Site icon Vistara News

Cauvery Dispute: ನಮ್ಮ ನೀರು ನಮ್ಮ ಹಕ್ಕು ಅಂತ ಹೋರಾಟ ಮಾಡಿ ಈಗ ಕಾವೇರಿ ನೀರು ಬಿಟ್ಟಿದ್ದಾರೆ: ಎಚ್‌ಡಿಕೆ ಕಿಡಿ

Ex CM HD Kumaraswamy

ರಾಮನಗರ: ತಮಿಳುನಾಡಿನವರು ಸುಪ್ರೀಂ ಕೋರ್ಟ್‌ಗೆ ಹೋಗಿ ಅರ್ಜಿ ಹಾಕಿದ ತಕ್ಷಣ ಇವರು ನೀರು ಬಿಟ್ಟಿದ್ದಾರೆ. ಮೊದಲು ಹೋಗಿ ವಾದ ಮಾಡಬೇಕಿತ್ತು. ರಾಜ್ಯದ ವಾಸ್ತಸ ಸ್ಥಿತಿಯನ್ನು ತಿಳಿಸುವ ಕೆಲಸ ಮಾಡಬೇಕು. ಆ ಕೆಲಸ ಮಾಡದೇ ಏಕಾಏಕಿ ನೀರು ಬಿಟ್ಟಿದ್ದಾರೆ. ರಾಜ್ಯ ಸರ್ಕಾರದ ಲಘುವಾದ ನಿರ್ಧಾರ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ವ ಪಕ್ಷಗಳ ಸಭೆ ಕರೆಯುವಂತೆ ನಾನು ಒತ್ತಾಯ ಮಾಡಿದ್ದೆ. ಇದೀಗ ಸಭೆ ಕರೆಯೋಕೆ ಚರ್ಚೆ ಮಾಡಿದ್ದಾರಂತೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿ ನಮ್ಮ ನೀರು ನಮ್ಮ ಹಕ್ಕು ಅಂತ ದೊಡ್ಡ ಹೋರಾಟ ಮಾಡಿದ್ದರು. ಅದನ್ನು ಎಷ್ಟು ಚೆನ್ನಾಗಿ ಉಳಿಸಿಕೊಳ್ಳುತ್ತಿದ್ದಾ ಅಂತ ನೋಡುತ್ತಿದ್ದೀರಿ ಎಂದು ಮೇಕೆದಾಟು ಪಾದಯಾತ್ರೆ ವಿರುದ್ಧ ಆಕ್ರೋಶ ಹೊರಹಾಕಿದರು.

ರಾಮನಗರಕ್ಕೆ ಕುಡಿಯುವ ನೀರಿನ ಯೋಜನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಲರ್ ಕಲರ್ ಫೋಟೊ ಹಾಕಿಕೊಂಡು ಪೋಸ್ ಕೊಟ್ಟಿದ್ದಾರಲ್ಲ. ಅದೇನೋ ಡಿ.ಕೆ.ಶಿವಕುಮಾರ್ ಕನಸಿನ ಕೂಸು ಅಂತಲ್ಲ. 50- 60 ಕೋಟಿ ಇದ್ದ ಆಸ್ತಿಯನ್ನು 1400 ಕೋಟಿ ರೂ. ಮಾಡಿಕೊಂಡಿದ್ದಾರೆ. ರಾಮನಗರಕ್ಕೆ ಕುಡಿಯುವ ನೀರಿಗೆ 460 ಕೋಟಿ ಪ್ರಸ್ತಾವನೆ ತಂದಿದ್ದು ನಾನು, ಅದನ್ನೇನು ಡಿ.ಕೆ.ಶಿವಕುಮಾರ್ ತಂದ್ರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ | BJP Politics : ಎಸ್‌.ಟಿ. ಸೋಮಶೇಖರ್‌ ಮುನಿಸಿಗೆ ವಿಕೆಟ್‌ ಪತನ; ಮಾರೇಗೌಡ ಆ್ಯಂಡ್ ಟೀಂ ಉಚ್ಚಾಟನೆ!

