Site icon Vistara News

ವಿಸ್ತಾರ ಮೀಡಿಯಾದ ಉತ್ಸಾಹಿ ತಂಡ…

Vistara news Web desk

ವಿಸ್ತಾರ ನ್ಯೂಸ್‌…
ಇದು ಕನ್ನಡ ಮಾಧ್ಯಮ ಲೋಕಕ್ಕೆ ಹೊಸ ಸ್ವರೂಪ ನೀಡುವ ಉದ್ದೇಶದಿಂದ ರೂಪಿತವಾಗಿರುವ ಸಂಸ್ಥೆ. ನಿಖರ ಮತ್ತು ಜನಪರ ಸುದ್ದಿಯನ್ನು ಒದಗಿಸುವುದು ನಮ್ಮ ಧ್ಯೇಯ. ಸತ್ಯವನ್ನು ಎತ್ತಿ ಹಿಡಿಯುತ್ತೇವೆ, ಸಮಾಜದ ಸರ್ವ ಜನರ ಆಶೋತ್ತರಗಳಿಗೆ ಧ್ವನಿಯಾಗುತ್ತೇವೆ ಎಂಬುದು ನಾವು ನೀಡುವ ವಾಗ್ದಾನ.

ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಲು, ಕ್ರಿಯಾಶೀಲ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ನೆರವಾಗಿ ನಿಲ್ಲುವ ಜೊತೆಗೆ ಮಧ್ಯಮ ವರ್ಗದ ಕನಸುಗಳಿಗೆ, ಉದ್ಯಮಿಗಳ ಮಹತ್ವಾಕಾಂಕ್ಷಿ ಹೆಜ್ಜೆಗಳಿಗೆ, ಯುವಜನರ ಸಬಲೀಕರಣಕ್ಕೆ ಸ್ಫೂರ್ತಿಯ ತಾಣವಾಗಿ ವಿಸ್ತಾರ ನ್ಯೂಸ್‌ ನಿಮ್ಮೊಂದಿಗಿರಲಿದೆ.

ಅತ್ಯುತ್ಕೃಷ್ಟ ಸೇವಾ ಅರ್ಹತೆ, ಕೌಶಲಗಳನ್ನು ಹೊಂದಿರುವ 450ಕ್ಕೂ ಅಧಿಕ ಸಿಬ್ಬಂದಿಯಿರುವ ಪವರ್‌ಫುಲ್‌ ಟೀಮ್ ನಮ್ಮದು. ಹಿರಿಯ, ಅನುಭವಿಗಳ ಜತೆಗೆ ಸೃಜನಶೀಲ ಯುವ ಪ್ರತಿಭಾವಂತರು ನಮ್ಮ ತಂಡದ ಭಾಗವಾಗಿದ್ದಾರೆ. ಉತ್ಸಾಹಿ ಹೊಸ ಪ್ರತಿಭೆಗಳೂ ನಮ್ಮೊಂದಿಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆ ಮಾತ್ರವಲ್ಲ ತಾಲೂಕು, ಹೋಬಳಿ ಮಟ್ಟದಲ್ಲೂ ನೆಲೆ ನಿಂತಿರುವ ವರದಿಗಾರರ ತಂಡ ನಮ್ಮ ಶಕ್ತಿ.  ದೇಶದಲ್ಲೇ ಅತ್ಯಂತ ಉತ್ಕೃಷ್ಟವಾದ, ವಿಶಿಷ್ಟವಾಗಿರುವ ಸ್ಟುಡಿಯೋ, ಸಂಪೂರ್ಣ ಸ್ವಯಂಚಾಲಿತ ವಿಧಾನ ಹೊಂದಿರುವ ತಾಂತ್ರಿಕ ವ್ಯವಸ್ಥೆ ನಮ್ಮ ಹೆಗ್ಗಳಿಕೆ. 

ಸಶಕ್ತ ಮಾಧ್ಯಮ ಸಂಸ್ಥೆಯೊಂದನ್ನು ಕಟ್ಟಬೇಕೆಂಬ ಕನಸು ಹೊತ್ತು ಸಾಕಾರಗೊಳಿಸಿದ ಮೂವರು ಸಾಧಕರು ನಮ್ಮ ಸಂಸ್ಥೆಯ ಆಧಾರ ಸ್ತಂಭಗಳು.

ಶ್ರೀ ಹರಿಪ್ರಕಾಶ್ ಕೋಣೆಮನೆ, ಸಿಇಒ ಮತ್ತು ಪ್ರಧಾನ ಸಂಪಾದಕರು

ಮಾಧ್ಯಮ ಲೋಕದಲ್ಲಿ 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಹರಿಪ್ರಕಾಶ್‌ ಕೋಣೆಮನೆಯವರು ಸಮಕಾಲೀನ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳ ಹರಿಕಾರ ಎಂದೇ ಹೆಸರಾದವರು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಹರಿಪ್ರಕಾಶ್‌, ಅಪಾರ ಪರಿಶ್ರಮದ ಮೂಲಕ ಜೀವನದಲ್ಲಿ ಹಂತ ಹಂತವಾಗಿ ಮೇಲೇರುತ್ತ ಬಂದವರು. ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ ಪ್ರಧಾನ ಸಂಪಾದಕರಾಗಿ ಅನುಭವ ಹೊಂದಿರುವ ಇವರು ರಾಜ್ಯದ ಎರಡು ಕನ್ನಡ ದಿನಪತ್ರಿಕೆಗಳನ್ನು ಮುನ್ನಡಿಸಿದ ರೀತಿ ಮಾದರಿ. ಕಾಲಕಾಲಕ್ಕೆ ಮಾಧ್ಯಮ ರಂಗದಲ್ಲಾಗುತ್ತಿರುವ ಬದಲಾವಣೆಯನ್ನು ಅರಿತು ಅದಕ್ಕೆ ತಕ್ಕಂತೆ ತಂಡಕ್ಕೆ ಮಾರ್ಗದರ್ಶನ ಮಾಡಿ ತಮ್ಮ ಪ್ರೇರಣಾದಾಯಕ ನಾಯಕತ್ವದಿಂದ ಸಂಸ್ಥೆಯನ್ನು ಯಶಸ್ಸಿನೆಡೆಗೆ ನಡೆಸುವಲ್ಲಿ ಹರಿಪ್ರಕಾಶ್‌ ಸಿದ್ಧಹಸ್ತರು. ಜನಪರ ಆಲೋಚನೆ, ದೂರದೃಷ್ಟಿಯ ಜತೆಗೆ ನಿಭಾಯಿಸಿದ ಎಲ್ಲ ಹುದ್ದೆಗಳಲ್ಲೂ ಹೊಸತನ, ವಿಭಿನ್ನ ಪ್ರಯೋಗಕ್ಕೆ ಹೆಸರಾದವರು. ಜನತೆಯೊಂದಿಗೆ ನಂಟನ್ನು ಬೆಸೆಯುವ ಹತ್ತಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಿ ಮಾಧ್ಯಮಗಳು ಕಾಲಕಾಲಕ್ಕೆ ರೂಪಾಂತರ ಹೊಂದಬೇಕೆಂದು ನಿರೂಪಿಸಿದವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರಸ್ಥಾನ ಹೊಂದಿರುವ ವಿಶ್ವದರ್ಶನ ಎಜುಕೇಷನ್‌ ಸೊಸೈಟಿ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದಲ್ಲೂ ಶ್ರೀಯುತರು ಕೊಡುಗೆ ಸಲ್ಲಿಸುತ್ತಿದ್ದಾರೆ. ಇದೀಗ ತಮ್ಮದೇ ಮಾಧ್ಯಮ ಸಂಸ್ಥೆಯನ್ನು ಕಟ್ಟುವ ಮೂಲಕ ನೂರಾರು ಪತ್ರಕರ್ತರಿಗೆ ಉದ್ಯೋಗ ನೀಡುವುದರ ಜತೆಗೆ ರಾಜ್ಯದ ಜನತೆಗೆ ನಿಖರ, ಜನಪರ ಸುದ್ದಿಯನ್ನು ನೀಡುವ ಪಣ ತೊಟ್ಟಿರುತ್ತಾರೆ.

ಶ್ರೀ ಎಚ್‌.ವಿ. ಧರ್ಮೇಶ್‌, ಚೇರ್ಮನ್‌ ಹಾಗೂ ಎಂಡಿ

ಧರ್ಮೇಶ್‌ ಅವರು  ದೂರದೃಷ್ಟಿಯುಳ್ಳ ನಾಯಕ. ಕೋಲಾರದಲ್ಲಿ ಜನಿಸಿದ ಇವರು ಕಿರಿಯ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದು ತಮ್ಮ ಸ್ವಸಾಮರ್ಥ್ಯದಿಂದ ವಾಣಿಜ್ಯೋದ್ಯಮಿಯಾಗಿ ಬೆಳೆದವರು. ಸಾಬೂನು ತಯಾರಿಕೆಯಿಂದ ಆರಂಭಿಸಿ ಆಹಾರ ಸಂಸ್ಕರಣೆ, ಸಾಫ್ಟ್‌ವೇರ್‌, ರಿಯಲ್‌ ಎಸ್ಟೇಟ್‌, ಪುಷ್ಪೋದ್ಯಮ ಮತ್ತು ಶಿಕ್ಷಣ ಸಂಸ್ಥೆ ಹೀಗೆ ಹಲವಾರು ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಎಎಸಿ ಬ್ಲಾಕ್‌ ಉತ್ಪಾದಿಸುವ ಮೆಗಾಲೈಟ್‌ ಸಂಸ್ಥೆಯ ಮೂಲಕ ನೂರಾರು ಜನರಿಗೆ ಉದ್ಯೋಗ ಒದಗಿಸಿರುವ ಶ್ರೀಯುತರು,  ಉದ್ಯೋಗವಕಾಶ ಸೃಷ್ಟಿಸಿ ಜನರ ಬದುಕನ್ನು ಬದಲಾಯಿಸಬಹುದು ಎಂಬ ಬಲವಾದ ನಂಬಿಕೆ ಹೊಂದಿರುವವರು.  ಭಾರತ ದೇಶ ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಮತ್ತು ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತಾನೂ ಕೈಜೋಡಿಸಬೇಕು ಎನ್ನುವ ಮಹದಾಸೆ ಹೊಂದಿರುವ ಶ್ರೀ ಧರ್ಮೇಶ್‌ರವರು ಅದರ ಸಾಕಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದೀಗ ಮಾಧ್ಯಮ ಲೋಕಕ್ಕೆ ಕಾಲಿಟ್ಟಿರುವ ಇವರು ಜನಪರ ಹಾಗೂ ಸಮಾಜಮುಖಿ ಸುದ್ದಿಗಳನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿ ಹೊಂದಿದ್ದಾರೆ.

ಶ್ರೀ ಶ್ರೀನಿವಾಸ ಹೆಬ್ಬಾರ್‌, ನಿರ್ದೇಶಕರು

ಉತ್ತರ ಕನ್ನಡ ಜಿಲ್ಲೆಯವರಾದ ಶ್ರೀಯುತರು ಸದಾ ಸಮಾಜಮುಖಿ ಚಿಂತನೆ ಹಾಗೂ ಕಾರ್ಯಗಳ ಮೂಲಕ ಸಮಾಜಕ್ಕೆ ಅಗಾಧ ಕೊಡುಗೆ ಸಲ್ಲಿಸುತ್ತಿದ್ದಾರೆ. ವಾಣಿಜ್ಯೋದ್ಯಮಿಯಷ್ಟೇ ಅಲ್ಲದೆ ಸಾಮಾಜಿಕ ಸೇವಾಕರ್ತರಾಗಿ ಪರಿಸರ, ಕೃಷಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿದ್ದಾರೆ. ಇವರು  ಶಿರಸಿ ಜೀವಜಲ ಕಾರ್ಯಪಡೆಯ ಅಧ್ಯಕ್ಷರಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಹತ್ತಾರು ಕೆರೆ, ನೀರಿನ ಮೂಲಗಳನ್ನು ಪುನರುಜ್ಜೀವನಗೊಳಿಸಿ ಅಂತರ್ಜಲ ಪುನಶ್ಚೇತನಕ್ಕೆ ಹಲವು ರೀತಿಯಲ್ಲಿ ಕೊಡುಗೆ ಸಲ್ಲಿಸುತ್ತಿರುವುದರಿಂದ ಇವರನ್ನು ಕೆರೆ ಹೆಬ್ಬಾರ್‌, ಆಧುನಿಕ ಭಗೀರಥ ಎಂದೂ ಪ್ರೀತಿಯಿಂದ ಕರೆಯಲಾಗುತ್ತದೆ. ವಿಜಯಲಕ್ಷ್ಮೀ ಟ್ರಾನ್ಸ್‌ಪೋರ್ಟ್‌ ಸಂಸ್ಥೆಯ ಮಾಲೀಕರಾಗಿರುವ ಇವರು ಅಡಕೆ ಹಾಗೂ ಸಾಂಬಾರ ಪದಾರ್ಥಗಳನ್ನು ದೇಶದ ವಿವಿಧೆಡೆಗೆ ಪೂರೈಕೆ ಮಾಡುವ ಜತೆಗೆ ವಿದೇಶಕ್ಕೆ ರಫ್ತು ಮಾಡುತ್ತಾರೆ.  ಹೆಬ್ಬಾರರು ಗೋವುಗಳ ಸಂರಕ್ಷಣೆಗೆ ದುಡಿಯುತ್ತಿದ್ದು ತೊಂದರೆಗೊಳಗಾಗುವ ಗೋವುಗಳ ಚಿಕಿತ್ಸೆಗೆ ʼಅನಿಮಲ್‌ ಆಂಬುಲೆನ್ಸ್‌ʼಗಳನ್ನು ನಿರ್ವಹಣೆ ಮಾಡುತ್ತಿರುವುದಲ್ಲದೆ ಬಡವರಿಗೆ ಉಚಿತ ಆಂಬುಲೆನ್ಸ್‌ ಸೇವೆ ಒದಗಿಸುತ್ತಿದ್ದಾರೆ. ಹಲವು ದೇಗುಲಗಳ ಪುನರುಜ್ಜೀವನ, ಸ್ವಚ್ಛತಾ ಅಭಿಯಾನ, ಕುಡಿಯುವ ನೀರಿನ ಉಚಿತ ಪೂರೈಕೆ, ರಸ್ತೆಗಳಿಗೆ ಸೌರದೀಪಗಳ ಅಳವಡಿಕೆ ಹೀಗೆ ಇವರ ಸಮಾಜಮುಖಿ ಕಾರ್ಯಗಳು ಅಪಾರ. ಬಡ ಮಕ್ಕಳ ಶಿಕ್ಷಣಕ್ಕೆ ಸದ್ದಿಲ್ಲದೆ ನೆರವು ನೀಡುವ ಇವರು  ವಿಶ್ವದರ್ಶನ ಎಜುಕೇಷನ್‌ ಸೊಸೈಟಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಶರತ್‌ ಎಂ.ಎಸ್‌.

ಎಲೆಕ್ಟ್ರಾನಿಕ್‌ ಹಾಗೂ ಪ್ರಿಂಟ್‌ ಮೀಡಿಯಾದಲ್ಲಿ 16 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಶರತ್‌, ನ್ಯೂಸ್‌‌ ಚಾನೆಲ್‌, ಪ್ರಿಂಟ್‌ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಪರಿಣತರು. ಫ್ರೀಡಂ ಆಪ್‌ ಕಂಟೆಂಟ್‌ ವಿಭಾಗದ ಮುಖ್ಯಸ್ಥರಾಗಿಯೂ ತಂಡವನ್ನು ಮುನ್ನಡೆಸಿದವರು. ಈಗಾಗಲೇ ನ್ಯೂಸ್‌ ಚಾನೆಲ್‌ ಅನ್ನು ಕಟ್ಟಿದ ಅನುಭವಿರುವ ಇವರು ಅತಿ ಕಿರಿಯ ವಯಸ್ಸಿನಲ್ಲೇ ಸಂಪಾದಕ ಹುದ್ದೆಯನ್ನು ನಿರ್ವಹಿಸಿದವರು. ಸುದ್ದಿಗೆ ವಿಭಿನ್ನ ದೃಷ್ಟಿಕೋನ ನೀಡುವುದರಲ್ಲಿ ಸಿದ್ಧಹಸ್ತರಾಗಿರುವ ಶರತ್‌, ಡಿಜಿಟಲ್‌ ಮಾಧ್ಯಮ ಕ್ಷೇತ್ರದಲ್ಲೂ ಎಕ್ಸ್‌ಪರ್ಟ್‌. ಇದೀಗ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯೂಟಿವ್‌ ಎಡಿಟರ್‌.

ಪರಶುರಾಮ್‌ ಡಿ.

