| ಮಾರುತಿ ಪಾವಗಡ, ಬೆಂಗಳೂರು
ಇನ್ನು ಕೆಲವೇ ತಿಂಗಳಲ್ಲಿ ಬರಲಿರುವ 2024ರ ಲೋಕಸಭಾ ಚುನಾವಣೆ ಹಾಗೂ ಬಳಿಕ ಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ರಾಜ್ಯ ಬಿಜೆಪಿಗೆ (Karnataka BJP) ವರಿಷ್ಠರು ಮೇಜರ್ ಸರ್ಜರಿ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೈಕಮಾಂಡ್ ಇಟ್ಟುಕೊಂಡಿದೆ. ಹೀಗಾಗಿ ವಿಜಯೇಂದ್ರ ಜತೆ ರಾಜ್ಯ ಬಿಜೆಪಿಯ ವಿಜಯದ ರಥ ಎಳೆಯಲು ಯುವ ಶಕ್ತಿಗೆ ಮಣೆ ಹಾಕಲಾಗಿದೆ.
ಪಕ್ಷ ನಿಷ್ಠೆ ಹಾಗೂ ಸಮುದಾಯದಲ್ಲಿ ಮುಂದಿನ ನಾಯಕರಾಗಿ ಬೆಳೆಯುವವರನ್ನು ಹೈಕಮಾಂಡ್ ಗುರುತಿಸಿದೆ. ಇದೇ ವೇಳೆ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತ ಬ್ಲ್ಯಾಕ್ ಮೇಲ್ ಪಾಲಿಟಿಕ್ಸ್ ನಡೆಸುತ್ತಿರುವವರಿಗೂ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.
ಹತ್ತು ನಾಯಕರಿಗೆ ಉಪಾಧ್ಯಕ್ಷ ಪಟ್ಟ
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿಯಾದ ಆತ್ಮವಿಶ್ವಾಸದಿಂದ ಸೋತು ಹೋದ ಬಳಿಕ ಬಿಜೆಪಿ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡಿದ್ದರು. ಹೀಗಾಗಿ ನಳಿನ್ ಕುಮಾರ್ ಕಟೀಲ್ ಸ್ಥಾನದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದ ಹೈಕಮಾಂಡ್, ನಿಮ್ಮ ಜತೆ ಉತ್ಸಾಹದಿಂದ ಕೆಲಸ ಮಾಡಬಲ್ಲವರ ಪಟ್ಟಿ ಕೊಡಿ ಎಂದು ಸೂಚಿಸಿತ್ತು. ಜಾತಿ, ಜಿಲ್ಲೆ, ವಲಯ, ಕಾರ್ಯಕ್ಷಮತೆ ಇತ್ಯಾದಿ ಮಾನದಂಡ ಆಧರಿಸಿ ಹತ್ತು ಜನ ಉಪಾಧ್ಯಕ್ಷರ ತಂಡದ ಪಟ್ಟಿಯನ್ನು ವಿಜಯೇಂದ್ರ ಹೈಕಮಾಂಡ್‌ಗೆ ರವಾನಿಸಿದ್ದರು.
ಇದನ್ನೂ ಓದಿ | BY Vijayendra: ಲೋಕಸಭೆ ಎಲೆಕ್ಷನ್‌ವರೆಗೂ ಮನೆಗೆ ಹೋಗುವಂತಿಲ್ಲ: ಅವಿರತ ದುಡಿಮೆಗೆ ವಿಜಯೇಂದ್ರ ಕರೆ
ಮುರುಗೇಶ ನಿರಾಣಿ
ಇವರು ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ. ಪಕ್ಷ ಮತ್ತು ಯಡಿಯೂರಪ್ಪ ಅವರಿಗೆ ನಿಷ್ಠರಾಗಿದ್ದಾರೆ. ವಿಜಯಪುರ, ಬಾಗಲಕೋಟೆ, ಗದಗ, ಹುಬ್ಬಳ್ಳಿ, ಧಾರವಾಡದಲ್ಲಿ ಇವರ ಪ್ರಭಾವ ಇದೆ. ವಿಜಯೇಂದ್ರ ಜತೆಗೂ ಇವರು ಆತ್ಮೀಯರಾಗಿದ್ದಾರೆ. ಹೀಗಾಗಿ ಪಂಚಮಸಾಲಿ ಸಮುದಾಯ ನಾಯಕನ ಕೋಟಾದಲ್ಲಿ ಮುರುಗೇಶ್ ನಿರಾಣಿ ಅವರಿಗೆ ಮಣೆ ಹಾಕಲಾಗಿದೆ.
