Site icon Vistara News

HD Kumaraswamy: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿಯಲ್ಲಿ ರಾಜ್ಯ 10 ವರ್ಷ ಹಿಂದಕ್ಕೆ: ಕುಮಾರಸ್ವಾಮಿ ವಾಗ್ದಾಳಿ

The state is 10 years behind in development after the Congress government came says Minister HD Kumaraswamy

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ವಿಷಯದಲ್ಲಿ ರಾಜ್ಯವು ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.

ಅಂಕಿ ಅಂಶ, ಹಗರಣಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರಹಾರ ನಡೆಸಿದ ಸಚಿವರು, ಈ ಇಂಥ ಜನ ವಿರೋಧಿ ಸರ್ಕಾರದ ವಿರುದ್ಧ ಜೆಡಿಎಸ್ ಬಿಜೆಪಿ ಮೈತ್ರಿಕೂಟ ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಜಂಟಿಯಾಗಿ ಹೋರಾಟ ನಡೆಸಲಿದೆ ಎಂದು ಘೋಷಣೆ ಮಾಡಿದರು.

ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ನಡೆದ ಎನ್‌ಡಿಎ ಮೈತ್ರಿಕೂಟದ ಸಮನ್ವಯ ಸಭೆಯ ನಂತರ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೊಂದಿಗೆ ಮಾಧ್ಯಮಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Education News: ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದ 148 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಎಬಿಬಿ ಇಂಡಿಯಾ ನೆರವು

ಈ ಸರ್ಕಾರ ಆರಂಭದಿಂದಲೂ ಹಗರಣಗಳಲ್ಲಿಯೇ ಮುಳುಗಿದೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ವರ್ಗಾವಣೆ ದಂಧೆ, ಪರಿಶಿಷ್ಟ ಜಾತಿ ವರ್ಗದ ಹಣ ದುರ್ಬಳಕೆ, ರೈತರ ಆತ್ಮಹತ್ಯೆ ಪ್ರಕರಣಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ನಮ್ಮ ಮೈತ್ರಿಕೂಟ ಸದನದಲ್ಲಿ ಹೋರಾಟ ನಡೆಸಲಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಮುಖ್ಯಮಂತ್ರಿಯಿಂದಲೇ ಕಾನೂನು ಬಾಹಿರ ಚಟುವಟಿಕೆ

ಮುಡಾ ಪ್ರಕರಣ ವಿಚಾರದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿಯಿಂದಲೇ ಕಾನೂನು ಬಾಹಿರ ಚಟುವಟಿಕೆ ನಡೆದಿದೆ. 62 ಕೋಟಿ ರೂ. ಪರಿಹಾರ ಯಾವ ಆಧಾರದಲ್ಲಿ ಅವರು ಕೇಳಿದರು? ಎಷ್ಟು ಜನ ಭೂಮಿ ಕಳೆದುಕೊಂಡವರಿಗೆ ಇವರು ಯಾವ ರೀತಿಯಲ್ಲಿ ಸರ್ಕಾರದಲ್ಲಿ ಪರಿಹಾರ ಕೊಟ್ಟಿದ್ದಾರೆ? ಅರ್ಕಾವತಿ ರೀಡೂ ಹಗರಣ ಮಾಡಿದರಲ್ಲ, ಅಲ್ಲಿ ₹ 300 ರಿಂದ ₹ 400 ಕೋಟಿ ನಡೆದಿತ್ತಲ್ಲ, ಆ ಲೆಕ್ಕಾಚಾರದಲ್ಲಿ 62 ಕೋಟಿ ರೂ. ಕೇಳಿರಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಒಂದು ಕಡೆ ಮುಡಾ, ಮತ್ತೊಂದು ಕಡೆ ವಾಲ್ಮೀಕಿ ಹಗರಣ, ದಲಿತ ಕುಟುಂಬದವರಿಗೆ ನೆರವು ಕೊಡುವಂತ ಹಣವನ್ನ ಲೂಟಿ ಮಾಡಿ ಸ್ವೆಚ್ಚಾಚಾರವಾಗಿ ಬಳಸಿಕೊಂಡಿದ್ದಾರೆ. ಇತರೆ ಎಲ್ಲಾ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬರಗಾಲ ಸಮಸ್ಯೆ, ಮಳೆಯ ಅವಾಂತರ, ಡೆಂಗ್ಯೂದಿಂದ ಸಾವನ್ನಪ್ಪಿದ ಜನರ ಬಗ್ಗೆ, ಕಾನೂನು ಸುವ್ಯವಸ್ಥೆ, ಸಚಿವ ಎಚ್.ಕೆ.ಪಾಟೀಲ್ ಅವರು ಸರ್ಕಾರಕ್ಕೆ ಬರೆದ ಪತ್ರದ ಬಗ್ಗೆ, ಹಾಲಿನ ದರ ಏರಿಕೆ ಮಾಡಿ ರೈತರಿಗೆ ಹಣ ನೀಡದೆ ಇರುವುದು.. ಹೀಗೆ ಹತ್ತಾರು ವಿಷಯಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

ಸರ್ಕಾರದ ನಡವಳಿಕೆ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ತೀರ್ಮಾನಿಸಿದ್ದೇವೆ. ಬಡವರಿಗೆ ಗ್ಯಾರಂಟಿ ಎನ್ನುತ್ತಾರೆ, ಆ ಗ್ಯಾರಂಟಿಗಳನ್ನು ನೋಡಿಕೊಳ್ಳಲು ಒಬ್ಬ ಅಧ್ಯಕ್ಷ, ಅದರ ಮೂಲಕ ದುಂದುವೆಚ್ಚ. ಇದು ಈ ಸರ್ಕಾರದ ಹಣೆಬರಹ. ಗ್ಯಾರಂಟಿಗಳಿಗೆ ಹಣ ಕೊಟ್ಟಿದ್ದರಿಂದ ರಾಜ್ಯದ ಅಭಿವೃದ್ಧಿಗೆ ಹಣ ಇಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಯ ರಾಯರೆಡ್ಡಿ ಅವರೇ ಹೇಳಿದ್ದಾರಲ್ಲವೇ ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ: Samsung Galaxy: ಸ್ಯಾಮ್‌ಸಂಗ್‌ನಿಂದ 2 ಹೊಸ ಫೋಲ್ಡೆಬಲ್ ಫೋನ್‌ ಬಿಡುಗಡೆ; ವಿಶೇಷತೆ ಏನೇನು?

ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್ ನೇತೃತ್ವದಲ್ಲಿ ನಮ್ಮ ಎಲ್ಲಾ ಶಾಸಕರು ಚರ್ಚೆ ಮಾಡಿದ್ದೇವೆ. ಎರಡೂ ಸದನದಲ್ಲಿ ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

Exit mobile version