ಶಿವಮೊಗ್ಗ: ರಾತ್ರೋರಾತ್ರಿ ಸರ್ಕಾರಿ ಶಾಲೆಗೆ ನುಗ್ಗಿ ಖದೀಮರು ಕೈ ಚಳಕ (Theft Case) ತೋರಿದ್ದಾರೆ. ಸಾಗರ ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಗ್ರಾಮದ ಜ್ಞಾನ ಸಹ್ಯಾದ್ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳ್ಳತನ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳ್ಳರು ಶಾಲೆಯ ಬೀಗವನ್ನು ಮುರಿಯದೆ ಬದಲಿಗೆ ಚಾವಣಿಯ ಹೆಂಚು ತೆಗೆದು ಅಲ್ಲಿಂದ ಕೊಠಡಿ ಪ್ರವೇಶಿಸಿದ್ದಾರೆ. ಶಾಲೆಯ ಕೊಠಡಿಯಲ್ಲಿದ್ದ ಬೀರುವಿನ ಬೀಗ ಮುರಿದು ವಿವಿಧ ಬೆಲೆಬಾಳುವ ವಸ್ತುಗಳು ಹಾಗೂ ಶಿಕ್ಷಕರ ಕೊಠಡಿಯಲ್ಲಿದ್ದ ಕಂಪ್ಯೂಟರ್, ಸಿಪಿಯುವನ್ನು ಕದ್ದು ಪರಾರಿ ಆಗಿದ್ದಾರೆ. ಶನಿವಾರ (ಏ.22) ಶಾಲೆಯ ಕೆಲಸ ಮುಗಿಸಿ ಬೀಗ ಹಾಕಿ ಹೋಗಿದ್ದ ಸಿಬ್ಬಂದಿ ಸೋಮವಾರ ಬೆಳಗ್ಗೆ ಬಂದು ಬೀಗ ತೆಗೆದು ನೋಡಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ.
ಅನೈತಿಕ ಚಟುವಟಿಕೆಯಾದ ಶಾಲಾ ಆವರಣ
ಶಾಲೆಯು ಊರ ಹೊರ ಭಾಗದಲ್ಲಿರುವ ಕಾರಣದಿಂದಾಗಿ, ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆ ತಾಣವಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ರಾತ್ರಿ ವೇಳೆ ಶಾಲಾ ಆವರಣದೊಳಗೆ ಪ್ರವೇಶಿಸುವ ಕಿಡಿಗೇಡಿಗಳು ಮದ್ಯಪಾನ, ಗಾಂಜಾ ಹಾಗೂ ಬೀಡಿ ಸೇದಿ ತುಂಡುಗಳನ್ನು ಬಿಸಾಕಿ ಹೋಗುವುದು ಮಾಡುತ್ತಿದ್ದಾರೆ.
ಇದು ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುವ ದೃಷ್ಟಿಯಿಂದ ಶಿಕ್ಷಕರು, ಮಕ್ಕಳು ಬರುವ ಮೊದಲೇ ಮದ್ಯದ ಬಾಟಲು, ಸಿಗರೇಟು ತುಂಡುಗಳನ್ನು ತೆಗೆದು ಬಿಸಾಡುವ ಕೆಲಸ ಮಾಡುತ್ತಿದ್ದಾರೆ. ಕಳ್ಳತನದ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆಗಾಗ ಗಸ್ತು ಬರುವಂತೆ ಮಾಡಿದ್ದಾರೆ.
ಸರಗಳ್ಳರ ಹಿಡಿಯಲು ಕಬ್ಬಾಳಮ್ಮನಿಗೆ ಹರಕೆ ಹೊತ್ತ ಬೆಂಗಳೂರು ಪೊಲೀಸರು
ಬೆಂಗಳೂರು: ಜನರ ಸೇವೆಗಾಗಿ ಇರುವ ಪೊಲೀಸರು ಒಮ್ಮೊಮ್ಮೆ ಅಪರಾಧಿಗಳನ್ನು ಹಿಡಿಯಲು ಯಾವ್ಯಾವುದೊ ಮಾರುವೇಷವನ್ನು ಧರಿಸಬೇಕಾಗುತ್ತದೆ. ಹೀಗೆ ಗಿರಿನಗರ ಪೊಲೀಸರಿಗೆ ತಲೆನೋವಾಗಿದ್ದ ಕಳ್ಳರ (Theft Case) ಹಿಡಿಯಲು ಮಾಡಿದ ಸರ್ಕ್ಸಸ್ ಅಷ್ಟಿಷ್ಟಲ್ಲ. ತಿಂಗಳ ಕಾಲ ಮಾರುವೇಷದಲ್ಲಿ ಓಡಾಡಿಕೊಂಡು ಕಾರ್ಯಾಚರಣೆ ಮಾಡಿದ ಪೊಲೀಸರಿಗೆ ಕಬ್ಬಾಳಮ್ಮ ದೇವಿ ಕೈಹಿಡಿದಿದ್ದಾಳೆ.
