Site icon Vistara News

Dam Water Level | ತುಂಬೋ ಹಂತಕ್ಕೆ ಬಂದಿವೆ ರಾಜ್ಯದ ಪ್ರಮುಖ ಜಲಾಶಯಗಳು

ಜಲಾಶಯಗಳಿಗೆ

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನದಿಗಳು ಹಾಗೂ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಅಪಾರ ಪ್ರಮಾಣದ ಒಳಹರಿವಿನಿಂದ ಡ್ಯಾಂಗಳು ಭರ್ತಿ ಅಂಚಿಗೆ ತಲುಪಿದ್ದು, ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳು ತುಂಬುವ ಹಂತಕ್ಕೆ ಬಂದಿದ್ದು, ಸೋಮವಾರದ ನೀರಿನ ಮಟ್ಟ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ.

ಹೇಮಾವತಿ ಜಲಾಶಯ ಭರ್ತಿಗೆ 2 ಅಡಿ ಮಾತ್ರ ಬಾಕಿ
ಹಾಸನ ಜಿಲ್ಲೆಯ ಹಲವೆಡೆ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸಕಲೇಶಪುರ ಹಾಗೂ ಚಿಕ್ಕಮಗಳೂರು, ಮೂಡಿಗೆರೆಯಲ್ಲೂ ಧಾರಾಕಾರ ಮಳೆ‌ ಹಿನ್ನೆಲೆಯಲ್ಲಿ ಹೇಮಾವತಿ ನದಿಗೆ ಒಳಹರಿವಿನಲ್ಲಿ ಭಾರಿ ಹೆಚ್ಚಳವಾಗಿದ್ದು, ಜಲಾಶಯ ಭರ್ತಿಗೆ ಎರಡು ಅಡಿ ಮಾತ್ರ ಬಾಕಿ ಇದೆ. ಹೇಮಾವತಿ ನದಿಗೆ ಸದ್ಯ 23530 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ 17575 ಕ್ಯೂಸೆಕ್ ಹೊರಹರಿವು ಇದೆ. ಡ್ಯಾಂನ ಗರಿಷ್ಠ ನೀರಿನ ಮಟ್ಟ 2922 ಅಡಿಗಳಿದ್ದು, ಪ್ರಸ್ತುತ 2919.07 ಅಡಿ ನೀರು ಸಂಗ್ರಹಣೆಯಾಗಿದೆ. ಜಲಾಶಯದ ಒಟ್ಟು ನೀರಿನ ‌ಸಂಗ್ರಹ ಪ್ರಮಾಣ 37.103 ಟಿಎಂಸಿ ಇದ್ದು, ಸದ್ಯ ಜಲಾಶಯದಲ್ಲಿ 34.307 ಟಿಎಂಸಿ ನೀರು ಸಂಗ್ರಹಣೆಯಾಗಿದೆ.

ತುಂಗಭದ್ರಾ ಜಲಾಶಯ

ತುಂಗಭದ್ರಾ ಜಲಾಶಯ ಭರ್ತಿಗೆ ಬೇಕು 4.50 ಅಡಿ ನೀರು
ಕೊಪ್ಪಳ ತಾಲೂಕಿನ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಇನ್ನು 4.50 ಅಡಿ ನೀರು ಬಂದರೆ ಭರ್ತಿಯಾಗಲಿದೆ. ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯಕ್ಕೆ 90905 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದ ಒಟ್ಟು ಎತ್ತರ 1633 ಅಡಿ ಇದ್ದು, ಈಗ 1628.45 ಅಡಿ ಮಟ್ಟದಲ್ಲಿ ನೀರು ನಿಂತಿದೆ. ಒಟ್ಟು 105 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ 88.358 ಟಿಎಂಸಿ ನೀರು ಸಂಗ್ರಹವಾಗಿದೆ. ಒಂದೇ ದಿನದಲ್ಲಿ ಜಲಾಶಯಕ್ಕೆ ಹರಿದು 8 ಟಿಎಂಸಿ ನೀರು ಹರಿದು ಬಂದಿದೆ. ಜಲಾಶಯದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಡ್ಯಾಂಗೆ ಆಗಮಿಸುತ್ತಿದ್ದಾರೆ.

