Site icon Vistara News

Shivamogga terror | ಸಾವರ್ಕರ್‌-ಟಿಪ್ಪು ಗಲಾಟೆಗೂ ಉಗ್ರ ಜಾಲ ಪತ್ತೆಗೂ ಲಿಂಕ್‌, ಜಬಿ ವಿಚಾರಣೆ ವೇಳೆ ಸಿಕ್ತು ಸುಳಿವು

ಶಿವಮೊಗ್ಗ:‌ ಶಿವಮೊಗ್ಗ ಪೊಲೀಸರು ನಡೆಸಿದ ಉಗ್ರ ಜಾಲ ಬಯಲು ಕಾರ್ಯಾಚರಣೆಗೂ ಆಗಸ್ಟ್‌ ೧೫ರಂದು ಶಿವಮೊಗ್ಗದಲ್ಲಿ ನಡೆದ ಸಾವರ್ಕರ್‌-ಟಿಪ್ಪು ಫ್ಲೆಕ್ಸ್‌ ಗಲಾಟೆಗೂ ಸಂಬಂಧವಿರುವುದನ್ನು ಸ್ವತಃ ಎಸ್‌ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್‌ ಒಪ್ಪಿಕೊಂಡಿದ್ದಾರೆ. ಹಾಗಂತ, ಇದು ನೇರ ಸಂಬಂಧವೇನೂ ಅಲ್ಲ. ಸಾವರ್ಕರ್‌ ಪ್ರಕರಣದ ವೇಳೆ ನಡೆದ ಚೂರಿ ಇರಿತ ಪ್ರಕರಣದ ಆರೋಪಿಯ ವಿಚಾರಣೆಯ ವೇಳೆ ಈ ಜಾಲದ ಸುಳಿವು ಸಿಕ್ಕಿದೆ.

ಶಿವಮೊಗ್ಗ ಪೊಲೀಸರು ಉಗ್ರ ಜಾಲವೊಂದನ್ನು ಬೇಧಿಸಿದ್ದು, ಮೂವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ. ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯ ಮಹಮ್ಮದ್‌ ಶಾರೀಕ್‌, ಶಿವಮೊಗ್ಗದ ಸಿದ್ಧೇಶ್ವರ ನಗರದ‌ ಸೈಯದ್‌ ಯಾಸಿನ್‌ ಮತ್ತು ಮಂಗಳೂರಿನ ಮಾಜ್‌ ಮುನೀರ್‌ ಅಹಮ್ಮದ್ ಇವರು ದುಷ್ಕೃತ್ಯ ನಡೆಸಲು ಸಂಚು ನಡೆಸುತ್ತಿದ್ದರು, ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಪೊಲೀಸರು ಇವರಲ್ಲಿ ಯಾಸಿನ್‌ ಮತ್ತು ಮಾಜ್‌ನನ್ನು ಬಂಧಿಸಿದ್ದಾರೆ. ಶಾರೀಕ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತರನ್ನು ಸೆಪ್ಟೆಂಬರ್‌ ೧೯ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಸ್ಪೋಟಕ್ಕೆ ಸಂಚು ನಡೆಸುತ್ತಿದ್ದರು
ಈ ವ್ಯಕ್ತಿಗಳು ಒಂದು ಗುಪ್ತ ಜಾಲವನ್ನು ಸೃಷ್ಟಿ ಮಾಡಿಕೊಂಡು ರಾಜ್ಯದಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದರು ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇವರು ನಿಷೇಧಿತ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವುದು ಬಯಲಾಗಿದ್ದು, ಬಾಂಬ್‌ ತಯಾರಿಕೆಯ ಬಗ್ಗೆಯೂ ತರಬೇತಿ ಹೊಂದಿದ್ದರು ಎನ್ನಲಾಗಿದೆ. ಈಗ ಪೊಲೀಸ್‌ ಕಸ್ಟಡಿಯಲ್ಲಿರುವವರ ವಿಚಾರಣೆಯಿಂದ ಹೆಚ್ಚಿನ ಮಾಹಿತಿಗಳು ಹೊರಬರಲಿವೆ.

