ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಕ್ಕೆ (Hijab Row) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ವಿಭಾಗೀಯ ಪೀಠವು ಭಿನ್ನ ತೀರ್ಪು ನೀಡಿದ್ದರಿಂದ ಕರ್ನಾಟಕದಲ್ಲಿ ಈಗಲೂ ನಿಷೇಧ ಮುಂದುವರಿದಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದ್ದು, ಪ್ರಕರಣವನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮುಸ್ಲಿಮ್ ವಿದ್ಯಾರ್ಥಿನಿಯರ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಶೀಘ್ರವೇ ತ್ರಿಸದಸ್ಯ ಪೀಠ ರಚನೆಗೆ ಸಮ್ಮತಿಸಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಮುಸ್ಲಿಮ್ ವಿದ್ಯಾರ್ಥಿನಿಯರ ಪರವಾಗಿ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ವಾದ ಮಂಡಿಸಿ, ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಇರುವುದರಿಂದ ವಿದ್ಯಾರ್ಥಿನಿಯರಿಗೆ ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ. ಪರೀಕ್ಷೆಗಳು ಹತ್ತಿರದಲ್ಲಿವೆ. ಮಕ್ಕಳು ಖಾಸಗಿ ಕಾಲೇಜುಗಳಲ್ಲಿ ಕಲಿಯುತ್ತಿದ್ದರೂ, ಪರೀಕ್ಷೆ ಬರೆಯಲು ಸರ್ಕಾರಿ ಕಾಲೇಜು ಕೇಂದ್ರಗಳಿಗೆ ಹೋಗಬೇಕಾಗುತ್ತದೆ, ಅಲ್ಲಿ ಹಿಜಾಬ್ ನಿಷೇಧಿಸಲಾಗಿದೆ. ಹಾಗಾಗಿ, ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿ, ಅನುವು ಮಾಡಿಕೊಡಬೇಕು ಎಂದು ಕೇಳಿಕೊಂಡರು.
ಪೀಠ ರಚನೆಗೆ ಓಕೆ
ಕಳೆದ ಶೈಕ್ಷಣಿಕ ವರ್ಷದಲ್ಲೂ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಪ್ರಸಕ್ತ ಸಾಲಿನಲ್ಲೂ ಅದೇ ರೀತಿಯಾಗಬಾರದು. ಮಕ್ಕಳಿಗೆ ಅನುಕೂಲ ಮಾಡುವುದಕ್ಕಾಗಿ ಶೀಘ್ರವೇ ಪ್ರಕರಣವನ್ನು ಮರು ವಿಚಾರಣೆಗೆ ನ್ಯಾಯಾಲಯವು ಮುಂದಾಗಬೇಕು ಎಂದು ಮೀನಾಕ್ಷಿ ಅರೋರಾ ಅವರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಡಿ ವೈ ಚಂದ್ರಚೂಡ್ ಅವರು, ಮುಸ್ಲಿಮ್ ವಿದ್ಯಾರ್ಥಿನಿಯರ ಬೇಡಿಕೆಯನ್ನು ಪರಿಗಣಿಸಲಾಗುವುದು. ಶೀಘ್ರವೇ ಈ ಪ್ರಕರಣದ ವಿಚಾರಣೆಗೆ ತ್ರಿಸದಸ್ಯ ಪೀಠವನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.
ಈ ಹಿಂದೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಹಿಜಾಬ್ ನಿಷೇಧ ಕುರಿತು ಭಿನ್ನ ತೀರ್ಪು ನೀಡಿತ್ತು. ಹಾಗಾಗಿ, ಪ್ರಕರಣವನ್ನು ಉನ್ನತ ಪೀಠಕ್ಕೆ ಶಿಫಾರಸು ಮಾಡಿತ್ತು. ಆದರೆ, ಈವರೆಗೆ ಪೀಠ ರಚನೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಪ್ರಕರಣವನ್ನು ತ್ವರಿತ ವಿಚಾರಣೆಗೆ ಮತ್ತೆ ಸುಪ್ರೀಂ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ಏನಿದು ವಿವಾದ?
ಕರ್ನಾಟಕದಲ್ಲಿ ಪದವಿ ಪೂರ್ವ ಕಾಲೇಜ್‌ಗಳು, ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.
ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ಸತತವಾಗಿ ವಿಚಾರಣೆ ನಡೆಸಿ, ತೀರ್ಪನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು. ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿದೆ. ಕರ್ನಾಟಕ ಸರ್ಕಾರವು ಫೆಬ್ರವರಿ 5ರಂದು ಆದೇಶ ಹೊರಡಿಸಿ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು.
ಇದನ್ನೂ ಓ ಹಿಜಾಬ್ ವಿವಾದ ಬಳಿಕ ಉಡುಪಿಯಲ್ಲಿ ಹೆಚ್ಚಾಯ್ತು ಮುಸ್ಲಿಂ ಕಾಲೇಜುಗಳಿಗೆ ಬೇಡಿಕೆ
ಹಲವು ದಿನಗಳವರೆಗೆ ಸುಪ್ರೀಂ ಕೋರ್ಟ್ ಹಿಜಾಬ್ ವಿಚಾರಣೆ ನಡೆಸಿತ್ತು. ಹಿಜಾಬ್ ಪ್ರಕರಣ ತೀವ್ರವಾಗುವುದರ ಹಿಂದೆ ಪಿಎಫ್‌ಐ ಕೈವಾಡ ಇದೆ ಎಂದು ಕರ್ನಾಟಕ ಸರ್ಕಾರ ತಿಳಿಸಿತ್ತು. ಮುಸ್ಲಿಂ ಬಾಲಕಿಯರು ಹಿಜಾಬ್ ಧರಿಸುವುದು ಮೂಲ ಹಕ್ಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.