ನ್ಯೂಸ್‌ ಚಾನೆಲ್‌ ಹಾಗೂ ಎಂಟರ್‌ಟೈನ್‌ಮೆಂಟ್‌ ಫೀಲ್ಡ್‌ನಲ್ಲಿ ಸುಮಾರು 18 ವರ್ಷ ಅನುಭವ ಹೊಂದಿರುವ ಇವರು, ಬಿಗ್‌ಬಾಸ್‌ ರಿಯಾಲಿಟಿ ಶೋನ  ಆನ್‌ಲೈನ್‌ ಡೈರೆಕ್ಟರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.  ಟೆಕ್ನಿಕಲ್‌ ಮತ್ತು ಮ್ಯಾನೇಜ್ಮೆಂಟ್‌ ವಿಭಾಗಗಳಲ್ಲಿ ಸಮರ್ಥ ನಿರ್ವಹಣಾ ನೈಪುಣ್ಯ ಹೊಂದಿರುವ ಪರಶುರಾಮ್‌, ಇದೀಗ ವಿಸ್ತಾರ ಮೀಡಿಯಾದ ಸಿಒಒ ಹಾಗೂ ಸಿಟಿಒ ಆಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ  ನ್ಯೂಸ್‌ ಚಾನೆಲ್‌ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ನವನೀತ್‌ ಸಿ.ಎಂ.

ನ್ಯೂಸ್‌ ಮತ್ತು ಎಂಟರ್‌ಟೈನ್‌ಮೆಂಟ್‌ ಚಾನೆಲ್‌ಗಳ ಮಾರ್ಕೆಟಿಂಗ್‌ ವಿಭಾಗದಲ್ಲಿ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನವನೀತ್‌, ಹಲವು ವಾಹಿನಿಗಳಲ್ಲಿ ಬ್ಯುಸಿನೆಸ್‌ ಹೆಡ್‌ ಆಗಿದ್ದರು.

ಭಾರತದ ಹಲವಾರು ಪ್ರಮುಖ ಏಜೆನ್ಸಿ ಮತ್ತು ಬ್ರ್ಯಾಂಡ್‌ಗಳ ಜೊತೆ  ನಿಕಟ ಸಂಪರ್ಕ ಹೊಂದಿರುವ ಇವರು ವಿಸ್ತಾರ ಮೀಡಿಯಾದ ಮಾರ್ಕೆಟಿಂಗ್‌ ವೈಸ್‌ ಪ್ರೆಸಿಡೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಂಜುನಾಥ್‌ ಪಿ

ನ್ಯೂಸ್‌ ಚಾನೆಲ್‌, ಪ್ರಿಂಟ್‌ ಮೀಡಿಯಾದಲ್ಲಿ 16 ವರ್ಷಗಳ ಅನುಭವ ಹೊಂದಿರುವ ಮಂಜುನಾಥ್‌, ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಎಪಿಸೋಡ್‌ ಡೈರೆಕ್ಟರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೆಲಸ ಮಾಡಿರುವ ಮಂಜುನಾಥ್‌ ರಾಜ್ಯದ ಎರಡು ಪ್ರಮುಖ ನ್ಯೂಸ್ ಚಾನೆಲ್‌ಗಳಲ್ಲಿ ಆರಂಭಿಕ ಹಂತದಿಂದಲೂ ತೊಡಗಿಸಿಕೊಂಡವರು. ಇವರು ಇದೀಗ ವಿಸ್ತಾರ ನ್ಯೂಸ್‌ ಚಾನೆಲ್‌ನ ಇನ್‌ಪುಟ್‌ ಮತ್ತು ಔಟ್‌ಪುಟ್‌ ವಿಭಾಗಗಳ ಮುಖ್ಯಸ್ಥರು.

ರಮೇಶ್‌ ಕುಮಾರ್‌ ನಾಯಕ್‌

ಮಾಧ್ಯಮ ಕ್ಷೇತ್ರದಲ್ಲಿ 26 ವರ್ಷಗಳ ಸುದೀರ್ಘ ಕಾಲ ಕಾರ್ಯನಿರ್ವಹಿಸುವ ಮೂಲಕ ವರದಿಗಾರಿಕೆ, ಡೆಸ್ಕ್‌ ಸೇರಿದಂತೆ ಸಂಪಾದಕೀಯ ವಿಭಾಗದಲ್ಲಿ ಹಲವು ಮಹತ್ವದ ಹುದ್ದೆಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ಮಾಧ್ಯಮವೊಂದರ ಎಲ್ಲಾ ವಿಭಾಗಗಳನ್ನೂ ಸೂಕ್ಷ್ಮವಾಗಿ ಅರಿತವರು. ಸುದ್ದಿ ಗ್ರಹಿಕೆ, ಅದಕ್ಕೊಂದು ಸ್ಪಷ್ಟ ರೂಪ ಕೊಡುವುದರಲ್ಲಿ ನಿಪುಣರು. ಇದೀಗ ರಮೇಶ್‌ಕುಮಾರ್‌ರವರು ವಿಸ್ತಾರ ನ್ಯೂಸ್‌ನ ಡಿಜಿಟಲ್‌ ಎಡಿಟರ್‌.