ಎಂಜಿನಿಯರಿಂಗ್‌ ಕಲಿತವರು
ಬಂಧಿತ ಮಾಜ್‌ ಮುನೀರ್‌ ಅಹಮದ್‌ ಎಮ್‌ ಟೆಕ್‌ ಪದವೀಧರನಾಗಿದ್ದರೆ, ಸೈಯದ್‌ ಯಾಸಿನ್‌ ಎಲೆಕ್ಟ್ರಿಕಲ್‌ ಎಂಜಿನಿಯರ್‌. ಇಬ್ಬರೂ ೨೨-೨೩ ವರ್ಷದವರು. ಇಬ್ಬರೂ ತಾಂತ್ರಿಕ ಪರಿಣತರಾಗಿರುವುದರಿಂದ ಅವರು ಬಾಂಬ್‌ ತಯಾರಿಕೆ ಕೃತ್ಯದಲ್ಲಿ ಪರಿಣತಿ ಪಡೆಯುವುದು ಸುಲಭ ಸಾಧ್ಯವಾಗಿದೆ ಎನ್ನಲಾಗಿದೆ. ಒಂದೊಮ್ಮೆ ಪೊಲೀಸರು ಇವರನ್ನು ಬಂಧಿಸದೆ ಹೋಗಿದ್ದರೆ ಈ ಜಾಲವನ್ನು ಬೇಧಿಸದೆ ಹೋಗಿದ್ದರೆ ರಾಜ್ಯದ ಒಂದು ಭಾಗದಲ್ಲಿ ಬಾಂಬ್‌ ಸ್ಫೋಟ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಸುಳಿವು ನೀಡಿದ್ದು ಜಬಿಯುಲ್ಲಾ ವಿಚಾರಣೆ
ಶಿವಮೊಗ್ಗದಲ್ಲಿ ಉಗ್ರ ಜಾಲವೊಂದು ಕಾರ್ಯಾಚರಿಸುತ್ತಿರುವುದರ ಸಣ್ಣ ಸುಳಿವು ಸಿಕ್ಕಿದ್ದು ಜಬಿಯುಲ್ಲಾ ಎಂಬಾತನ ವಿಚಾರಣೆಯ ವೇಳೆ ಎಂದು ಎಸ್‌ಪಿ ತಿಳಿಸಿದ್ದಾರೆ. ಆಗಸ್ಟ್‌ ೧೫ರಂದು ಶಿವಮೊಗ್ಗ ಟಿಪ್ಪು ನಗರದಲ್ಲಿ ಸಾಮಾನ್ಯವಾಗಿ ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹಾಕುವ ವೃತ್ತದಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ವಿ.ಡಿ. ಸಾವರ್ಕರ್‌ ಅವರ ಫ್ಲೆಕ್ಸ್‌ ಹಾಕಿದ್ದರು. ಅದನ್ನು ತೆಗೆದು ಟಿಪ್ಪು ಸುಲ್ತಾನ್‌ ಫ್ಲೆಕ್ಸ್‌ ಹಾಕುವ ಪ್ರಯತ್ನ ನಡೆದಾಗ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಈ ನಡುವೆ ನಗರದ ಒಂದು ಭಾಗದಲ್ಲಿ ಪ್ರೇಮ್‌ ಸಿಂಗ್‌ ಎಂಬ ವ್ಯಾಪಾರಿ ಗಲಾಟೆಯಾಗುತ್ತಿದೆ ಎಂಬ ಕಾರಣಕ್ಕಾಗಿ ಬೇಗ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದರು. ಆ ವೇಳೆ ಅವರ ಮೇಲೆ ಚೂರಿಯಿಂದ ಇರಿಯಲಾಗಿತ್ತು. ಈ ರೀತಿ ಚೂರಿಯಿಂದ ಇರಿದವನು ಜಬಿಯುಲ್ಲಾ ಎಂಬಾತ ಎನ್ನುವುದು ಬಳಿಕ ಗೊತ್ತಾಗಿ ಆತನನ್ನು ಬಂಧಿಸಲಾಯಿತು.

