ. ಕಬ್ಬು ಬೆಳೆಯುವ ರೈತರಿಗೆ ಸೇರಿ ಎಲ್ಲ ರೈತರಿಗೆ ಪರಿಹಾರ ಕೊಡಬೇಕಿದೆ. ಆದರೆ, ಸರ್ಕಾರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎಂದು ಆಕ್ಷೇಪಿಸಿದರು. ಯಡಿಯೂರಪ್ಪ ಅವರು ಸುವರ್ಣ ಸೌಧ ನಿರ್ಮಿಸಿದ್ದರು. ಇಲ್ಲಿನ ಸಮಸ್ಯೆಗಳ ಪರಿಹಾರದ ನಿರೀಕ್ಷೆ ಅವರದಾಗಿತ್ತು. ಆದರೆ, ಸಿದ್ದರಾಮಯ್ಯನವರು ರೈತರನ್ನು ಕಡೆಗಣಿಸಿದ್ದಾರೆ ಎಂದರು.
ರೈತರ ಸಾಲಮನ್ನಾ ಮಾಡಬೇಕು. ಹೊಸ ಸಾಲವನ್ನು ಕೊಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದ ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಆದರೆ, ಮೊದಲು ಸಾಲ ವಸೂಲಿಯನ್ನು ನಿಲ್ಲಿಸಬೇಕು. ಈ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮುಂದುವರಿಯಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನೂ ಬಿಜೆಪಿ- ಜೆಡಿಎಸ್ ಸೇರಿ ಗೆಲ್ಲಬೇಕಿದೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದರೂ ಉತ್ತರ ಕರ್ನಾಟಕಕ್ಕಾಗಿ ಸಿದ್ದರಾಮಯ್ಯನವರು ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ? ಸಿಎಂ ಮುಲ್ಲಾಗಳಿಗೆ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದಾರೆ. ರೈತರಿಗೆ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಮಕ್ಕಳ ದತ್ತು ತೆಗೆದುಕೊಂಡರೆ ಸರ್ಕಾರಕ್ಕೆ ತೆರಿಗೆ ಕೊಡಬೇಕಿದೆ. 60 ತೆರಿಗೆಗಳನ್ನು ಏರಿಸಿದ್ದಾರೆ. ತೆರಿಗೆ, ತೆರಿಗೆಗಳ ಬಿಲ್ ಮಂಜೂರು ಮಾಡುತ್ತಿದ್ದಾರೆ ಎಂದರು.
ವಿದ್ಯುತ್, ಹಾಲು, ಮದ್ಯ ಸೇರಿ ಎಲ್ಲ ವಸ್ತುಗಳ ದರ ಏರಿಕೆಯಾಗಿದೆ. ಉಚಿತ ನೆಪದಲ್ಲಿ ಮೋಸದ ಸರಕಾರ ಇದು ಎಂದು ಆರೋಪಿಸಿದರು. ಸರಕಾರದ ಖಜಾನೆ ಖಾಲಿಯಾಗಿದೆ ಎಂದು ಟೀಕಿಸಿದರು. ಯಡಿಯೂರಪ್ಪ ಅವರು ರೈತರಿಗೆ 25 ಸಾವಿರ ಕೊಟ್ಟರೆ ಈ ಸರಕಾರ 2 ಸಾವಿರ ಕೊಡುತ್ತಿದೆ. ಈ ಸರಕಾರಕ್ಕೆ ನಾಚಿಕೆ ಇಲ್ಲ ಎಂದು ಆಕ್ಷೇಪಿಸಿದರು. ಸದನದಲ್ಲಿ ಸಿದ್ದರಾಮಯ್ಯ ಗರ ಬಡಿದಂತೆ ಕುಳಿತಿರುತ್ತಾರೆ. ಈ ಕೆಟ್ಟ ಸರಕಾರ ತೊಲಗಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ | Security breach : ದಾಳಿಕೋರರಿಗೆ ಪಾಸ್ ಕೊಟ್ಟ ಪ್ರತಾಪ್ ಪದಚ್ಯುತಿಗೆ ಕಾಂಗ್ರೆಸ್ ಆಗ್ರಹ
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಶಶಿಕಲಾ ಜೊಲ್ಲೆ, ಬಿ.ಶ್ರೀರಾಮುಲು, ಆರಗ ಜ್ಞಾನೇಂದ್ರ, ಸುನೀಲ್‍ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಸಂಸದರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪಕ್ಷದ ರಾಜ್ಯ, ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು