ದಾವಣಗೆರೆ: ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ಬರ್ತ್ ಡೇ ಪಾರ್ಟಿಯಲ್ಲಿ (Theft at birthday) ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ! ಶಾಸಕರ ಆಪ್ತ ಸಹಾಯಕ ಮತ್ತು ಇನ್ನೊಬ್ಬರ ಜೇಬು ಕತ್ತರಿಸಿ 1 ಲಕ್ಷ ರೂ. ಹಣ ಎಗರಿಸಿದ್ದಾರೆ.
ಮಂಗಳವಾರ ರಾತ್ರಿ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ವೇಳೆ ಶಾಸಕರಿಗೆ ಶುಭ ಕೋರಿ ಫೋಟೋ ತೆಗೆಸುವ ನೆಪದಲ್ಲಿ ವೇದಿಕೆ ಏರಿದ ಖತರ್ನಾಕ್ ಕಳ್ಳರು ತಮ್ಮ ಆಟ ಪ್ರದರ್ಶಿಸಿದ್ದಾರೆ. ಶಾಸಕರ ಆಪ್ತ ಸಹಾಯಕ ಸಂತೋಷ್ ಮತ್ತು ಪ.ಪಂಚಾಯತಿ ಅಧ್ಯಕ್ಷೆ ವಿಶಾಲಾಕ್ಷಿ ಪತಿ ಓಬಳೇಶ್ ಅವರು ಜೇಬಿಗೆ ಕತ್ತರಿ ಹಾಕಿಕೊಂಡವರು.
ಒಳ್ಳೆಯ ಪ್ಲ್ಯಾನಿಂಗ್!
ಈಗ ಯಾರೂ ಜೇಬಿನಲ್ಲಿ ಅಷ್ಟೊಂದು ಹಣ ಇಟ್ಟುಕೊಳ್ಳುವುದಿಲ್ಲ. ಆದರೆ, ಕಾರ್ಯಕ್ರಮ ಆಯೋಜಕರ ಜೇಬಲ್ಲಿ ಇರಬಹುದು ಎಂದು ಸರಿಯಾಗಿಯೇ ಲೆಕ್ಕ ಹಾಕಿದ ಕಳ್ಳರು ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಮೊದಲು ಅವರ ಜೇಬಿನಲ್ಲಿ ಹಣ ಇರುವುದನ್ನು ಖಾತ್ರಿ ಪಡಿಸಿಕೊಂಡ ಗ್ಯಾಂಗ್ ಬಳಿಕ ಬೇಕೆಂದೇ ಒಂದು ಸಣ್ಣ ನೂಕುನುಗ್ಗಲು ಸೃಷ್ಟಿ ಮಾಡಿ ಕಳ್ಳತನ ಮಾಡಿದೆ.
ವೈಟ್ ಆಂಡ್ ವೈಟ್ ಬಟ್ಟೆ ಹಾಕಿಕೊಂಡು ಪಕ್ಕಾ ಕಾರ್ಯಕರ್ತರಂತೆ ಬಂದಿದ್ದ ಕಳ್ಳರು ಜನಸಂದಣಿಯನ್ನೇ ಬಂಡವಾಳ ಮಾಡಿಕೊಂಡು ಸಂತೋಷ್ ಜೇಬಿನಿಂದ 50 ಸಾವಿರ ರೂ. ಓಬಳೇಶ್ ಜೇಬಿನಿಂದ 50 ಸಾವಿರ ರೂ. ಕದ್ದಿದ್ದಾರೆ. ಈ ಕಳ್ಳರ ಕರಾಮತ್ತು ಕಾರ್ಯಕ್ರಮದ ಸ್ಟೇಜ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವರನ್ನು ತ್ವರಿತವಾಗಿ ಬಂಧನ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ | Theft Case | ಹೋಮದ ಹೊಗೆ ನಡುವೆ ಲಕ್ಷಾಂತರ ರೂಪಾಯಿ ನಗದು ದೋಚಿದ; ಗೃಹಪ್ರವೇಶ ವಿಡಿಯೊದಿಂದ ಸಿಕ್ಕಿಬಿದ್ದ!