ಜಬಿಯನ್ನು ಕೆಲವು ದಿನ ಪೊಲೀಸ್‌ ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಿದ ವೇಳೆ ಆತ ಸಿದ್ದೇಶ್ವರ ನಗರದ ಯಾಸಿನ್‌ನ ಚಟುವಟಿಕೆಗಳ ಬಗ್ಗೆ ಒಂದು ಸಣ್ಣ ಸುಳಿವೊಂದನ್ನು ನೀಡಿದ್ದ. ಇದನ್ನು ಬೆನ್ನಟ್ಟಿದ್ದಾಗ ದೊಡ್ಡ ಜಾಲವೇ ಬಯಲಿಗೆ ಬಂದಿದೆ. ಆದರೆ, ಈ ಘಟನೆಗೂ ಸಾವರ್ಕರ್‌-ಟಿಪ್ಪು ಗಲಾಟೆಗೂ ಯಾವುದೇ ಸಂಬಂಧ ಇರುವುದು ಸದ್ಯಕ್ಕೆ ಬಯಲಿಗೆ ಬಂದಿಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ. ಜಬಿಗೂ ಈ ಟೆರರ್‌ ಲಿಂಕ್‌ಗೂ ಸಂಬಂಧ ಇರುವ ಬಗ್ಗೆಯೂ ಮಾಹಿತಿ ಇಲ್ಲ ಎಂದರು.

ಎರಡು ವರ್ಷದ ಹಿಂದೆ ಇಬ್ಬರ ಬಂಧನವಾಗಿತ್ತು!
ಎರಡು ವರ್ಷದ ಹಿಂದೆ ಮಂಗಳೂರಿನಲ್ಲಿ ಲಷ್ಕರೆ ತಯ್ಬಾ ಉಗ್ರ ಸಂಘಟನೆ ಪರವಾಗಿ ಗೋಡೆ ಬರಹಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿ ೨೦೨೦ರ ನವೆಂಬರ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಆ ಇಬ್ಬರು ವ್ಯಕ್ತಿಗಳೇ ಈಗ ಶಿವಮೊಗ್ಗದಲ್ಲಿ ಪತ್ತೆಯಾದ ಶಂಕಿತ ಉಗ್ರರಾದ ಮಾಜ್‌ ಮುನೀರ್‌ ಅಹಮದ್‌ ಮತ್ತು ಶಾರೀಕ್‌.

ನವೆಂಬರ್‌ ೨೭ರ ಮುಂಜಾನೆ ಮಂಗಳೂರಿನ ಕದ್ರಿಯಲ್ಲಿರುವ ಕೋರ್ಟ್‌ ರಸ್ತೆಯ ಹಳೆ ಪೊಲೀಸ್‌ ಔಟ್‌ ಪೋಸ್ಟ್‌ನ ಗೋಡೆಯಲ್ಲಿ ಲಷ್ಕರ್‌ ತಯ್ಬಾ ಮತ್ತು ತಾಲಿಬಾನ್‌ ಪರವಾಗಿ ಗೋಡೆಬರಹ ಬರೆದಿದ್ದರು. ಅದಕ್ಕಿಂತ ಮೊದಲು ಬೇರೊಂದು ಕಡೆ ಇದೇ ರೀತಿ ಬರೆದಿದ್ದರೂ ಅದರು ಗಮನ ಸೆಳೆದಿರಲಿಲ್ಲ. ಹೀಗಾಗಿ ಎಲ್ಲರಿಗೂ ಕಾಣುವ ಜಾಗದಲ್ಲಿ ಮತ್ತೊಮ್ಮೆ ಬರೆದಿದ್ದರು. ಟವರ್‌ ಲೊಕೇಶನ್‌ ಮತ್ತು ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಆಗ ಮಾಜ್‌ ಮುನೀರ್‌ ಅಹ್ಮದ್‌ ಎಂಟೆಕ್‌ ವಿದ್ಯಾಭ್ಯಾಸ ಮಾಡುತ್ತಿದ್ದರೆ ಶಾರೀಕ್‌ ತನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜತೆಗೆ ಫುಡ್‌ ಡೆಲಿವರಿ ಸೇವೆಯಲ್ಲೂ ಇರುತ್ತಿದ್ದ. ಆಗಾಗ ಮಂಗಳೂರಿಗೆ ಬಂದು ಮಾಝ್‌ನನ್ನು ಭೇಟಿಯಾಗುತ್ತಿದ್ದ.