ನೈಸ್ ರಸ್ತೆ ಬಗ್ಗೆ ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ನೈಸ್ ಕಂಪನಿ ಜತೆ ವ್ಯವಹಾರ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಯಾರು ವ್ಯವಹಾರ ಮಾಡಿದ್ದಾರೆ ಎಂಬುವುದು ಗೊತ್ತು. ರೈತರ ಹತ್ತಿರ ಲೂಟಿ ಮಾಡಿ ಕೂತಿದ್ದಾರೆ‌. ಶೀಘ್ರದಲ್ಲೇ ಎಲ್ಲವನ್ನೂ ತೆಗೆದು ಜನರ ಮುಂದೆ ಇಡುತ್ತೇನೆ. ರಾಮನಗರ ಅಭಿವೃದ್ಧಿನೇ ಆಗಿಲ್ಲ ಎಂದು ಇಲ್ಲಿಯ ಶಾಸಕ ಹೇಳತ್ತಾನೆ. ಚುನಾವಣೆಗೂ ಮುನ್ನ ಗಿಫ್ಟ್ ಕಾರ್ಡ್ ಕೊಟ್ಟಿದ್ದಲ್ಲಪ್ಪ. ಅದನ್ನು ಮೊದಲು ಜನರಿಗೆ ತಲುಪಿಸಿ. 3 ಸಾವಿರ, 5 ಸಾವಿರದ ಕೂಪನ್ ಕೊಟ್ಟಿದ್ದೀರಲ್ಲಾ ಅದು ಏನಾಯ್ತು ಎಂದು ವಾಗ್ದಾಳಿ ನಡೆಸಿದರು.

ರಾಮನಗರ ದೇವೇಗೌಡರ ಕುಟುಂಬ ಬರುವುದಕ್ಕೂ ಮುಂಚೆ ಹೇಗಿತ್ತು. ಈಗ ಹೇಗಿದೆ ಎಂಬುವುದನ್ನು ನೋಡಲಿ. ಸರ್ವೇ ಪ್ರಕಾರ ರಾಮನಗರ ಜಿಲ್ಲೆ ರಾಜ್ಯದಲ್ಲಿ ಕಡಿಮೆ ಬಡತನ ಪ್ರಮಾಣ ಹೊಂದಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇದು ದೇವೇಗೌಡರ ಕುಟುಂಬ ಕೊಟ್ಟಿರುವ ಕೊಡುಗೆ. ನಾವು ಮಾಡಿರುವ ಕೆಲಸಕ್ಕೆ ಮೊದಲು ಸಣ್ಣ ಬಣ್ಣ ಹೊಡೆಸಿ ಸಾಕು. ಹೊಸ ಕೆಲಸ ತರುವುದು ಬೇಕಾಗಿಲ್ಲ ಎಂದು ಡಿ.ಕೆ.ಬ್ರದರ್ಸ್ ವಿರುದ್ಧ ಆಕ್ರೋಶ ಹೊರಹಾಕಿದರು.

ರಾಮನಗರ ಕುಡಿಯುವ ನೀರಿನ ಯೋಜನೆಗೆ ಕಾಂಗ್ರೆಸ್ ಕೊಡುಗೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವೇಗೌಡರ ಕಾಲದಲ್ಲೇ ರಾಮನಗರ ಹಾಗೂ ಚನ್ನಪಟ್ಟಣಕ್ಕೆ ಕುಡಿಯುವ ನೀರು ತರಲಾಯಿತು. ರಾಮನಗರ ಬೆಳೆಯುತ್ತಿರುವ ನಿಟ್ಟಿನಲ್ಲಿ ನಾನು ಹಣಕಾಸು ಮಂತ್ರಿಯಾಗಿದ್ದಾಗ ಹೆಚ್ಚುವರಿ ಯೋಜನೆ ಮಾಡಿದ್ದೇವೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕುಡಿಯುವ ನೀರಿಗೆ ಇವರ ಕೊಡುಗೆ ಏನು? ಆಗ ಯಾಕೆ ನೀರು ತರಲಿಲ್ಲ, ಬಂಡೆ ಒಡೆದುಕೊಂಡು ಕೂತಿದ್ದರಾ? ಸಾಕ್ಷಿ ಗುಡ್ಡೆಗಳನ್ನು ರೆಡಿ ಮಾಡಿಕೊಂಡು ಕೂತಿದ್ದರಾ? ಅಭಿವೃದ್ಧಿ ಮಾಡಿರುವುದರ ಬಗ್ಗೆ ಸಾಕ್ಷಿ ಗುಡ್ಡೆ ಕೇಳುತ್ತಾರೆ. ಕುಮಾರಸ್ವಾಮಿಯ ಅಭಿವೃದ್ಧಿ ಸಾಕ್ಷಿಗುಡ್ಡೆ ಎಲ್ಲಾ ಕಡೆ ಇದೆ. ಇವರದ್ದು ಏನಿದೆ.? ಕಲ್ಲು ಬಂಡೆ ಒಡೆದು ಚೀನಾಗೆ ಸಾಗಿಸಿದ್ದೇ ಇವರ ಸಾಕ್ಷಿಗುಡ್ಡೆ. ಮೊದಲು ಲಘುವಾಗಿ ಮಾತಮಾಡುವುದನ್ನು ಬಿಡಲಿ. ಅನಿತಾ ಕುಮಾರಸ್ವಾಮಿ ತಂದಿರುವ ಅನುದಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ರೂಪಾಯಿ ಬಿಡುಗಡೆ ಮಾಡಿಸಿ ಕೆಲಸ ಮಾಡಿದ್ದಾರಾ ಎಂದು ಹರಿಹಾಯ್ದರು.

