Site icon Vistara News

Siddu Nijakanasugalu : ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಪಕ್ಕಾ; ಕಾನೂನು ಕ್ರಮದ ಬಗ್ಗೆ ನೋಡ್ತೀನಿ ಅಂದ್ರು ಸಿದ್ದರಾಮಯ್ಯ

siddu nijakanasugalu bjp ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಬಿಜೆಪಿ ಸಿದ್ಧಪಡಿಸಿರುವ “ಸಿದ್ದು ನಿಜ ಕನಸುಗಳು” (Siddu Nijakanasugalu) ಪುಸ್ತಕ ಲೋಕಾರ್ಪಣೆ ಮಾಡದಿರಲು ಕಾಂಗ್ರೆಸ್‌ ಪೊಲೀಸರಿಗೆ ದೂರು ನೀಡಿದ್ದರೂ ಬಗ್ಗದ ಬಿಜೆಪಿ ಸೋಮವಾರ ಮಧ್ಯಾಹ್ನ ೩ ಗಂಟೆಗೆ ಪುಸ್ತಕವನ್ನು ಬಿಡುಗಡೆ ಮಾಡಲಿದೆ. ಇನ್ನು ಈ ಬಗ್ಗೆ ರಾಜ್ಯ ಕುರುಬರ ಸಂಘ ಪ್ರತಿಭಟನೆಗೆ ಮುಂದಾಗಿದ್ದರೆ, ಕಾನೂನು ಕ್ರಮದ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ “ಪುಸ್ತಕ” ವಿವಾದವು ಸಂಘರ್ಷದ ಹಾದಿ ಹಿಡಿದಿದೆ.

ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಪಕ್ಷಗಳ ನಡುವಿನ ವಾಕ್ಸಮರ, ವಿವಾದಗಳು ಹೆಚ್ಚಾಗುತ್ತಿವೆ. ಯಾವುದೇ ಪಕ್ಷವು ಏನೇ ಮಾಡಲು ಮುಂದಾದರೂ ಅದಕ್ಕೆ ಪ್ರತಿಯಾಗಿ ಕೌಂಟರ್‌ ಕೊಡುವ ಬೆಳವಣಿಗೆ ನಡೆದಿದ್ದು, ಈಗ ಇದಕ್ಕೆ ಸಿದ್ದು ನಿಜ ಕನಸುಗಳು ಪುಸ್ತಕ ಸಾಕ್ಷಿಯಾಗಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿದ್ದ ಟಿಪ್ಪು ನಿಜ ಕನಸುಗಳು ಬುಕ್ ಮಾದರಿಯಲ್ಲಿ “ಸಿದ್ದರಾಮಯ್ಯ ನಿಜ ಕನಸುಗಳು” ಪುಸ್ತಕ ಬಿಡುಗಡೆಗೆ ಮುಂದಾಗಲಾಗಿದೆ.

siddu nijakanasugalu bjp ಸಿದ್ದರಾಮಯ್ಯ

ಸೋಮವಾರ (ಜ.೯) ಮಧ್ಯಾಹ್ನ ಮೂರು ಗಂಟೆಗೆ ಟೌನ್‌ಹಾಲ್‌ನಲ್ಲಿ ಸಚಿವ ಅಶ್ವಥ್ ನಾರಾಯಣ ಮತ್ತು ಛಲವಾದಿ ನಾರಾಯಣ ಸ್ವಾಮಿ ಅವರಿಂದ “ಸಿದ್ದು ನಿಜ ಕನಸುಗಳು ಪುಸ್ತಕ” ಬಿಡುಗಡೆಗೊಳ್ಳಲಿದೆ. ಸಿದ್ದರಾಮಯ್ಯ ಅವರ ೫ ವರ್ಷಗಳ ಆಡಳಿತ ಅವಧಿಯಲ್ಲಿ ಆಗಿರುವ ಹಿಂದು ಯುವಕರ ಹತ್ಯೆ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ. ಸುಮಾರು 13ಕ್ಕೂ ಹೆಚ್ಚು ಯುವಕರ ಕೊಲೆ ಆಗಿತ್ತು ಎಂದು ಈ ಪುಸ್ತಕದ ಮೂಲಕ ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ | Sankranti 2023 | ʻಸಂಕ್ರಾಂತಿ ತಕಥೈʻ ಹಾಡಿನಲ್ಲಿ ಸ್ಯಾಂಡಲ್‌ವುಡ್‌ , ಟಾಲಿವುಡ್‌ ಸಮಾಗಮ!