ಬೈರತಿ ಬಸವರಾಜ್
ರಾಜ್ಯದಲ್ಲಿ ದಲಿತ, ಮುಸ್ಲಿಂ, ಒಕ್ಕಲಿಗ, ಲಿಂಗಾಯತ ಬಳಿಕ ಅಧಿಕ ಜನಸಂಖ್ಯೆಯಲ್ಲಿ ಇರುವುದು ಕುರುಬ ಸಮುದಾಯ. ಯಡಿಯೂರಪ್ಪ ಕಾಲದಲ್ಲಿ ಈ ಸಮುದಾಯದ ಕೆ.ಎಸ್ ಈಶ್ವರಪ್ಪ ಪ್ರಭಾವಿ ನಾಯಕರಾಗಿ ಬೆಳೆದಿದ್ದರು. ಬದಲಾದ ಸನ್ನಿವೇಶದಲ್ಲಿ ಈಶ್ವರಪ್ಪಗೆ ಟಿಕೆಟ್ ಸಿಗಲಿಲ್ಲ. ಮಗನಿಗೆ ಲೋಕಸಭೆ ಚುನಾವಣೆ ಟಿಕೆಟ್ ಕೊಡಿಸುವ ಈಶ್ವರಪ್ಪ ಪ್ರಯತ್ನ ಮುಂದುವರಿದಿದೆ. ಆದರೆ ಸದ್ಯ ಈ ಸಮುದಾಯದಿಂದ ಬಿಜೆಪಿಯಲ್ಲಿ ಹಾಲಿ ಶಾಸಕ ಬೈರತಿ ಬಸವರಾಜ ಅವರು ಸಮುದಾಯದ ಹಿಡಿತ ಸಾಧಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಜತೆಗೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಬಳಿಕ ಪಕ್ಷಕ್ಕೆ ನಿಷ್ಠಾವಂತರಾಗಿ ಕೆಲಸ ಮಾಡುತ್ತಿರುವುದು ಸಹ ಇವರಿಗೆ ಮಣೆ ಹಾಕಲು ಕಾರಣವಾಗಿದೆ.
ರಾಜುಗೌಡ ನಾಯಕ್
ಇವರು ಚುನಾವಣೆಯಲ್ಲಿ ಸೋತ ಬಳಿಕವೂ ಪಕ್ಷ ಸಂಘಟನೆ ಬಿಡದೆ ಕೆಲಸ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಸದಾ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಇರುವ ಇವರಿಗೆ ಪದಾಧಿಕಾರಿಗಳ ತಂಡದಲ್ಲಿ ಹೊಣೆಗಾರಿಕೆ ನೀಡಾಗಿದೆ.
ಎನ್. ಮಹೇಶ್
ರಾಜ್ಯಾದ್ಯಂತ ದಲಿತ ಸಮುದಾಯದ ಮತಗಳು ನಿರ್ಣಾಯಕ. ಅಭ್ಯರ್ಥಿಯನ್ನು ಗೆಲ್ಲಿಸುವ, ಸೋಲಿಸುವ ಶಕ್ತಿ ಈ ಸಮುದಾಯಕ್ಕೆ ಇದೆ. ದಲಿತ ಸಮುದಾಯದ ಮತಗಳನ್ನು ಸೆಳೆಯಲು, ಕ್ರೋಡೀಕರಿಸಲು ಹೈಕಮಾಂಡ್ ಆದ್ಯತೆ ನೀಡಿದೆ. ಪಕ್ಷಕ್ಕೆ ನಿಷ್ಠಾವಂತರಾಗಿ ಕೆಲಸ ಮಾಡುತ್ತಿರುವ ಎನ್. ಮಹೇಶ್ ಅವರಿಗೆ ಅರ್ಹವಾಗಿಯೇ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ.
ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್, ಬಸವರಾಜ ಕೇಲಗಾರ, ಮಾಳವಿಕ ಅವಿನಾಶ್, ಎಂ ರಾಜೇಂದ್ರ ಅವರನ್ನು ಸಹ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಎಲ್ಲರ ನೇಮಕದ ಹಿಂದೆ ಕೇವಲ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಒಂದೇ ಅಲ್ಲದೇ ಜಾತಿವಾರು(ಲಿಂಗಾಯತ, ಕುರುಬ, ಒಕ್ಕಲಿಗ, ದಲಿತ, ಈಡಿಗ, ನಾಯಕ,ರೆಡ್ಡಿ, ಬ್ರಾಹ್ಮಣ,ಲಂಬಾಣಿ) ಮತ್ತು ಪ್ರಾದೇಶಿಕವಾರು ನೋಡಿ ಪಟ್ಟಿ ಫೈನಲ್ ಮಾಡಲಾಗಿದೆ.
ಜತೆಗೆ ನೂತನ ಅಧ್ಯಕ್ಷರ ಜತೆ ಕೆಲಸ ಮಾಡುವ ಹುಮ್ಮಸ್ಸು ಇರೋ ತಂಡವನ್ನ ಹೈಕಮಾಂಡ್ ಗುರುತಿಸಿದೆ.
