ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೂ ಇಬ್ಬರು ಬಂಧಿಸಿದ್ದಾರೆ. ಅವರೇ ಬೆಳ್ಳಾರೆ ಪಲ್ಲಿಮಜಲು ನಿವಾಸಿಗಳಾದ ಸದ್ದಾಂ(32) ಮತ್ತು ಹಾರಿಸ್ (42). ಜುಲೈ ೨೬ರಂದು ನಡೆದ ಈ ಕೊಲೆಗೆ ಸಂಬಂಧಿಸಿ ಜುಲೈ ೨೮ರಂದು ಬೆಳ್ಳಾರೆಯ ಶಫೀಕ್ ಮತ್ತು ಸವಣೂರಿನ ಮಹಮ್ಮದ್ ಝಾಕಿರ್ ಎಂಬವರನ್ನು ಬಂಧಿಸಲಾಗಿತ್ತು.
ಸದ್ದಾಂ ಮತ್ತು ಹಾರಿಸ್ ಅವರನ್ನು ಬಂಧಿಸಿರುವುದು ಬೆಂಗಳೂರಿನಲ್ಲಿ. ಕೊಲೆ ನಡೆದ ದಿನದ ವಿದ್ಯಮಾನಗಳು, ಬಂಧಿತ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮತ್ತು ವಿಚಾರಣೆಯ ನಾನಾ ಹಂತಗಳಲ್ಲಿ ದೊರೆತ ಮಾಹಿತಿಗಳನ್ನು ಆಧರಿಸಿ ಆರೋಪಿಗಳು ಬೆಂಗಳೂರಿನಿಂದ ಬಂದು ಈ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿತ್ತು. ಆರೋಪಿಗಳು ಊರಿನವರೇ ಆಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನುವ ಮಾಹಿತಿ ಇತ್ತು.
ಸುಳ್ಯ ಪೊಲೀಸರು ಬೆಂಗಳೂರಿನ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿ ಆರೋಪಿಗಳ ಪತ್ತೆಯಲ್ಲಿ ನೆರವು ನೀಡಬೇಕು ಎಂದು ಮನವಿ ಮಾಡಿದ್ದರು. ಅಂತೆಯೇ ಅವರನ್ನು ಹಿಡಿಯಲು ವ್ಯೂಹ ಹೆಣೆಯಲಾಯಿತು.
ಆರೋಪಿಗಳಿಬ್ಬರು ಬೆಂಗಳೂರಿನ ಒಂದು ಬೇಕರಿಯಲ್ಲಿ ಕೆಲಸಕ್ಕಿರುವುದು ಪೊಲೀಸರಿಗೆ ಗೊತ್ತಾಗಿತ್ತು. ಅವರನ್ನು ಅಲ್ಲೇ ಹೋಗಿ ಬಂಧಿಸಬಹುದಾಗಿತ್ತು. ಆದರೆ, ಹಾಗೆ ಮಾಡಿ ಸೀನ್ ಕ್ರಿಯೇಟ್ ಮಾಡುವುದು ಬೇಡ ಎಂದು ಒಂದು ತಂತ್ರವನ್ನು ಹೆಣೆದರು.
ಪಿಜಿಯೊಂದರ ಕೋಣೆಯಲ್ಲಿ ಕುಳಿತ ಪೊಲೀಸರು, ಆರೋಪಿಗಳು ಕೆಲಸ ಮಾಡುತ್ತಿದ್ದ ಬೇಕರಿಗೆ ಕೇಕ್ ಕಳುಹಿಸುವಂತೆ ಆರ್ಡರ್ ಮಾಡಿದ್ದರು. ಆರೋಪಿಗೆ ಕೇಕ್ ಡೆಲಿವರಿ ಮಾಡುವ ಕೆಲಸವಿದ್ದರೂ ಆವತ್ತು ಪೊಲೀಸರಿಗೆ ಕೇಕ್ ತಂಡವನ್ನು ತಂದುಕೊಟ್ಟಿದ್ದು ಅವನಲ್ಲ. ಮೂರು ಮೂರು ಬಾರಿ ಆರ್ಡರ್ ಮಾಡಿದರೂ ಬೇರೆಯವರೇ ಡೆಲಿವರಿ ಮಾಡುತ್ತಿದ್ದರು.. ಹೀಗಾಗಿ ಮತ್ತೆ ಮತ್ತೆ ಆರ್ಡರ್ ಮಾಡಿದರು. ಕೊನೆಗೆ ಅವನು ಕೇಕ್ ತಂದು ಕೊಡುವುದನ್ನು ಕಾಯುತ್ತಾ ಕುಳಿತರು. ಅಂತೂ ಕೊನೆಗೆ ಬಂದೇ ಬಿಟ್ಟ.
ಆತ ಬಂದು ಕೇಕ್ ಕೊಡುತ್ತಿದ್ದಂತೆಯೇ ಗ್ರಾಹಕರ ಸೋಗಿನಲ್ಲಿ ಪಿಜಿಯಲ್ಲಿ ಕಾಯುತ್ತಿದ್ದ ಪೊಲೀಸರು ಆತನನ್ನು ಹಿಡಿದುಕೊಂಡು ಬಿಟ್ಟರು. ಅವನ ಮೂಲಕ ಮತ್ತೊಬ್ಬನನ್ನು ಕರೆಸಿಕೊಂಡು ಬಂಧಿಸಿದರು. ಸುಳ್ಯ ಪೊಲೀಸರು ಅವರಿಬ್ಬರನ್ನು ಊರಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಅವರಿಬ್ಬರಿಂದ ಸಾಕಷ್ಟು ಮಾಹಿತಿ ಪಡೆದ ಬಳಿಕ ಮಂಗಳವಾರ ಬಂಧನವನ್ನು ದಾಖಲಿಸಿದ್ದಾರೆ.
ಈ ನಡುವೆ, ಸದ್ದಾಂ ಮತ್ತು ಹಾರಿಸ್ ಕೊಲೆಗಾರರೇ, ಕೊಲೆಗೆ ಸಹಾಯ ಮಾಡಿದವರೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತ ತಲಶ್ಶೇರಿಯಲ್ಲಿ ಅಬೀದ್ ಎಂಬಾತನನ್ನು ಬಂಧಿಸಿ ಕರೆತಂದಿದ್ದಾರೆ ಎಂಬ ಮಾಹಿತಿ ಇದೆ. ಆತನ ಬಂಧನವನ್ನು ಇನ್ನೂ ಅಧಿಕೃತಗೊಳಿಸಿಲ್ಲ.
Praveen Nettaru| ಪ್ರವೀಣ್ ಹತ್ಯೆ ಪ್ರಕರಣ, ಇನ್ನೂ ಇಬ್ಬರ ಬಂಧನ, ಯಾರಿವರು?