ಅಧಿಕಾರ ಇದ್ದಾಗ ಹೋಟೆಲ್‌ನಲ್ಲಿ ಕೂತು ಬ್ಯುಸಿನೆಸ್ ಮಾಡುತ್ತಿದ್ದರು ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊನ್ನೆ ವಿಪಕ್ಷಗಳ ಮೈತ್ರಿ ಸಭೆ ಮಾಡಿದ್ರಲ್ಲ, ಇವರೆಲ್ಲಿ ಮಾಡಿದರು. ಅದೇ ಜಾಗದಲ್ಲಿ ತಾನೇ ಸಭೆ ಮಾಡಿದ್ದು. “ನನ್ನಷ್ಟು ಜನರಿಗೆ ಹತ್ತಿರವಾಗಿ ಸಿಗುವವನು ಭೂಮಿ ಮೇಲೆ ಯಾರೂ ಇಲ್ಲ.” ಇವರ ಬಳಿ ನಾನು ಕಲಿಯಬೇಕಾ? ಜನರ ಹತ್ತಿರ ಲೂಟಿ ಮಾಡಿಕೊಂಡು ತಿರಗಾಡುತ್ತಿದ್ದಾರೆ. ಇವನು ಎಂಪಿ ಆಗುವುದಕ್ಕೂ ಮುಂಚೆ ಇವನ ಆಸ್ತಿ ಎಷ್ಟಿತ್ತು. ಈಗ ಎಷ್ಟಿದೆ.? ಎಂಪಿ ಆಗಿ 8 ವರ್ಷದಲ್ಲಿ ಎಷ್ಟು ಆಸ್ತಿ ಮಾಡಿಕೊಂಡಿದ್ದಾನೆ. ನಾನು ಮಾಡಿದ್ದೀನಾ ಎಂದು ಪ್ರಶ್ನಿಸಿದರು.

ನೈಸ್ ಸಂಸ್ಥೆಗೆ ಅಗ್ರಿಮೆಂಟ್ ಮಾಡಿದ್ದು ದೇವೇಗೌಡರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೌದು, ಅಗ್ರಿಮೆಂಟ್ ಮಾಡಿದ್ದು, ದೇವೇಗೌಡರೇ, ಅಗ್ರಿಮೆಂಟ್ ಮಾಡಿರುವುದರ ಉದ್ದೇಶ ಬೆಂಗಳೂರು-ಮೈಸೂರು ನಡುವೆ ರಸ್ತೆ ಮಾಡಲು, ಆಗ ರಾಮಕೃಷ್ಣ ಹೆಗ್ಗಡೆ ಅವರು ಹಣ ಇಲ್ಲ ಎಂದು ಮಾಡಲಿಲ್ಲ. ಆದರೆ ಇವರು ಮಾಡಿರುವುದು ಏನು? ಬೆಂಗಳೂರು ಸುತ್ತಮುತ್ತ ರೈತರ ಜಮೀನು ಲೂಟಿ ಮಾಡಿದರು. ಅದರ ಬಗ್ಗೆ ಡಾಕ್ಯುಮೆಂಟ್ ಇಡೋಣ ಬನ್ನಿ ಕಿಡಿಕಾರಿದ್ದಾರೆ.