ಹಿಂದು ಕಾರ್ಯಕರ್ತರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಸೇರಿದಂತೆ 13ಕ್ಕೂ ಹೆಚ್ಚು ಯುವಕರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, 2018ರಲ್ಲಿ ಇದೇ ಅಸ್ತ್ರವನ್ನು ಬಳಸಿಕೊಂಡಿದ್ದ ಬಿಜೆಪಿ ಕರಾವಳಿ ಕರ್ನಾಟಕವನ್ನು ಫುಲ್ ಸ್ವೀಪ್ ಮಾಡಿತ್ತು. ಅದೇ ಮಾದರಿಯಲ್ಲಿ ರಾಜ್ಯದ ಹಿಂದುಗಳ ಪಾಲಿಗೆ ಸಿದ್ದರಾಮಯ್ಯ ಆಧುನಿಕ ಟಿಪ್ಪು ಎಂದು ಬಿಜೆಪಿ ಈಗ ಬಿಂಬಿಸಲು ಹೊರಟಿದೆ.

ಸಿದ್ದು ನಿಜ ಕನಸುಗಳು ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳು?
-ಸಿದ್ದರಾಮಯ್ಯ ಕಾಲದಲ್ಲಿ 13 ಜನ ಹಿಂದು ಕಾರ್ಯಕರ್ತರ ಕೊಲೆ
-ಮುಸ್ಲಿಂ ಓಲೈಕೆ ಮಾಡಲು ಶಾದಿ ಭಾಗ್ಯ ಜಾರಿ ಮಾಡಿರುವುದು
-ಹಿಂದುಳಿದ ಮತ್ತು ಮುಸ್ಲಿಂ ಸಮುದಾಯದ ಮಕ್ಕಳಿಗೆ ಪ್ರವಾಸ ಭಾಗ್ಯ ನೀಡಿರುವುದು
-ಸಿದ್ದರಾಮಯ್ಯ ಸಿಎಂ ಆಗುವ ಸಲುವಾಗಿ ಪರಮೇಶ್ವರ್ ಅವರನ್ನು ಸೋಲಿಸಿರುವುದು

ಈ ಎಲ್ಲ ಅಂಶಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ಕಾರಣಕ್ಕಾಗಿ ಪುಸ್ತಕ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಕಾಂಗ್ರೆಸ್‌ ದೂರು ನೀಡಿತ್ತು. ಆದರೆ, ಇದಕ್ಕೆ ಬಿಜೆಪಿ ಸೊಪ್ಪು ಹಾಕಿಲ್ಲ ಎನ್ನಲಾಗಿದ್ದು, ಮಧ್ಯಾಹ್ನ ೩ ಗಂಟೆಗೆ ಕಾರ್ಯಕ್ರಮವನ್ನು ನಡೆಸುತ್ತಿದೆ.

ಇದನ್ನೂ ಓದಿ | Hindi Imposition | ಹಿಂದಿ ವಿರೋಧಿಸುವುದು ಗಿಮಿಕ್ ಅಷ್ಟೇ, ಯಾವ ಭಾಷೆಯನ್ನು ಹೇರಿಕೆ ಮಾಡುತ್ತಿಲ್ಲ: ಶಿಕ್ಷಣತಜ್ಞ ಇ ಬಾಲಗುರುಸ್ವಾಮಿ

ದೂರು ನೀಡಿದ್ದ ಕಾಂಗ್ರೆಸ್‌
ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಿಂದ ಸಾಮರಸ್ಯ ಕದಡುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕ್ರಮವನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್ ವಕ್ತಾರ ಸೂರ್ಯ ಮುಕುಂದರಾಜ್ ಅವರು ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿದ್ದರಾಮಯ್ಯ ಹೆಸರು ಬಳಸಿ ತೇಜೋವಧೆ ಮಾಡಲಾಗುತ್ತಿದೆ. ಪುಸ್ತಕದ ಮುಖಪುಟದಲ್ಲಿ ಅವರ ಭಾವಚಿತ್ರವನ್ನು ವಿರೂಪಗೊಳಿಸಲಾಗಿದೆ. ಕಲ್ಪಿತ, ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಬರಹಗಳು ಈ ಪುಸ್ತಕದಲ್ಲಿವೆ. ಇದರಿಂದ ಸಾಮರಸ್ಯ ಕದಡುವ ಸಾಧ್ಯತೆಯಿದ್ದು, ಬಿಡುಗಡೆ ಕಾರ್ಯಕ್ರಮ ರದ್ದು ಮಾಡಬೇಕು. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಆಯೋಜಕರಿಗೆ ಸೂಚನೆ ನೀಡಬೇಕು ಎಂದು ಪೊಲೀಸರಿಗೆ ಮನವಿ‌ ಮಾಡಿದ್ದರು.