ಮೂರು ವಲಯಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಸ್ಥಾನ
ರಾಜ್ಯ ಬಿಜೆಪಿ ಸಂಘಟನೆಗೆ ಬಲ ತುಂಬಲು ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ಸಹ ಹೈಕಮಾಂಡ್ ನೇಮಕ ಮಾಡಿದೆ. ಸಂಘಟನೆ ಚತುರ ಮತ್ತು ಪಕ್ಷಕ್ಕೆ ನಿಷ್ಠಾವಂತರಾಗಿರುವ ಸುನಿಲ್ ಕುಮಾರ್ ಅವರಿಗೆ ಮಣೆ ಹಾಕಲಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿರುವ ಸುನಿಲ್ ಕುಮಾರ್ ಕೇವಲ ಕರಾವಳಿಗೆ ಅಷ್ಟೇ ಅಲ್ಲದೆ ರಾಜ್ಯದಲ್ಲಿ ಅವರನ್ನು ಬೆಂಬಲಿಸುವ ಯುವಪಡೆಯೇ ಇದೆ. ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕ ಸ್ಥಾನಕ್ಕೆ ಸುನಿಲ್ ಕುಮಾರ್ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಆದರೆ ಹೈಕಮಾಂಡ್ ಲೋಕಸಭಾ ಚುನಾವಣೆ ದೃಷ್ಟಿಯಿಂದ ಜಾತಿವಾರು ಶಕ್ತಿ ಲೆಕ್ಕ ಹಾಕಿ ಮಣೆ ಹಾಕಿದ್ದರಿಂದ ಸುನಿಲ್ ಕುಮಾರ್ ಹೆಸರು ಕೈಬಿಡಲಾಗಿತ್ತು. ಈಗ ರಾಜ್ಯಾಧ್ಯಕ್ಷ ವಿಜಯೇಂದ್ರ ಜತೆ ಕೆಲಸ ಮಾಡುವ ಟೀಮ್ ಜತೆ ಸೀನಿಯರ್ ಲಿಸ್ಟ್‌ನಲ್ಲಿ ಸುನಿಲ್ ಕುಮಾರ್‌ಗೆ ಮಣೆ ಹಾಕಲಾಗಿದೆ. ಉಡುಪಿ, ಚಿಕ್ಕಮಗಳೂರು, ಮಂಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ಇವರ ಪ್ರಭಾವ ಇದೆ.
ಪಿ.ರಾಜೀವ್, ನಂದೀಶ್ ರೆಡ್ಡಿ, ಪ್ರೀತಂ ಗೌಡ
ಈ ಮೂವರೂ ಮಾಜಿ ಶಾಸಕರು. ಮೂವರೂ ಯಡಿಯೂರಪ್ಪ ಗರಡಿಯಲ್ಲಿ ಪಳಗಿದವರು. ನಂದೀಶ್ ಮತ್ತು ಪ್ರೀತಂ ಗೌಡ ಮೂಲತಃ ಬಿಜೆಪಿಗರು. ಆದರೆ 2013ರಲ್ಲಿ ಪಿ. ರಾಜೀವ್ ಬಿಎಸ್ಆರ್ ಪಕ್ಷದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಬಳಿಕ ರಾಮುಲು ಪಕ್ಷ ವೀಲಿನವಾದಾಗ ಇವರು ಸಹ ಬಿಜೆಪಿ ಸೇರ್ಪಡೆಯಾಗಿ ಬಳಿಕ 2018ರಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಆದರೆ 2023ರಲ್ಲಿ ಸೋತಿದ್ದರು. ಲಂಬಾಣಿ ಸಮುದಾಯದ ಯುವ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವುದರಿಂದ ಪಿ ರಾಜೀವ್ ಅವರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಅನ್ನೋ ಲೆಕ್ಕಾಚಾರ ಹೈಕಮಾಂಡ್‌ನದ್ದಾಗಿದೆ.
ಇನ್ನು ಪ್ರೀತಂ ಗೌಡ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ನಿಷ್ಠಾವಂತರಾಗಿರುವುದರ ಜತೆಗೆ ಒಕ್ಕಲಿಗ ಸಮುದಾಯದಲ್ಲಿ ಯುವ ನಾಯಕನಾಗಿ ಬೆಳೆಯುತ್ತಿರುವುದು ಇವರಿಗೆ ಸ್ಥಾನ ನೀಡಲು ಕಾರಣವಾಗಿದೆ. ಇನ್ನು ನಂದೀಶ್ ರೆಡ್ಡಿಗೆ ಬೈರತಿ ಬಸವರಾಜ್ ಬಿಜೆಪಿಗೆ ಬಂದ ಬಳಿಕ ಕ್ಷೇತ್ರ ಇಲ್ಲದಂತೆ ಆಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರು ಜಿಲ್ಲೆಯ ಜವಾಬ್ದಾರಿ ಕೊಡಲು ರೆಡ್ಡಿ ಕೋಟಾದಲ್ಲಿ ಸಂಘಟನೆ ಜವಾಬ್ದಾರಿ ಕೊಡಲಾಗಿದೆ.
