Site icon Vistara News

Theft Case: ಬಿಜೆಪಿ ಪ್ರಚಾರ ವೇಳೆ ಮುಖಂಡರ ಜೇಬಿಗೆ ಕತ್ತರಿ ಹಾಕಿದ್ದ 13 ಖದೀಮರ ಬಂಧನ

Theft in the BJP programme 13 accused arrested

ಮಡಿಕೇರಿ: ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ನಡೆದ ಬಿಜೆಪಿ (BJP) ಕಾರ್ಯಕ್ರಮದಲ್ಲಿ ನಡೆದಿದ್ದ ಲಕ್ಷಾಂತರ ರೂ.ಗಳ ಜೇಬುಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳನ್ನು ಕೊಡಗು (Kodagu) ಜಿಲ್ಲಾ ಪೊಲೀಸರು (Theft Case) ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜಯಣ್ಣ(38), ಪುಟ್ಟರಾಜು(39), ನಾಗರಾಜ ಸಿ.(43), ವೆಂಕಟೇಶ್ ಆರ್. (44), ರಾಮು (43), ಉಮೇಶ ಕೆ. (36), ಜಯಣ್ಣ (53), ಬೋಜಪ್ಪ (50), ಮೆಹಬೂಬ್ ಸುಭಾನ್ (48), ಹರೀಶ (35), ರಂಗಣ್ಣ (50), ಗಿರೀಶ ಡಿ. (31), ಬಾಲು (35) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 12 ಮೊಬೈಲ್ ಫೋನ್‌ಗಳು, ಎರಡು ಕಾರುಗಳು ಹಾಗೂ 65,960 ರೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Borewell Tragedy: ವಿಜಯಪುರ; ಅಜ್ಜನ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ, ರಕ್ಷಿಸಲು ಹರಸಾಹಸ

ಘಟನೆಯ ಹಿನ್ನೆಲೆ ಏನು?

ಮಾ.27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭ ಕುಶಾಲನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಇಂದಿರಾ ಬಡಾವಣೆಯ ಎಂ.ಎಂ. ಚರಣ್‌ ಅವರ ಜೇಬಿನಲ್ಲಿದ್ದ 32 ಸಾವಿರ, ಅವರ ಸ್ನೇಹಿತರಾದ ಡಿ.ಎಚ್. ಚಂದ್ರಶೇಖರ್ ಅವರ ಜೇಬಿನಿಂದ 50 ಸಾವಿರ ರೂ ಹಾಗೂ ಎಚ್‌.ಮಣಿ ಅವರ ಜೇಬಿನಿಂದ 15 ಸಾವಿರ ರೂ. ಮತ್ತು ಅದೇ ದಿನ ಮಡಿಕೇರಿ ಕ್ರಿಸ್ಟಲ್ ಕೋರ್ಟ್ ಹಾಲ್‌ನಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಂಗಸಮುದ್ರ ನಿವಾಸಿ ನಿತಿನ್ ಎಚ್.ಎಸ್ ಅವರ ಜೇಬಿನಿಂದ 50 ಸಾವಿರ ರೂ., ವಿರಾಜಪೇಟೆ ನಿವಾಸಿ ಯೋಗೇಶ್ ಅವರ ಜೇಬಿನಿಂದ 32,300 ರೂ.ಗಳು ಹಾಗೂ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಜೇಬಿನಿಂದ 17 ಸಾವಿರ ರೂ.ಗಳು ಕಳುವಾಗಿತ್ತು.

ಈ ಸಂಬಂಧ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಒಟ್ಟು 1,96,300 ರೂ ನಗದು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ನಗರ ಪೊಲೀಸ್ ಠಾಣೆ ಪಿಐ ಪ್ರಕಾಶ್.ಬಿ.ಜಿ, ಪಿಎಸ್‌ಐ ಉಮಾ.ಬಿ.ಎಸ್. ಹಾಗೂ ಉಪವಿಭಾಗ ಮಟ್ಟದ ಅಪರಾಧ ತನಿಖಾ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು.

ಇದನ್ನೂ ಓದಿ: IPL 2024: ಆರ್​ಸಿಬಿ ದಾಖಲೆ ಮುರಿದು ಐಪಿಎಲ್​ನ 2ನೇ ಗರಿಷ್ಠ ರನ್​ ರೆಕಾರ್ಡ್ ಮಾಡಿದ ಕೆಕೆಆರ್​

ಈ ತನಿಖಾ ತಂಡ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ, ಏ.2 ರಂದು ಒಟ್ಟು 13 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.

Exit mobile version