ಮೋಜಿಗಾಗಿ ಕಳ್ಳತನಕ್ಕೆ ಇಳಿದಿದ್ದ ಆಂಧ್ರಪ್ರದೇಶದ ಬಾಡಿ ಬಿಲ್ಡರ್ ಸೈಯದ್ ಪಾಷಾ ಅವನೊಟ್ಟಿಗೆ ಇದ್ದ ಮತ್ತೊಬ್ಬ ಆರೋಪಿ ಶೇಕ್ ಅಯೂಬ್ ಎಂಬಾತನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳರ ಬಂಧನಕ್ಕೆ ಕಬ್ಬಾಳಮ್ಮ ದೇವಿಗೆ ಕಟ್ಟಿಕೊಂಡಿದ್ದ ಹರಕೆಯನ್ನು ಪೊಲೀಸರು ಈಗ ತೀರಿಸಿದ್ದಾರೆ.
ಅಂದಹಾಗೆ, ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಸರಗಳ್ಳತನ ಪ್ರಕರಣಗಳು ವರದಿ ಆಗಿದ್ದವು. ಹೇಗಾದರೂ ಮಾಡಿ ಕಳ್ಳರನ್ನು ಖೆಡ್ಡಾಕ್ಕೆ ಬೀಳಿಸಬೇಕೆಂದು ಪೊಲೀಸರು ನಾನಾ ಮಾರುವೇಷವನ್ನು ಹಾಕಿದ್ದರು. ಕಳೆದ 25 ದಿನಗಳಿಂದ ನಡೆದ ಪೊಲೀಸರ ಕಾರ್ಯಾಚರಣೆಯೇ ರೋಚಕವಾಗಿತ್ತು.
ಪ್ರತಿದಿನ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು, ಆಟೋ ಚಾಲಕರಾಗಿ, ಲಾರಿ ಕ್ಲೀನರ್, ಲೈನ್‌ಮೆನ್ ಹೀಗೆ ನಾನಾ ವೇಷವನ್ನು ಧರಿಸಿದ್ದರು. ಆದರೆ ತಿಂಗಳು ಕಳೆದರೂ ಕಳ್ಳರ ಜಾಡು ಮಾತ್ರ ಪತ್ತೆಯೇ ಆಗಿರಲಿಲ್ಲ. ಕಡೆಗೆ ಬೇಸತ್ತ ಪೊಲೀಸರು ಕಬ್ಬಾಳಮ್ಮ ದೇವಿ ಮೊರೆ ಹೋಗಿದ್ದರು. ಕಬ್ಬಾಳಮ್ಮನಿಗೆ ಹರಕೆ ಹೊತ್ತ ಮರುಕ್ಷಣವೇ ಕಳ್ಳರು ಖಾಕಿ ಬಲೆಗೆ ಬಿದ್ದಿದ್ದಾರೆ.
ಬಾಡಿ ಬಿಲ್ಡರ್ ಆಗಿರುವ ಸೈಯದ್ ಪಾಷಾ ಪಕ್ಕದ ಆಂಧ್ರಪ್ರದೇಶದಲ್ಲಿ ಬಾಡಿ ಬಿಲ್ಡರ್ ಮಿಸ್ಟರ್ ಆಂಧ್ರ ಎಂಬ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದ್ದ. ಹೀಗೆ ಆಂಧ್ರದಿಂದ ಜಾಲಿ ರೈಡ್‌ಗಾಗಿ ಬೆಂಗಳೂರಿಗೆ ಬರುತ್ತಿದ್ದ ಸೈಯದ್ ಸರಗಳ್ಳತನ ಮಾಡಿ ಪರಾರಿ ಆಗುತ್ತಿದ್ದ. ಇತ್ತೀಚೆಗೆ ಗಿರಿನಗರ ನಿವಾಸಿ ಜಾನಕಿ ಎಂಬುವವರ ಚಿನ್ನದ ಸರ ಕದ್ದು ಪರಾರಿ ಆಗಿದ್ದ. ಈ ಸಂಬಂಧ ಜಾನಕಿ ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು, ಸುತ್ತಮುತ್ತ ಸಿಸಿಟಿವಿ ಪರಿಶೀಲಿಸಿದಾಗ ಸೈಯದ್‌ನ ಕಳ್ಳತನದ ಕೃತ್ಯ ಬಯಲಾಗಿತ್ತು.
