Site icon Vistara News

ಗದಗ ಮುಕ್ತಿಧಾಮ ಕಚೇರಿಯಲ್ಲಿ ಕಳ್ಳತನ; 2 ತಿಂಗಳಾದರೂ ಅಂತ್ಯಸಂಸ್ಕಾರದ ಹಣ ಕದ್ದವನ ಬಂಧನವಿಲ್ಲ

Theft at Gadag Muktidham office

ಗದಗ: ಮುಕ್ತಿಧಾಮದ ಕಚೇರಿಯಲ್ಲಿ ಕಳ್ಳತನ ಪ್ರಕರಣ ನಡೆದು 2 ತಿಂಗಳಾದರೂ ಈವರೆಗೆ ಪ್ರಕರಣ ದಾಖಲಿಸಿಲ್ಲ ಹಾಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರ ವಿರುದ್ಧ ಮುಕ್ತಿಧಾಮ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.

ಮೇ 11 ರಂದು ಗದಗ ನಗರದ ಹೊಂಬಳ ರಸ್ತೆಯ ಮುಕ್ತಿಧಾಮ ಕಚೇರಿಯಲ್ಲಿ ಕಳ್ಳತನ ನಡೆದಿತ್ತು. ಅಂತ್ಯಸಂಸ್ಕಾರದ 75,000 ರೂ.ಗಳನ್ನು ಕಿರಾತಕನೊಬ್ಬ ಕದ್ದು ಪರಾರಿಯಾಗಿದ್ದ. ಸ್ಮಶಾನದಲ್ಲಿ ಕಚೇರಿ ಬಾಗಿಲು ಮುರಿದು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಘಟನೆ ನಡೆದು ಎರಡು ತಿಂಗಳಾದರೂ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೆಳಿಬಂದಿದೆ. ಕಳ್ಳತನದ ನಂತರ ಮದುವೆ ಮಾಡಿಕೊಂಡು ಗೋವಾ ಕಡೆ ಕಳ್ಳ ಪರಾರಿ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ | Lokayukta Raid: ಲಂಚ ಪಡೆಯುತ್ತಿದ್ದ ಉಪ ತಹಸೀಲ್ದಾರ್, ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ

ಅಂತ್ಯಸಂಸ್ಕಾರಕ್ಕೆಂದು ಪಡೆದ ಹಣವನ್ನು ಸ್ಮಶಾನದ ಕಚೇರಿಯಲ್ಲಿ ವ್ಯವಸ್ಥಾಪಕ ನೀಲಕಂಠ ಅವರು ಸಂಗ್ರಹಿಸಿಟ್ಟಿದ್ದರು. ಪ್ರತಿ ನಿತ್ಯ ಅಂತ್ಯ ಸಂಸ್ಕಾರಕ್ಕೆ ಇಂತಿಷ್ಟು ಹಣ‌ ಪಡೆದು ಮುಕ್ತಿಧಾಮದ ಕಚೇರಿಯಲ್ಲಿ ಸಂಗ್ರಹಿಸಿಡುತ್ತಿದ್ದರು. ಹೀಗೆ ಸಂಗ್ರಹಿಸಿದ್ದ ಸುಮಾರು 75,000 ಹಣವನ್ನು ಕಳ್ಳ ಎಗರಿಸಿಕೊಂಡು ಹೋಗಿದ್ದ.

ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಪೊಲೀಸರು ಧಾವಿಸಿ ವಿಚಾರಣೆ ನಡೆಸಿದ್ದರು. ನಂತರ ಮುಕ್ತಿಧಾಮದ ವ್ಯವಸ್ಥಾಪಕ ನೀಲಕಂಠ ಕಾಳೆ ಶಹರ ಪೊಲೀಸರಿಗೆ ದೂರು ನೀಡಿದ್ದರು. ಆದರೆ 2 ತಿಂಗಳಾದರೂ ಪ್ರಕರಣದ ತನಿಖೆ ನಡೆದಿಲ್ಲ ಎನ್ನಲಾಗಿದೆ.

ಗದಗ ಮುಕ್ತಿಧಾಮದ ಕಚೇರಿ ಹಾಗೂ ಆರೋಪಿ

ಇದನ್ನೂ ಓದಿ | Heart Attack: ಟ್ಯೂಷನ್​ಗೆ ಹೊರಟಿದ್ದ ಮಗಳ ಕಣ್ಣೆದುರೇ ಹೃದಯಾಘಾತ, ರಸ್ತೆ ಬದಿಯಲ್ಲೇ ಹೋಯ್ತು ಅಪ್ಪನ ಪ್ರಾಣ

ಈ‌ ಪ್ರಕರಣ‌ ಕುರಿತಂತೆ ತನಿಖೆ‌ ಕೈಗೊಳ್ಳಲಾಗಿದೆ. ಘಟನೆ ನಡೆದ ಬಳಿಕ ಆರೋಪಿ ಮದುವೆ ಮಾಡಿಕೊಂಡು ಗೋವಾಗೆ ಎಸ್ಕೇಪ್ ಆಗಿದ್ದಾನೆ ಎಂಬ ಮಾಹಿತಿ ಇದೆ. ಅಲ್ಲದೇ ಘಟನೆ ಬಗ್ಗೆ ದೂರುದಾರರು ಕಂಪ್ಲೇಂಟ್ ನೀಡಲು ಮುಂದೆ ಬರಲಿಲ್ಲ. ಇಂದು FIR ದಾಖಲಿಸುತ್ತೇವೆ.
| ಜಯಂತ ಗೌಳಿ, ಸಿಪಿಐ, ಶಹರ ಪೊಲೀಸ್ ಠಾಣೆ, ಗದಗ

ಘಟನೆ ನಡೆದ ದಿನದಂದು ರಾತ್ರಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ನಾನೂ‌ ಶಹರ ಠಾಣೆಗೆ ತೆರಳಿ ದೂರು ‌ನೀಡಿ ಬಂದಿದ್ದೇನೆ. ದುಡ್ಡನ್ನು ಕಳ್ಳ ಎಗರಿಸಿದ ಸಿಸಿಟಿವಿ ವಿಡಿಯೋ‌ ಎಲ್ಲವೂ ಇತ್ತು. ಆದರೆ ಎಫ್‌ಐಆರ್‌ ದಾಖಲಿಸಲು ಯಾಕೆ‌ ಇಷ್ಟು ತಡ ಮಾಡಿದರೋ ಗೊತ್ತಿಲ್ಲ.
| ನೀಲಕಂಠ ಕಾಳೆ. ವ್ಯವಸ್ಥಾಪಕ

Exit mobile version