ನಿಖಿಲ್‌ಗೆ ರಾಜಕೀಯದ ಅವಶ್ಯಕತೆ ಇಲ್ಲ

ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಖಿಲ್ ಕುಮಾರಸ್ವಾಮಿಗೆ ಬದುಕಲು ಹಲವು ಮಾರ್ಗಗಳಿವೆ. ಭಗವಂತ ಅವರಿಗೇ ಆದ ಒಂದು ಕಲೆ ಕೊಟ್ಟಿದ್ದಾನೆ. ಅವರು ರಾಜಕೀಯದಿಂದಲೇ ಬದುಕಬೇಕಾ? ರಾಜಕೀಯದ ಅವಶ್ಯಕತೆ ಇಲ್ಲ. ಈಗ ರಾಜಕೀಯಕ್ಕೆ ಲೂಟಿ ಹೊಡೆಯಲು ಬರುವವರೇ ಹೆಚ್ಚು. ಅಂತಹವರಿಗೆ ಜನರು ಮಣೆ ಹಾಕುತ್ತಿದ್ದಾರೆ. ರಾಜಕೀಯ ಬೇಡ ಎಂದು ನಿಖಿಲ್‌ಗೆ ಹಲವು ಬಾರಿ ಹೇಳಿದ್ದೇನೆ. ನಿಖಿಲ್ ನೆಮ್ಮದಿಯಿಂದ ಜೀವನ ಮಾಡಲಿ, ಕಷ್ಟಪಟ್ಟು ಬದುಕಲಿ. ನಮ್ಮ ಕುಟುಂಬದಿಂದ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬಂಗಾರಪ್ಪನಂತೆ ಸಿದ್ದರಾಮಯ್ಯ ದಿಟ್ಟ ನಿಲುವು ತೋರುತ್ತಿಲ್ಲ: ವಾಟಾಳ್ ನಾಗರಾಜ್

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ನಿಲುವು ವಿರೋಧಿಸಿ ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಿಜಲಿಂಗಪ್ಪ ಅವರಿಂದ ಸಿದ್ದರಾಮಯ್ಯ ತನಕ ಎಲ್ಲಾ ಮುಖ್ಯಮಂತ್ರಿಗಳನ್ನೂ ನೋಡಿದ್ದೇವೆ. ತಮಿಳುನಾಡಿನ ಒತ್ತಡಕ್ಕೆ ಮಣಿದು ಎಲ್ಲರೂ ನೀರು ಬಿಟ್ಟಿದ್ದಾರೆ. ಬಂಗಾರಪ್ಪ ಮಾತ್ರ ನೀರು ಬಿಡಲಿಲ್ಲ. ಬಂಗಾರಪ್ಪ ಸಿಎಂ ಆಗಿದ್ದಾಗ ಕಾವೇರಿ ನೀರಿನ ವಿಚಾರದಲ್ಲಿ ದಿಟ್ಟ ನಿಲುವು ತೋರಿದ್ದರು. ನಾವೆಲ್ಲರೂ ಬಂಗಾರಪ್ಪನವರಿಗೆ ಬೆಂಬಲ ನೀಡಿದ್ದೆವು. ಬಂಗಾರಪ್ಪನವರು ತೋರಿದ ದಿಟ್ಟ ನಿಲುವನ್ನು ಈಗಿನ ಮುಖ್ಯಮಂತ್ರಿಗಳು ತೋರುತ್ತಿಲ್ಲ. ಸಿದ್ದರಾಮಯ್ಯನವರು ಒತ್ತಡಕ್ಕೆ ಸಿಲುಕಿದ್ದಾರೆ. ಯಾವ ಒತ್ತಡಕ್ಕೆ ಸಿಲುಕಿದ್ದಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಹೆದರಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಎರಡನೇ ಬಾರಿ ಕಾಟಾಚಾರಕ್ಕೆ ಸಿಎಂ ಆಗಿದ್ದಾರೆ. ಅವಧಿ ಮುಗಿಸಿದರೆ ಸಾಕು ಅನ್ನುವ ಮನಸ್ಥಿತಿಯಲ್ಲಿದ್ದಾರೆ. ಸಿದ್ದರಾಮಯ್ಯ ಮೇಲೆ ನನಗೆ ಅಪಾರವಾದ ಗೌರವವಿದೆ. ಆದರೆ, ಕಾವೇರಿ ವಿಚಾರದಲ್ಲಿ ಅವರ ನಿಲುವು ಸರಿಯಿಲ್ಲ. ಕಾವೇರಿ ನೀರು ಬಿಟ್ಟ ಮೇಲೆ ಯಾಕೆ ಸರ್ವ ಪಕ್ಷ ಸಭೆ ಕರೆದಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ | Commission Politics : ರಾಜ್ಯಪಾಲರಿಗೆ ದಯಾಮರಣ ಪತ್ರ; ಕಾಮಗಾರಿಯನ್ನೇ ಮಾಡದ ಗುತ್ತಿಗೆದಾರರಿಗೆ ಕಾನೂನು ಸಂಕಷ್ಟ!

ರಾಮನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ

ರಾಮನಗರ: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ನಗರದ ಐಜೂರು ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೊದಲು ನಮ್ಮ ರಾಜ್ಯದ ಕೆರೆಕಟ್ಟೆಗಳಿಗೆ ನೀರು ಹರಿಸಿ, ನಂತರ ತಮಿಳುನಾಡಿಗೆ ನೀರು ಬಿಡಬೇಕಿತ್ತು. ಆದರೆ, ಇವರು ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಆಕ್ರೋಶ ಹೊರಹಾಕಿದರು.

Exit mobile version