Site icon Vistara News

Karnataka Election 2023: ರಾಜ್ಯದಲ್ಲಿದ್ದಾರೆ 16,976 ಶತಾಯುಷಿ ಮತದಾರರು! 9.17 ಲಕ್ಷ ಮಂದಿ ಫಸ್ಟ್‌ ಟೈಮ್‌ ವೋಟರ್ಸ್‌!

bjp-karnataka-Complaint against congress

#image_title

ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಸಿದ್ಧತೆ ಕೈಗೊಂಡಿದ್ದು, ಇಲ್ಲಿನ ಸಿದ್ಧತೆ ಹಾಗೂ ರಾಜ್ಯದ ಒಟ್ಟಾರೆ ಮತದಾರರ ಅಂಕಿ-ಅಂಶಗಳ ಬಗ್ಗೆ ಆಯೋಗ ಮಾಹಿತಿ ನೀಡಿದೆ. ರಾಜ್ಯದಲ್ಲಿ ಒಟ್ಟು 5,21,76,579 ಕೋಟಿ ಮತದಾರರು ಇದ್ದು, ಈ ಪೈಕಿ 100 ವರ್ಷ ದಾಟಿರುವ 16,976 ಶತಾಯುಷಿ ಮತದಾರರಿದ್ದಾರೆ ಎಂದು ಪ್ರಕಟಿಸಿದೆ.

ಚುನಾವಣೆ ಸಿದ್ಧತೆ ಬಗ್ಗೆ ವಿಕಾಸಸೌಧದಲ್ಲಿ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮಾಹಿತಿ ನೀಡಿದರು.

ಕೇಂದ್ರ ಚುನಾವಣಾ ಆಯೋಗದ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 5,21,76,579 ಕೋಟಿ ಮತದಾರರು ಇದ್ದು, ಇದರಲ್ಲಿ 2,62,42,561 ಮಹಿಳಾ ಮತದಾರರು ಹಾಗೂ 2,59,26,319 ಪುರುಷ ಮತದಾರರು ಇದ್ದಾರೆ. 5,55,073 ವಿಶೇಷಚೇತನ ಮತದಾರರು, 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ 12,15,763 ಮತ್ತು 100ನೇ ವಯಸ್ಸು ದಾಟಿರುವ 16,976 ಜನ ಮತದಾರರಿದ್ದಾರೆ. 9,17,241 ಮತದಾರರು (18-19 ವಯಸ್ಸಿನ) ಮೊದಲ ಮತದಾನಕ್ಕೆ ನೋಂದಣಿಯಾಗಿದ್ದಾರೆ.

ಇದನ್ನೂ ಓದಿ | Karnataka Election 2023: 80 ವರ್ಷ ಮೇಲ್ಪಟ್ಟ ನಾಗರಿಕರು, ವಿಶೇಷಚೇತನರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ; ಹೇಗಿರಲಿದೆ ಪ್ರಕ್ರಿಯೆ?

ರಾಜ್ಯದಲ್ಲಿ 34 ಚುನಾವಣಾ ಜಿಲ್ಲೆಗಳು

ರಾಜ್ಯದಲ್ಲಿ 31 ಕಂದಾಯ ಜಿಲ್ಲೆಗಳಿದ್ದು, 34 ಚುನಾವಣಾ ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ರಾಜ್ಯದ ಜನಸಂಖ್ಯೆ 2011ರ ಜನಗಣತಿಯ ಪ್ರಕಾರ 6.1 ಕೋಟಿ ಮತದಾರರಿದ್ದು, ಸುಮಾರು 50ರಷ್ಟು ಮಹಿಳೆಯರು ಹಾಗೂ ಪುರುಷರಿದ್ದಾರೆ. ಪುರುಷರು 3.09 ಕೋಟಿ (50.6%) ಮಹಿಳೆಯರು 3.01 ಕೋಟಿ (49.34%) ಇದ್ದಾರೆ. 224 ವಿಧಾನಸಭಾ ಕ್ಷೇತ್ರಗಳಿದ್ದು, ಪರಿಶಿಷ್ಟ ಜಾತಿಗೆ 36 ಮತ್ತು ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳನ್ನು ಮೀಸಲಿಡಲಾಗಿದೆ.

