ಶಿರಾ: ಪೊಲೀಸ್ ಅಧಿಕಾರಿಗಳಂತೆ ನಟಿಸಿ, ವಂಚಕರಿಬ್ಬರು ಮಹಿಳೆಯೊಬ್ಬರ 1.50 ಲಕ್ಷ ರೂ. ಮೌಲ್ಯದ 48 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕದ್ದು (Theft Case) ಪರಾರಿಯಾಗಿರುವ ಘಟನೆ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಬಳಿ ಶುಕ್ರವಾರ ನಡೆದಿದೆ.
ತಾಲೂಕಿನ ಕಡವಿಗೆರೆ ಗ್ರಾಮದ ಅಶ್ವತ್ಥಮ್ಮ ಮಾಂಗಲ್ಯ ಸರ ಕಳೆದುಕೊಂಡವರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ಸ್ಥಳೀಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗ ಹೋಗುತ್ತಿರುವ ವೇಳೆ ಪೊಲೀಸರು ಎಂದು ಹೇಳಿಕೊಂಡ ಇಬ್ಬರು ಅಪರಿಚಿತರು ಗಮನ ಬೇರೆಡೆಗೆ ಸೆಳೆದು ಅಶ್ವತ್ಥಮ್ಮ ಅವರ ಬಂಗಾರದ ಸರ ತೆಗೆಸಿ, ಪೇಪರ್ ಕವರ್‌ನಲ್ಲಿ ಹಾಕುವಂತೆ ತಿಳಿಸಿದ್ದರು. ಬಳಿಕ ಆ ಕವರನ್ನು ಅಶ್ವಥಮ್ಮ ಅವರ ಬ್ಯಾಗ್‌ನಲ್ಲಿರಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Murder Case: ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು ಯುವಕನ ಹತ್ಯೆ
ಅಲ್ಲಿಂದ ಸ್ವಲ್ಪ ದೂರ ತೆರಳಿದ್ದ ಅಶ್ವತ್ಥಮ್ಮ, ಬಳಿಕ ಬ್ಯಾಗ್‌ನಲ್ಲಿದ್ದ ಪೇಪರ್ ಕವರ್ ತೆಗೆದು ನೋಡಿದಾಗ ಆಘಾತ ಕಾದಿತ್ತು. ಪೇಪರ್ ಕವರ್‌ನಲ್ಲಿ ಚಿನ್ನದ ಮಾಂಗಲ್ಯ ಸರ ಇರಲಿಲ್ಲ. ಇದನ್ನು ಗಮನಿಸಿದ ತಕ್ಷಣವೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಬಳಿ ಬಂದು ನೋಡಿದಾಗ ವಂಚಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಅಶ್ವಥಮ್ಮ ನೀಡಿದ ದೂರಿನ ಮೇರೆಗೆ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.