ಕೆಆರ್‌ಎಸ್‌ ಜಲಾಶಯ

ಕೆಆರ್‌ಎಸ್ ಜಲಾಶಯ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ಇದ್ದು, ಪ್ರಸ್ತುತ 122.60 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಒಳಹರಿವು 50,467 ಕ್ಯೂಸೆಕ್ ಇದ್ದು, ಹೊರಹರಿವು 72,964 ಕ್ಯೂಸೆಕ್ ಇದೆ. ಡ್ಯಾಂನ ಗರಿಷ್ಠ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ ಇದ್ದು, ಈಗ 46.434 ಟಿಎಂಸಿ ನೀರು ಸಂಗ್ರಹವಾಗಿದೆ.

ಆಲಮಟ್ಟಿ ಜಲಾಶಯ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ) ಜಲಾಶಯದ ಗರಿಷ್ಠ ನೀರಿನ ಮಟ್ಟ 519.60 ಮೀಟರ್‌ ಇದ್ದು, ಪ್ರಸ್ತುತ ನೀರಿನ ಮಟ್ಟ 516.95 ಮೀಟರ್‌ ಇದೆ. ಡ್ಯಾಂನ ಗರಿಷ್ಠ ಸಂಗ್ರಹ ಸಾಮರ್ಥ್ಯ 123.08 ಟಿಎಂಸಿ ಇದ್ದು, ಈಗ 83.852 ಟಿಎಂಸಿ ನೀರು ಸಂಗ್ರಹವಾಗಿದೆ. ಒಳ ಹರಿವು 81910 ಕ್ಯೂಸೆಕ್‌ ಇದ್ದು, ಹೊರ ಹರಿವು 2500 ಕ್ಯೂಸೆಕ್‌ ಇದೆ.

ನವೀಲುತೀರ್ಥ ಜಲಾಶಯ
ಬೆಳಗಾವಿ ಜಿಲ್ಲೆಯ ನವೀಲುತೀರ್ಥ ಜಲಾಶಯದ (ಮಲಪ್ರಭಾ‌ ನದಿ) ಗರಿಷ್ಠ ಮಟ್ಟ 2079.50 ಅಡಿ ಇದ್ದು, ಈಗ 2057.60 ಅಡಿ ನೀರು ಸಂಗ್ರಹವಾಗಿದೆ. ಡ್ಯಾಂಗೆ ಒಳ‌ಹರಿವು 10402 ಕ್ಯೂಸೆಕ್ ಇದ್ದು, ಹೊರ ಹರಿವು 194 ಕ್ಯೂಸೆಕ್ ಇದೆ. ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 37.731 ಟಿಎಂಸಿ ಇದ್ದು, ಪ್ರಸ್ತುತ 14.706 ಟಿಎಂಸಿ ಸಂಗ್ರಹವಾಗಿದೆ.

ರಾಜಾ ಲಖಮಗೌಡ ಜಲಾಶಯ
ಬೆಳಗಾವಿ ಜಿಲ್ಲೆಯ ರಾಜಾ ಲಖಮಗೌಡ ಜಲಾಶಯದ (ಘಟಪ್ರಭಾ ನದಿ) ಗರಿಷ್ಠ ನೀರಿನ ಮಟ್ಟ 2175.00 ಅಡಿ ಇದ್ದು, ಈಗ 2116.033 ಅಡಿ ನೀರು ಸಂಗ್ರಹವಾಗಿದೆ. ಡ್ಯಾಂಗೆ ಒಳ‌ ಹರಿವು 27398 ಕ್ಯೂಸೆಕ್ ಇದ್ದು, ಹೊರ ಹರಿವು 1097 ಕ್ಯೂಸೆಕ್‌ ಇದೆ. ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 51 ಟಿಎಂಸಿ ಇದ್ದು, ಪ್ರಸ್ತುತ 15.527 ಟಿಎಂಸಿ ನೀರು ಸಂಗ್ರಹವಾಗಿದೆ.

ಭದ್ರಾ ಜಲಾಶಯ
ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಇದ್ದು, ಈಗ 174.6 ಅಡಿ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯದ ಒಳಹರಿವು 41645 ಕ್ಯೂಸೆಕ್‌ ಇದ್ದು, ಹೊರಹರಿವು 153 ಕ್ಯೂಸೆಕ್‌ ಇದೆ. ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 71.535 ಟಿಎಂಸಿ ಇದ್ದು, ಪ್ರಸ್ತುತ ಡ್ಯಾಂನಲ್ಲಿ 57.818 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ | Rain News | ಮುಂದುವರಿದ ಮಳೆಯ ಪಿರಿಪಿರಿ, ರೈತರಿಗೆ ಮುಳುವಾದ ಎತ್ತಿನಹೊಳೆ ಕಾಮಗಾರಿ

Exit mobile version