80 ವರ್ಷ ದಾಟಿದ ಹಿರಿಯರು ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ವೋಟ್‌

ಎಲ್ಲರಿಗೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಹಾಗೂ ವಿಶೇಷ ಚೇತನರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯಗಳನ್ನು ಮಾಡಲಾಗಿದೆ. ಆದರೂ, ಮತದಾನ ಕೇಂದ್ರಕ್ಕೆ ಆಗಮಿಸಲು ಸಾಧ್ಯವಾಗದೇ ಇರುವಂತಹ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ತಗೆದುಕೊಂಡು ಪಾರದರ್ಶಕವಾದ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ವಿಶೇಷಚೇತನರಿಗೆ ಮತದಾನಕ್ಕೆ ವಿಶೇಷ ಸೌಲಭ್ಯ

ವಿಶೇಷಚೇತನ ಮತದಾರರಿಗೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಮನೆಯಿಂದ ಮತಗಟ್ಟೆಗೆ ಪಿಕ್‌ ಆ್ಯಂಡ್‌ ಡ್ರಾಪ್‌, ಸಕ್ಷಮ್‌ ಆ್ಯಪ್‌ ಮೂಲಕ ತಮಗೆ ಬೇಕಾದ ಸೌಲಭ್ಯಗಳ ಬಗ್ಗೆ ಮೊದಲೇ ನೊಂದಾಯಿಸಿಕೊಳ್ಳುವ ಅವಕಾಶ. ವ್ಹೀಲ್‌ ಚೇರ್‌, ಪ್ರೈಯಾರಿಟಿ ವೋಟಿಂಗ್‌, ದೃಷ್ಟಿ ದೋಷದ ಮತದಾರರಿಗೆ ಬೈಲ್‌ ಬ್ಯಾಲಟ್‌ ಪೇಪರ್‌ ನಂತಹ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಮೊದಲ ಬಾರಿ ಮತದಾರರಿಗೆ ಒತ್ತು

ಚುನಾವಣಾ ಆಯೋಗದ ಪ್ರಯತ್ನದಿಂದ ಈ ಬಾರಿ 9.17 ಲಕ್ಷ ಮೊದಲ ಬಾರಿಯ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಅಲ್ಲದೇ, ಅಡ್ವಾನ್ಸ್‌ ಅಪ್ಲಿಕೇಷನ್‌ ಸೌಲಭ್ಯದ ಮೂಲಕ ಈಗಾಗಲೇ 1.25 ಲಕ್ಷ ಯುವಕರು ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ 41,000 ಮತದಾರರು ಏಪ್ರಿಲ್‌ 1ರಿಂದ ಮತದಾನಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಮತದಾನದ ಮಹತ್ವದ ಬಗ್ಗೆ ಇವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತಿದೆ.

ದುರ್ಬಲ ಬುಡಕಟ್ಟು ಜನಾಂಗದವರು ಚುನಾವಣೆಯಲ್ಲಿ ಪಾಲ್ಗೊಳ್ಳಲು ವಿಶೇಷ ಒತ್ತು

ರಾಜ್ಯದ ದುರ್ಬಲ ಬುಡಕಟ್ಟು ಜನಾಂಗಗಳಾದ ಜೇನು ಕುರುಬ ಮತ್ತು ಕೊರಗ ಬುಡಕಟ್ಟು ಜನಾಂಗದವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ವಿಶೇಷ ಒತ್ತು ನೀಡಲಾಗಿದೆ. ಇವರಲ್ಲಿ ಅರ್ಹರಿರುವರಿಗೆ ಶೇಕಡಾ 100 ರಷ್ಟು ಜನರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ, ರಾಜ್ಯದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ 40 ಎಥ್ನಿಕ್‌ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು.

ತೃತೀಯ ಲಿಂಗಿಗಳಿಗೂ ಅವಕಾಶ

ರಾಜ್ಯದಲ್ಲಿ ಸುಮಾರು 42,756 ಜನ ತೃತೀಯ ಲಿಂಗಿಗಳಿದ್ದು, ಇವರಲ್ಲಿ 41,312 ಜನರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗಿದೆ. ಇವರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎನ್ನುವುದು ಆಯೋಗದ ಆಶಯವಾಗಿದೆ.

58,282 ಮತಗಟ್ಟೆಗಳ ಸ್ಥಾಪನೆ

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಂತೆ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ನಗರ ಪ್ರದೇಶಗಳಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳು ಇರಲಿವೆ. ವಿಶೇಷವಾಗಿ 1320 ಮಹಿಳಾ ಮತಗಟ್ಟೆಗಳು, 224 ಯುವ ಅಧಿಕಾರಿಗಳು ನಿರ್ವಣೆಯ, 224 ವಿಶೇಷ ಚೇತನರು ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ರಾಜ್ಯದ ಸುಮಾರು 1200 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿದ್ದು ಇವುಗಳ ನಿರ್ವಹಣೆಗೆ ಅಗತ್ಯ ಹೆಚ್ಚಿನ ಭದ್ರತೆಯ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಜ್ಯದ ಶೇಕಡಾ 50 ರಷ್ಟು ಮತಗಟ್ಟೆಗಳು ವೆಬ್‌ಕಾಸ್ಟಿಂಗ್‌ ಸೌಲಭ್ಯವನ್ನು ಹೊಂದಿವೆ.

