ಭೋಪಾಲ್, ಮಧ್ಯಪ್ರದೇಶ: ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಬಿಡುಗಡೆ ಮಾಡಲಾಗಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪವಿಲ್ಲ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ (Kamal Nath) ಅವರು ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಸಮಾಜವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಪಿಎಫ್ಐ ಮತ್ತು ಬಜರಂಗದಳಂಥ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಹೇಳಿತ್ತು. ಈ ವಿಚಾರ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿತ್ತಲ್ಲದೇ, ಕಾಂಗ್ರೆಸ್ ವಿರುದ್ಧ ಬಿಜೆಪಿಯು ಬೀದಿ ಸಮರವನ್ನೇ ಸಾರಿದೆ.
ಪ್ರಣಾಳಿಕೆಯಲ್ಲಿ ಏನು ಬರೆಯಲಾಗಿದೆ ಎಂದು ಸೂಕ್ಷ್ಮವಾಗಿ ನೋಡಿದರೆ, ಬಜರಂಗದಳ ನಿಷೇಧ ಪ್ರಸ್ತಾಪವೇ ಇಲ್ಲ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ಹೇಳಿದ್ದಾರೆ. ಈ ವರ್ಷದ ಮುಕ್ತಾಯಕ್ಕೆ ಮಧ್ಯಪ್ರದೇಶದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಲ್ಲೂ ಕೂಡ ಕಾಂಗ್ರೆಸ್ ಬಜರಂಗದಳ ನಿಷೇಧ ಪ್ರಸ್ತಾಪವನ್ನು ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಸಮಾಜ ವಿರೋಧಿ ಸಂಘಟನೆಗಳ ವಿರುದ್ಧ ಕ್ರಮ ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದ್ವೇಷವನ್ನು ಹರಡುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡುವ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಜನರೂ ಬಯಸುತ್ತಾರೆ. ಯಾರನ್ನೂ ಟಾರ್ಗೆಟ್ ಮಾಡಲಾಗುತ್ತಿಲ್ಲ. ಆದರೆ ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರು ಕ್ರಮ ಎದುರಿಸಬೇಕಾಗುತ್ತದೆ ಎಂದು ನಾಥ್ ಹೇಳಿದರು.
ಇದನ್ನೂ ಓದಿ: Karanataka Election: ಬಜರಂಗದಳ ನಿಷೇಧಕ್ಕೆ ಮುಂದಾದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ: ಕೋಟಾ ಶ್ರೀನಿವಾಸ ಪೂಜಾರಿ
ಇದೇ ವೇಳೆ ಅವರು ಶಿವರಾಜ್ ಸಿಂಗ್ ಚೌಹಾಣ್ ವಿರುದ್ದ ಕಿಡಿಕಾರಿದರು. ಅಲ್ಲದೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣನಾಗಿ ಹದಗೆಟ್ಟಿದೆ. ಮಹಿಳೆಯರು, ಮಕ್ಕಳು ಮತ್ತು ಆದಿವಾಸಿಗಳ ವಿರುದ್ಧ ಕ್ರೈಮ್ ರೇಟ್‌ನಲ್ಲಿ ಮಧ್ಯ ಪ್ರದೇಶ ಅಗ್ರಸ್ಥಾನಿಯಾಗಿದೆ ಎಂದು ಆರೋಪಿಸಿದರು. ಮಧ್ಯಪ್ರದೇಶದಲ್ಲಿ ನಿರುದ್ಯೋಗಗಳ ಸಂಖ್ಯೆ ಒಂದು ಕೋಟಿಗೆ ತಲುಪಿದೆ. ಜತೆಗೆ ಭ್ರಷ್ಟಾಚಾರ ಕೂಡ ಮಿತಿಮೀರಿದೆ ಎಂದು ಕಮಲನಾಥ್ ಅವರು ಆರೋಪಿಸಿದರು.