Site icon Vistara News

Theft Case: ಮಗಳ ಮದುವೆಗಾಗಿ ಖರೀದಿಸಿದ್ದ ಚಿನ್ನ ಕಳ್ಳರ ಪಾಲು; ಎಲೆಕ್ಟ್ರಿಕಲ್‌ ಅಂಗಡಿಗೆ ಕನ್ನ ಹಾಕಿದ ಕಳ್ಳರು

#image_title

ಬೆಂಗಳೂರು: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ಮಿತಿ ಮೀರುತ್ತಿವೆ. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಭಗೀರಥ ಲೇಔಟ್‌ನಲ್ಲಿ ತಡರಾತ್ರಿ ಮನೆ ಮಾಲೀಕರು ಇಲ್ಲದ್ದನ್ನು ಖಚಿತಪಡಿಸಿಕೊಂಡು ಸ್ಕೆಚ್ ಹಾಕಿದ ಖತರ್ನಾಕ್ ಕನ್ನಹಾಕಿದೆ.

ಮಗಳ ಮದುವೆಗಾಗಿ ಖರೀದಿಸಿಟ್ಟಿದ್ದ ಸುಮಾರು ಅರ್ಧ ಕೆ.ಜಿ. ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿದ್ದಾರೆ. ಮೂರು ದಿನಗಳ ಹಿಂದಷ್ಟೇ ಸಿದ್ದಾರ್ಥ ಲೇಔಟ್‌ನಲ್ಲಿ ಕಳ್ಳತನವಾಗಿತ್ತು. ಸಿಸಿಟಿವಿ ಕ್ಯಾಮೆರಾ ಇಲ್ಲದ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆಗಳ್ಳತನ ಮಾಡುತ್ತಾರೆ. ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ನಡೆಯುತ್ತಿದ್ದ ಮನೆಗಳ್ಳತನ ಜಾಲ ಚಾಮರಾಜನಗರಕ್ಕೂ ಹಬ್ಬಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಲೆಕ್ಟ್ರಿಕಲ್‌ ಅಂಗಡಿಗೆ ಕನ್ನ ಹಾಕಿದ ಕಳ್ಳರು

ಮೈಸೂರಿನ ದಟ್ಟಗಳ್ಳಿ ಕ್ರೈಸ್ತ ಪಬ್ಲಿಕ್ ಸ್ಕೂಲ್ ಸಮೀಪದ ಕೆ.ಎನ್‌‌‌.ಎಸ್. ಕಾಂಪ್ಲೆಕ್ಸ್ ನಲ್ಲಿರುವ ಪುಷ್ಪಗಿರಿ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಅಂಗಡಿಯ ಶೆಲ್ಟರ್ ಮುರಿದು ಹಣ, ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳು, ನಗದು ಕಳ್ಳತನ ಮಾಡಿದ್ದಾರೆ.

ಶಿವಾನಂದ್ ಮಾಲೀಕತ್ವದ ಪುಷ್ಪಗಿರಿ ಎಲೆಕ್ಟ್ರಿಕ್ಸ್‌ನಲ್ಲಿ ಸುಮಾರು 5.5 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಲ್ ವಸ್ತುಗಳು, 30 ಸಾವಿರ ರೂಪಾಯಿ ನಗದನ್ನು ಎಗರಿಸಿದ್ದಾರೆ. ಅಂಗಡಿಯಲ್ಲಿದ್ದ ವೈರ್, ಮೋಟಾರ್, ವ್ಯಾಕ್ಯೂಮ್ ಕ್ಲೀನರ್, ಲ್ಯಾಪ್‌ಟಾಪ್ ಸೇರಿ ಎಲೆಕ್ಟ್ರಿಕಲ್ ವಸ್ತುಗಳನ್ನು ಖದೀಮರು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಸರಸ್ವತಿ ಪುರಂ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಕಳ್ಳತನ