ಕಾನೂನು ಕ್ರಮದ ಬಗ್ಗೆ ಚಿಂತನೆ- ಸಿದ್ದರಾಮಯ್ಯ
ಈ ಪುಸ್ತಕ ಬಿಡುಗಡೆ ಬಗ್ಗೆ ನನಗೆ ಗೊತ್ತಿಲ್ಲ. ಕಾಮಾಲೆ ರೋಗದವರರಿಗೆ ಕಾಣುವುದೆಲ್ಲಾ ಹಳದಿಯೇ ಆಗಿದೆ. ಟಿಪ್ಪು ಬಗ್ಗೆ ಖಡ್ಗ ಹಿಡಿದು ಡ್ರೆಸ್ ಹಾಕಿಕೊಂಡವರು ಯಾರು? ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಲ್ಲವೇ? ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ, ಟಿಪ್ಪು ಬಗ್ಗೆ ಕೃತಿಗೆ ಶೇಖ್ ಆಲಿ ಪುಸ್ತಕ ಬರೆದಾಗ ಮುನ್ನುಡಿ ಬರೆದವರು ಯಾರು? ಇದು ಇಬ್ಬಂದಿತನ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಇದೆಲ್ಲ ನನ್ನ ತೇಜೋವಧೆ ಮಾಡುವುದಕ್ಕಾಗಿ ಚುನಾವಣೆ ಸಂದರ್ಭದಲ್ಲಿ ಇಂತಹ ಪುಸ್ತಕವನ್ನು ಹೊರತರಲಾಗುತ್ತಿದೆ. ಇದು ಮಾನನಷ್ಟ ಮಾಡುವ ಉದ್ದೇಶವಾಗಿದೆ. ಇದರ ಬಗ್ಗೆ ಕಾನೂನು ಪ್ರಕಾರ ಏನು ಮಾಡಲು ಆಗುತ್ತದೆ ಎಂಬುದನ್ನು ನೋಡೋಣ ಎಂದು ಮಾಧ್ಯಮವರಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ೨ ಗಂಟೆಗೆ ಕುರುಬರ ಸಂಘದಿಂದ ಪ್ರತಿಭಟನೆ
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪುಸ್ತಕ ಬಿಡುಗಡೆಗೆ ಮುಂದಾಗಿರುವುದಕ್ಕೆ ರಾಜ್ಯ ಕುರುಬರ‌ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಧ್ಯಾಹ್ನ ೨ ಗಂಟೆಗೆ ಪುರಭವನದ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಕುರುಬರ ಸಂಘದ ಪದಾಧಿಕಾರಿಗಳು, ಸಿದ್ದರಾಮಯ್ಯ ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ವೈಯಕ್ತಿಕ ನಿಂದನೆಗೆ ಮುಂದಾಗಿರುವ ಕಾರ್ಯಕ್ರಮ ಎಂದು ಆರೋಪ ಮಾಡಿರುವ ಕುರುಬರ ಸಂಘವು, ಪುಸ್ತಕ ಬಿಡುಗಡೆ ಮಾಡಲು ಅವಕಾಶ ಕೊಡದಂತೆ ಆಗ್ರಹಿಸಿದೆ. ಅಲ್ಲದೆ, ಆಯೋಜಕರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ಕುರುಬರ ಸಂಘವು ಇದೇ ಸಂದರ್ಭದಲ್ಲಿ ಕರೆ ನೀಡಿದೆ.

ಇದನ್ನೂ ಓದಿ | RBI Interest rate | ಕನಿಷ್ಠ 1 ಸಲ ಆರ್‌ಬಿಐ ಬಡ್ಡಿ ಏರಿಕೆ ಸಂಭವ, ಬ್ಯಾಂಕ್‌ ಠೇವಣಿ ದರ ಗರಿಷ್ಠ ನಿರೀಕ್ಷೆ

Exit mobile version