ಮಂಗಳೂರಲ್ಲಿ ಕಂಡುಬಂದಿದ್ದ ಗೋಡೆಬರಹ

ಏನು ಬರೆಯಲಾಗಿತ್ತು?
ಲಷ್ಕರ್‌ ಜಿಂದಾಬಾದ್‌ ಎಂಬ ಹ್ಯಾಷ್‌ ಟ್ಯಾಗ್‌ ಹಾಕಿ ʻಸಂಘಿಗಳೇ ನಿಮ್ಮದು ಅತಿಯಾದರೆ ಲಷ್ಕರೆ ತಯ್ಬಾ ಮತ್ತು ತಾಲಿಬಾನ್‌ ಬರಬೇಕಾಗುತ್ತದೆʼʼ ಎಂದು ಎಚ್ಚರಿಕೆ ನೀಡಲಾಗಿತ್ತು. ಈ ಬರಹ ಉರ್ದುವಿನಲ್ಲಿತ್ತು.
ಅಂದು ರಾಷ್ಟ್ರೀಯ ತನಿಖಾ ದಳವೇ ದಿಲ್ಲಿಯಿಂದ ಬಂದು ಇಲ್ಲಿ ತನಿಖೆಯನ್ನು ನಡೆಸಿತ್ತು. ಈ ಇಬ್ಬರು ವ್ಯಕ್ತಿಗಳಿಗೆ ಉಗ್ರ ಸಂಘಟನೆಗಳ ಜತೆ ಸಂಪರ್ಕವಿದೆ ಎಂಬ ಮಾಹಿತಿಯನ್ನು ಅಂದೂ ನೀಡಲಾಗಿತ್ತು. ಆದರೆ, ಅಚ್ಚರಿ ಎಂದರೆ, ಇದೇ ವ್ಯಕ್ತಿಗಳಿಗೆ ಕೋರ್ಟ್‌ ೨೦೨೧ರ ಸೆಪ್ಟೆಂಬರ್‌ ೮ರಂದು ಕೋರ್ಟ್‌ ಜಾಮೀನು ನೀಡಿತ್ತು. ಮಾಝ್‌ ಮತ್ತು ಶಾರೀಕ್‌ ಕಳೆದ ಒಂದು ವರ್ಷದ ಅವಧಿಯಲ್ಲಿ ಮತ್ತೆ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಈಗ ಅವರನ್ನು ಮತ್ತೆ ಬಂಧಿಸಲು ಮುಂದಾಗಿರುವ ವಿದ್ಯಮಾನದಿಂದ ಸ್ಪಷ್ಟವಾಗಿದೆ.

ಶಿವಮೊಗ್ಗದಲ್ಲಿ ಪತ್ತೆಯಾದ ಉಗ್ರ ಜಾಲಕ್ಕೆ ಸಂಬಂಧಿಸಿದ ಎರಡು ಲಿಂಕ್‌ಗಳನ್ನು ಓದಿ
Terror link | ಶಿವಮೊಗ್ಗದಲ್ಲಿ ಉಗ್ರ ಜಾಲ ಪತ್ತೆ, ಎಂಜಿನಿಯರ್ ಯಾಸಿನ್‌ ಸಹಿತ ಇಬ್ಬರು ಅರೆಸ್ಟ್‌, ಕಿಂಗ್‌ಪಿನ್‌ಗೆ ಶೋಧ
Shivamogga terrror | ಬಂಧಿತರಿಗೆ ಮಂಗಳೂರು ಗೋಡೆಬರಹ ಲಿಂಕ್‌, ಲಷ್ಕರ್‌ ಜತೆ ಸಂಬಂಧ, ಬಾಂಬ್‌ ಸ್ಫೋಟಕ್ಕೆ ಸ್ಕೆಚ್‌?

Exit mobile version