ಕೊಪ್ಪಳ ನಗರದ ಪಶು ಆಸ್ಪತ್ರೆಯ ಪಕ್ಕದಲ್ಲಿರುವ ಮಿಲ್ಕ್ ಪಾರ್ಲರ್‌ನ ಶೆಟರ್ ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಿಲ್ಕ್ ಪಾರ್ಲರ್‌ನಲ್ಲಿದ್ದ 11 ಸಾವಿರ ರೂ. ಬಾದಾಮಿ, ಚಹಾಪುಡಿಯನ್ನು ಕದ್ದಿದ್ದಾರೆ. ಕಳೆದ ಜನವರಿ 1 ರಂದು ಪಶು ಆಸ್ಪತ್ರೆಯ ಪಕ್ಕದಲ್ಲಿದ್ದ ಮಿಲ್ಕ್ ಪಾರ್ಲರ್‌ನಲ್ಲಿ ಹಾಲಿನ‌‌ ಪ್ಯಾಕೆಟ್ ಕದ್ದಿದ್ದರು. ಈಗ ಮತ್ತೆ ಫೆಬ್ರವರಿ 1 ರಂದು ಮಿಲ್ಕ್ ಪಾರ್ಲರ್‌ನಲ್ಲಿ ಕಳ್ಳತನ ಮಾಡಿದ್ದಾರೆ. ಮೇಲಿಂದ ಮೇಲೆ‌ ಕಳ್ಳತನವಾಗುತ್ತಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಬೈಕ್‌ ಮೊಬೈಲ್‌ ಕಳ್ಳರ ಬಂಧನ

ಬೆಂಗಳೂರಿನ ಯಲಹಂಕ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಕುಖ್ಯಾತ ಬೈಕ್ ಹಾಗೂ ಮೊಬೈಲ್ ಕಳ್ಳರ ಬಂಧನವಾಗಿದೆ. ಅಂಥೋಣಿ ಡಿಸಿಲ್ವಾ (25) ಹಾಗೂ ನಾರಾಯಣ (23) ಬಂಧಿತ ಆರೋಪಿಗಳಾಗಿದ್ದಾರೆ. ಮೊದಲು ಬೈಕ್ ಕದಿಯುತ್ತಿದ್ದ ಆರೋಪಿಗಳು ನಂತರ ಕದ್ದ ಬೈಕ್‌ನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಆರೋಪಿಗಳಿಂದ 6 ಲಕ್ಷ 30 ಸಾವಿರ ರೂಪಾಯಿ ಮೌಲ್ಯದ 4 ದ್ವಿಚಕ್ರ ವಾಹನ ಹಾಗೂ 4 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನೇಪಾಳ ಕಳ್ಳರು ಅರೆಸ್ಟ್‌

ಕಳೆದ ಒಂದು ತಿಂಗಳ ಹಿಂದೆ ಡಾಲರ್ಸ್ ಕಾಲೋನಿಯ ಇಂಡಿಯನ್ ಅಕೌಂಟ್ ಆ್ಯಂಡ್ ಆಡಿಟಿಂಗ್ ಸರ್ವಿಸ್‌ ಎಜಿ ಆಗಿರುವ ಸ್ಮಿತಾ ಗೋಪಾಲನ್ ಅವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದರು. ಇದೀಗ ತನಿಖೆ ನಡೆಸಿದ ಸಂಜಯ್‌ನಗರ ಪೊಲೀಸರು ನೇಪಾಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Hampi Zoo: ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಪಾಟ್ನಾದಿಂದ ಬಂತು ಹೊಸ ಅತಿಥಿ

ಕರಣ್, ವಿಕಾಸ್, ಬೀರ್ ಬಲ್ ಬಂಧಿತ ಆರೋಪಿಗಳಾಗಿದ್ದಾರೆ. 200 ಗ್ರಾಂ ಚಿನ್ನಾಭರಣಗಳನ್ನು ಇವರು ದೋಚಿದ್ದರು. ಈಗ ಪೊಲೀಸರು ಆ ಚಿನ್ನಾಭರಣಗಳಿಗಾಗಿ ಶೋಧ ನಡೆಸಿದ್ದಾರೆ.

Exit mobile version