ಆಂಧ್ರದ ಕಡಪ ಮೂಲದ ಸೈಯದ್ ಪಾಷಾ ಜಾಲಿ ರೈಡ್‌ನಲ್ಲಿ ಬಂದು ಬೆಂಗಳೂರಿನಲ್ಲಿ ಲಾಡ್ಜ್‌ನಲ್ಲಿ ರೂಮ್‌ವೊಂದನ್ನು ಬುಕ್ ಮಾಡಿ ಪಾರ್ಟಿ ಮಾಡುತ್ತಿದ್ದ. ಮಾರನೇ ದಿನ ಕದ್ದ ಬೈಕ್‌ನಲ್ಲೇ ನಿರಂತರ ಸರಗಳ್ಳತನ ಮಾಡುತ್ತಿದ್ದ. ಸರಗಳ್ಳತನ ನಡೆಸಿ ಬೈಕನ್ನು ಬಿಟ್ಟು ಆಂಧ್ರಕ್ಕೆ ಹೋಗುತ್ತಿದ್ದ. ಬಳಿಕ ಒಂದಷ್ಟು ದಿನ ಬಿಟ್ಟು, ಅದೇ ಬೈಕ್‌ನಲ್ಲಿ ಮತ್ತೆ ಸರಗಳ್ಳತನ ಮಾಡುತ್ತಿದ್ದ.
ಇವನನ್ನು ಖೆಡ್ಡಾಗೆ ಕೆಡವಿಕೊಳ್ಳಲು ಬುದ್ಧಿಗೆ ಕೆಲಸ ಕೊಟ್ಟ ಖಾಕಿ ಪಡೆ, ಬಿಟ್ಟು ಹೋದ ಬೈಕ್‌ಗೆ ಜಿಪಿಎಸ್ ಡಿವೈಸ್‌ವೊಂದನ್ನು ಅಳವಡಿಸಿದ್ದರು. ತಿಂಗಳ ಬಳಿಕ ಬಂದ ಸೈಯಾದ್ ಬೈಕ್‌ನಲ್ಲಿ ಸರಗಳ್ಳತನಕ್ಕೆ ಮುಂದಾಗಿದ್ದು, ಈ ವೇಳೆ ಅಲರ್ಟ್ ಆದ ಪೊಲೀಸರು ಜಿಪಿಎಸ್ ಆ್ಯಕ್ವಿವ್ ಆಗುತ್ತಿದ್ದಂತೆ ಆತನನ್ನು ಹಿಡಿದಿದ್ದಾರೆ.
ಇದನ್ನೂ ಓದಿ: ವಿಡಿಯೊ ನೋಡುತ್ತಿದ್ದಾಗಲೇ ಮೊಬೈಲ್ ಸ್ಫೋಟವಾಗಿ 8 ವರ್ಷದ ಬಾಲಕಿ ಸಾವು; ಮುಖ, ಕೈಯೆಲ್ಲ ಛಿದ್ರಛಿದ್ರ
ಆರೋಪಿಯಿಂದ 6 ಲಕ್ಷ ಮೌಲ್ಯದ 100 ಗ್ರಾಂನ ಎರಡು ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ್ದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಮತ್ತೊಬ್ಬ ಆರೋಪಿ ಶೇಕ್ ಅಯೂಬ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ತಿಂಗಳ ಕಾಲ ತಾಳ್ಮೆಯಿಂದ ಕಾದಿದ್ದ ಪೊಲೀಸರು ಇದೀಗ ಹರಕೆ ತೀರಿಸಲು ಕಬ್ಬಾಳಮ್ಮ ದೇವಳಕ್ಕೆ ತೆರಳಿ, ಪೂಜೆ ಸಲ್ಲಿಸಿದ್ದಾರೆ.