ಬೆಂಗಳೂರು: ತಮಗೆ ಸಿಗುತ್ತಿದ್ದ ಶೇ.4 ಮೀಸಲಾತಿಯನ್ನು ರದ್ದುಪಡಿಸಿದ್ದಕ್ಕೆ ಆಕ್ರೋಶಗೊಂಡು ಮುಸ್ಲಿಂ ಸಮುದಾಯದವರು ಬೀದಿಗೆ ಇಳಿದಿದ್ದರೆ ಅಮಾಯಕರ ಬಲಿಯಾಗುತ್ತಿತ್ತು. ಇದಕ್ಕೆ ಯಾರು ಹೊಣೆಯಾಗುತ್ತಿದ್ದರು? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಮೀಸಲಾತಿ ಸಂಬಂಧ ಬಂಜಾರ ಸಮುದಾಯ ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಿರುವ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮೀಸಲಾತಿ ವ್ಯವಸ್ಥೆ ಹೇಗಿರಬೇಕು ಎಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಂದಷ್ಟು ನಿಯಮಾವಳಿ ರೂಪಿಸಿದ್ದಾರೆ. ಆದರೆ ಈ ರೀತಿ ಮತ ಪಡೆಯುವ ಸಲುವಾಗಿ ಜಾತಿ ಜಾತಿಗಳ ನಡುವೆ ಸಂಘರ್ಷ ತಂದಿಡಬಾರದು. ಎರಡೂ ರಾಷ್ಟ್ರೀಯ ಪಕ್ಷಗಳು ಇಂತಹ ಕೆಲಸ ಮಾಡುತ್ತಿವೆ.
ಸ್ವೇಚ್ಛಾಚಾರದಿಂದ ಇಷ್ಟ ಬಂದಂತೆ ಬಿಜೆಪಿ ಸರ್ಕಾರ ತೀರ್ಮಾನ ಮಾಡಿದೆ. ಮುಸ್ಲಿಂ ಸಮುದಾಯದ ನಡವಳಿಕೆಯನ್ನು ನಾನು ಶ್ಲಾಘಿಸುತ್ತೇನೆ. ಬಂಜಾರ ಸಮುದಾಯದಲ್ಲಿ ಆತಂಕ ಉಂಟಾಗಿ ಗಲಾಟೆ ಆಗಿದೆ. ಶೇ> 4 ಮೀಸಲಾತಿ ಕಿತ್ತು ಹಾಕಿದ್ದಕ್ಕೆ ಮುಸ್ಲಿಂ ಸಮುದಾಯ ಬೇಸರವಾಗಿ ಬೀದಿಗೆ ಇಳಿದಿದ್ದರೆ ಅಮಾಯಕರ ಬಲಿಯಾಗುತ್ತಿತ್ತು. ಅದನ್ನು ಯಾರು ತಡೆಯುತ್ತಿದ್ದರು? ಹೊಣೆ ಯಾರು?
ಸಮಾಜದಲ್ಲಿ ಸಂಘರ್ಷ ಆಗಬೇಕು ಎನ್ನುವುದು ಬಿಜೆಪಿ ಗುರಿ. ಮುಸ್ಲಿಂ ಸಮುದಾಯ ನಿಮ್ಮ ಹಕ್ಕು ಪಡೆಯಲು ಹೋರಾಟ ಮಾಡಿ ಎಂದು ಮನವಿ ಮಾಡಿದರು. ಈಗಿನ ಮೀಸಲಾತಿ ಬದಲಾವಣೆ ಕುರಿತು ಜೆಡಿಎಸ್ ಬೆಂಬಲ ಇಲ್ಲ. ಸ್ವಾತಂತ್ರ್ಯ ಲಭಿಸಿ 75 ವರ್ಷದ ನಂತರವೂ ಸಮಾಜಗಳು ಹೇಗಿವೆ ಎನ್ನುವುದನ್ನು ಆಲೋಚಿಸಿ ನಿರ್ಧಾರ ಮಾಡಬೇಕು. ಮೀಸಲಾತಿಗಾಗಿ ಜನರು ಹೊಡೆದಾಡುತ್ತಿರುವುದು ಸರ್ಕಾರಿ ನೌಕರರಿಗಾಗಿ. ಆದರೆ ಈ ಸರ್ಕಾರದಲ್ಲಿ 80 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಲಂಚ ನಡೆಯುತ್ತಿದೆ. ನಮ್ಮ ಸರ್ಕಾರ ಬಂದರೆ ಈಗಿನ ಬಿಜೆಪಿ ಸರ್ಕಾರದ ಮೀಸಲಾತಿಯನ್ನು ಕಿತ್ತೊಗೆಯುವ ಜತೆಗೆ ಇಡೀ ನೇಮಕ ವ್ಯವಸ್ಥೆಯನ್ನೇ ಬದಲಾವಣೆ ಮಾಡುತ್ತೇನೆ. ಶುದ್ಧ ಮಾಡುತ್ತೇನೆ ಎನ್ನುತ್ತಲೇ ವ್ಯವಸ್ಥೆಯನ್ನು ಹದಗೆಡಿಸಿದ್ದಾರೆ ಎಂದರು.