Site icon Vistara News

Theft Case | ಕಿರಾಣಿ ಅಂಗಡಿಯಲ್ಲಿ ಸಿಗರೇಟು ಕೇಳುವ ನೆಪದಲ್ಲಿ ಬಂದ್ರು; ಚಿನ್ನ ಕದ್ದು ಪರಾರಿಯಾದರು

Theft Case ಚಿನ್ನ ಕದ್ದು ಪರಾರಿ

ಹಾಸನ: ಹೊಟ್ಟೆಪಾಡಿಗಾಗಿ ಆ ವೃದ್ಧೆ ಪುಟ್ಟದೊಂದು ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರಿಗೆ, ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಣ್ಣಿಗೆ ಬಿದ್ದಿದೆ. ಸಿಗರೇಟು, ಜ್ಯೂಸ್‌ ಕೊಡುವಂತೆ ಹೇಳಿ ಗಮನವನ್ನು ಬೇರೆಡೆ ಸೆಳೆದು ಚಿನ್ನದ ಸರವನ್ನು ಎಳೆದು (Theft Case) ಪರಾರಿಯಾಗಿದ್ದಾರೆ.

ಚಿನ್ನದ ಸರ ಕಳೆದುಕೊಂಡ ಸಾವಿತ್ರಿ ಮಣಿ

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಸಂತೆಮರೂರಿನಲ್ಲಿ ಈ ಪ್ರಕರಣ ನಡೆದಿದೆ. ಸಂತೆಮರೂರು-ಅರಕಲಗೂಡು ಮಾರ್ಗದ ರಸ್ತೆ ಬದಿಯಲ್ಲಿ ವೃದ್ಧೆ ಸಾವಿತ್ರಿ ಮಣಿ ಎಂಬುವವರಿಗೆ ಸೇರಿದ ಚಿಲ್ಲರೆ ಅಂಗಡಿ ಇದೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಸರಗಳ್ಳರು, ಸಿಗರೇಟ್, ಚಿಪ್ಸ್‌, ಜ್oಯೂಸ್ ಖರೀದಿಸಿದ್ದಾರೆ. ಚಿಪ್ಸ್‌ ಕೊಡಲು ಬಲಗಡೆ ತಿರುಗಿದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.

ಒಂದು ಎಳೆ ಕಳ್ಳರ ಪಾಲು
ಗಮನ ಬೇರೆ ಕಡೆಗೆ ಸೆಳೆದು ಕತ್ತಿನಲ್ಲಿದ್ದ ಸರಕ್ಕೆ ಕೈ ಹಾಕಿದ ಕೂಡಲೇ ಗಾಬರಿಗೊಂಡ ಸಾವಿತ್ರಿ ಮಣಿ ಅವರು ತಮ್ಮ ಕೈಗಳನ್ನು ಅಚಾನಕ್ಕಾಗಿ ಸರದ ಬಳಿಗೆ ತಂದಿದ್ದಾರೆ. ಹಾಗೇ ಗಟ್ಟಿಯಾಗಿ ಸರವನ್ನು ಹಿಡಿದುಕೊಂಡಿದ್ದಾರೆ. ಈ ವೇಳೆ ಸಾವಿತ್ರಿ ಅವರಿಗೆ ಸರದ ಒಂದು ಎಳೆಯನ್ನು ಮಾತ್ರ ಹಿಡಿದುಕೊಂಡಿದ್ದರು. ಹೀಗಾಗಿ ದುಷ್ಕರ್ಮಿಯು ಜೋರಾಗಿ ಎಳೆದಿದ್ದರಿಂದ ಇನ್ನೊಂದು ಎಳೆ ಆತನ ಪಾಲಾಗಿದೆ. ತಕ್ಷಣವೇ ಅವರನ್ನು ಅಟ್ಟಿಸಿಕೊಂಡು ಹೋಗಲು ಪ್ರಯತ್ನಪಟ್ಟರಾದರೂ ಬೈಕ್‌ನಿಂದ ಇನ್ನೊಬ್ಬ ಬಂದು ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಒಟ್ಟು ಎರಡು ಎಳೆಯ 45 ಗ್ರಾಂನ ಚಿನ್ನ ಇದಾಗಿದ್ದು, ಒಂದು ಎಳೆಯನ್ನು ಅವರು ಕಳೆದುಕೊಂಡಿದ್ದಾರೆ. ಕಳೆದ ಮೂರು ತಿಂಗಳ ಹಿಂದಷ್ಟೇ ಸಾವಿತ್ರಿ ಅವರು ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಮಗನೊಂದಿಗೆ ಕಿರಾಣಿ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದೆರಡು ದಿನಗಳಿಂದ ಅಂಗಡಿ ಸುತ್ತಮುತ್ತ ಇಬ್ಬರು ಅನುಮಾನಾಸ್ಪದವಾಗಿ ಬೈಕ್‌ನಲ್ಲಿ ಓಡಾಡಿಕೊಂಡಿದ್ದರು ಎಂಬ ಮಾಹಿತಿಯನ್ನು ಸ್ಥಳೀಯರು ಪೊಲೀಸರಿಗೆ ನೀಡಿದ್ದಾರೆ. ಸ್ಥಳಕ್ಕೆ ಅರಕಲಗೂಡು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Shraddha Murder Case | ಶ್ರದ್ಧಾ ಹತ್ಯೆ ಕೇಸ್​​ ತನಿಖೆಗೆ ಪೊಲೀಸರಿಗೆ ಸಿಕ್ಕಿತೊಂದು ಮಹತ್ವದ ಸುಳಿವು

Exit mobile version