ಕಿರಣ್‌ ಕುಮಾರ್‌ ಡಿ.ಕೆ.

ಪ್ರಿಂಟ್‌ ಮತ್ತು ಎಲೆಕ್ಟ್ರಾನಿಕ್‌ ಮೀಡಿಯಾದಲ್ಲಿ 12 ವರ್ಷಗಳ ಅನುಭವ ಹೊಂದಿರುವ ಕಿರಣ್‌ ಕುಮಾರ್‌ ಅತಿ ಕಿರಿಯ ವಯಸ್ಸಿನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ರಾಜ್ಯದ ಹೆಸರಾಂತ ನ್ಯೂಸ್‌ ಚಾನೆಲ್‌ ಹಾಗೂ ದಿನ ಪತ್ರಿಕೆಗಳಲ್ಲಿ ವರದಿಗಾರಿಕೆ ಹಾಗೂ ಡೆಸ್ಕ್‌ನಲ್ಲಿ ಕೆಲಸ ಮಾಡಿರುವುದಲ್ಲದೆ ಹಲವಾರು ಈವೆಂಟ್‌ಗಳನ್ನು ಆಯೋಜಿಸಿದ ಅನುಭವವಿದೆ. ಇದೀಗ ಇವರು ವಿಸ್ತಾರ ನ್ಯೂಸ್‌ನ ಸ್ಪೆಷಲ್‌ ಆಪರೇಷನ್ಸ್‌ ಎಡಿಟರ್‌ ಆಗಿ ಕಾರ್ಯನಿವರ್ಹಿಸುತ್ತಿದ್ದಾರೆ. 

ಇಂಥದ್ದೊಂದು ಆಡಳಿತ ಮಂಡಳಿ, ಪವರ್ಫುಲ್ ಟೀಮ್‌ನ ಮೊದಲ ಕೊಡುಗೆಯಾಗಿ ಇಂದು ವಿಸ್ತಾರ ನ್ಯೂಸ್ ಡಾಟ್ ಕಾಂ ಲೋಕಾರ್ಪಣೆಗೊಳ್ಳುತ್ತಿದೆ. ಮಾಧ್ಯಮ ಜಗತ್ತು ಹಾಗೂ ರಾಜ್ಯದ ಜನತೆ ಕಾತರದಿಂದ ಕಾಯುತ್ತಿರುವ ಸ್ಯಾಟಲೈಟ್ ಟಿವಿ ಚಾನೆಲ್ ಅತ್ಯಂತ ಜತನದಿಂದ ರೂಪುಗೊಳ್ಳುತ್ತಿದೆ. ಸಮರ್ಥ, ಕೌಶಲಭರಿತ ಪಡೆಯೇ ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ.  ಮುಂದಿನ ಕೆಲವೇ ತಿಂಗಳಲ್ಲಿ ವಿಸ್ತಾರ ಎಂಟರ್‌ಟೈನ್‌ಮೆಂಟ್‌ ಮತ್ತು ವಿಸ್ತಾರ ಮ್ಯೂಸಿಕ್ ಚಾನೆಲ್‌ಗಳು ಕನ್ನಡ ನಾಡಿನ ಮನೆ, ಮನಗಳಲ್ಲಿ, ದೇಶ ದೇಶಾಂತರಗಳಲ್ಲಿ ಹೊಸ ತರಂಗಗಳನ್ನು ಸೃಷ್ಟಿಸಲಿವೆ. ಕನ್ನಡ ಮಾಧ್ಯಮ ಲೋಕದಲ್ಲಾಗುತ್ತಿರುವ ಈ ಮಹಾ ಸಾಹಸಕ್ಕೆ ನಿಮ್ಮ ಪ್ರೀತಿಯ ಬೆಂಬಲ ಸದಾ ಇರಲಿ ಎಂದು ಆಶಿಸುತ್ತಿದೆ ವಿಸ್ತಾರ ಬಳಗ.

Exit mobile version