ಶಾಶ್ವತ ಮೂಲಭೂತ ಸೌಕರ್ಯಗಳ ಅಳವಡಿಕೆ

ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ ಮತ್ತು ಅಂಗವಿಕಲರಿಗೆ ರ್ಯಾಂಪ್‌ ನಂತಹ ಸೌಲಭ್ಯಗಳನ್ನ ಪ್ರತಿ ಚುನಾವಣೆಯ ಸಂಧರ್ಭದಲ್ಲಿ ಅಳವಡಿಸಲಾಗುತ್ತದೆ. ಪ್ರತಿ ಬಾರಿ ತಾತ್ಕಾಲಿಕವಾಗಿ ಈ ಸೌಕರ್ಯಗಳನ್ನು ಅಳವಡಿಸುವ ಚಿಂತನೆಯನ್ನು ಬಿಟ್ಟು, ಶಾಶ್ವತವಾಗಿ ಸೌಕರ್ಯಗಳನ್ನು ಅಳವಡಿಸಲಾಗುವುದು. ಚುನಾವಣಾ ಆಯೋಗದ ವತಿಯಿಂದ ಆಯಾ ಶಾಲೆಗಳಿಗೆ ಇದು ಉಡುಗೊರೆಯಾಗಿರಲಿದೆ. ಚುನಾವಣಾ ಆಯೋಗದ ವತಿಯಿಂದ ಸುವಿಧಾ ವೆಬ್ ಸೈಟ್‌ ಮತ್ತು ಸಕ್ಷಮ್‌ ಆಪ್‌ ರಚಿಸಲಾಗಿದ್ದು ಮತದಾರರು ಹಾಗೂ ರಾಜಕೀಯ ಪಕ್ಷಗಳು ತಮ್ಮ ಹಲವಾರು ಅಗತ್ಯತೆಗಳಿಗೆ ಇವುಗಳನ್ನು ಬಳಸಿಕೊಳ್ಳಬಹುದಾಗಿದೆ.

ಚುನವಾಣೆಯ ಸಂಧರ್ಭದಲ್ಲಿ ಹಣ ಪ್ರಭಾವವನ್ನು ಬಳಸಿ ನಡೆಸಲಾಗುವ ಚುನಾವಣಾ ಆಕ್ರಮವನ್ನು ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲಿವೆ. ಈ ಬಗ್ಗೆ ಅಧಿಕಾರಿಗಳೀಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಿ ವಿಜಿಲ್‌ ಅಪ್‌ ಮೂಲಕ ಜನ ಸಾಮಾನ್ಯರು ಚುನಾವಣಾ ಅಕ್ರಮವನ್ನು ಅನಾಮಧೇಯವಾಗಿ ದೂರು ನೀಡಬಹುದಾಗಿದೆ.

ಎಲೆಕ್ಯಾಥಾನ್‌ 2023 ಹ್ಯಾಕಥಾನ್‌ ಅನ್ನು ಮಾ.10 ರಂದು ಪ್ರಾರಂಭಿಸಿದ್ದು, ಹೊಸ ಮತದಾರರನ್ನು ಪಟ್ಟಿಗೆ ಸೇರಿಸುವುದು ಹಾಗೂ ಮತದಾನದ ಬಗ್ಗೆ ನಗರ ಪ್ರದೇಶ ಹಾಗೂ ಯುವ ಜನರಲ್ಲಿ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ನೂತನ ಕ್ರಮಗಳನ್ನು ಗುರುತಿಸುವ ಪ್ರಮುಖ ಉದ್ದೇಶದಿಂದ ಈ ಹ್ಯಾಕಥಾನ್‌ ಎಲೆಕ್ಯಾಥಾನ್‌ – 2023 ಆಯೋಜಿಸಲಾಗಿದೆ. ಮೂರು ಹಂತಗಳಲ್ಲಿ 30 ದಿನಗಳ ಕಾಲ ನಡೆಯಲಿರುವ ಈ ಹ್ಯಾಕಥಾನನ್‌ನಲ್ಲಿ ಜನರು ಭಾಗವಹಿಸಿ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕು ಎಂದು ಕರೆ ನೀಡಿದರು.

Exit mobile version