ಹತ್ತು ರಾಜ್ಯ ಕಾರ್ಯದರ್ಶಿಗಳು
ಯುವ ಮೋರ್ಚಾದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ ಹಾಗೂ ಬಿಜೆಪಿ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಹತ್ತು ಜನರಿಗೆ ಹೈಕಮಾಂಡ್ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದೆ. ಯುವ ಮೋರ್ಚಾಗೆ ಧೀರಜ್ ಮುನಿರಾಜು ಅವರನ್ನು ನೇಮಕ ಮಾಡಲಾಗಿದೆ. ಇವರು ಯಾದವ ಸಮುದಾಯಕ್ಕೆ ಸೇರಿದ ಯುವ ನಾಯಕರಾಗಿದ್ದಾರೆ. 2023ರಲ್ಲಿ ಯಾರೂ ಊಹಿಸದ ರೀತಿಯಲ್ಲಿ ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಪ್ಪ ಅವರನ್ನು ಸೋಲಿಸಿ ಶಾಸಕರಾಗಿದ್ದಾರೆ. ರೈತ ಮೋರ್ಚಾಗೆ ಮಾಜಿ ಸಚಿವ ಎ.ಎಸ್ ಪಾಟೀಲ್ ನಡಹಳ್ಳಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಎಸ್ಸಿ ಮೋರ್ಚಾಗೆ ಶಾಸಕ ಸಿಮೆಂಟ್ ಮಂಜು ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಒಟ್ಟಾರೆ ಈ ಪಟ್ಟಿ ನೋಡಿದರೆ ಪಕ್ಷಕ್ಕೆ ನಿಷ್ಠಾವಂತರಾಗಿ ಕೆಲಸ ಮಾಡುತ್ತಿರುವ ಹಾಗೂ ವಿಜಯೇಂದ್ರ ಜತೆಗೆ ಹೊಂದಿಕೊಂಡು ಕೆಲಸ ಮಾಡಬಲ್ಲವರಿಗೆ ಹೈಕಮಾಂಡ್ ಹೊಣೆಗಾರಿಕೆ ನೀಡಿದೆ.
ಇದನ್ನೂ ಓದಿ | Veerashaiva Lingayat: ವೀರಶೈವ ಲಿಂಗಾಯತ ಮಹಾಸಭಾದಿಂದ 8 ನಿರ್ಣಯ; ಜಾತಿ ಗಣತಿ ವರದಿ ತಿರಸ್ಕಾರಕ್ಕೆ ಆಗ್ರಹ
ರೆಬಲ್ ಹಾಲಿ, ಮಾಜಿಗಳಿಗೆ ಖಡಕ್ ಸಂದೇಶ
ರಾಜ್ಯ ಸಂಘಟನೆಯ ಈ ಪಟ್ಟಿಯಿಂದ ರೆಬಲ್ ಹಾಲಿ, ಮಾಜಿ ಶಾಸಕರಿಗೆ ಸ್ಪಷ್ಟ ಸಂದೇಶ ರವಾನೆ ಆಗಿದೆ. ಯಾವುದೇ ಒತ್ತಡಕ್ಕೂ ನಾವು ಬಗ್ಗುವುದಿಲ್ಲ. ಪಕ್ಷ ನಿಷ್ಠೆ ಇದ್ದವರಿಗೆ ಮಾತ್ರ ಇಲ್ಲಿ ಆದ್ಯತೆ. ನಾನೇ ಸರಿ, ನನ್ನದೇ ನಡೆಯಬೇಕು ಎನ್ನುವ ನಡವಳಿಕೆ ಇದ್ದರೆ ಸಹಿಸಲಾಗದು ಎಂಬ ಸಂದೇಶವನ್ನು ಹೈಕಮಾಂಡ್ ರವಾನೆ ಮಾಡಿದೆ. ವಿಜಯೇಂದ್ರ ಮತ್ತು ಆರ್. ಆಶೋಕ್ ನೇಮಕದ ಬಳಿಕ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಯತ್ನಾಳ್, ಸೋಮಣ್ಣ, ರಮೇಶ್ ಜಾರಕಿಹೊಳಿ ಅವರಿಗೂ ಈ ಬಾರಿಯ ಪದಾಧಿಕಾರಿಗಳ ಪಟ್ಟಿಯಲ್ಲಿ ಪಾಠ ಇದೆ!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