ಬೆಂಗಳೂರು: ಅವನು ೧೬ನೇ ವಯಸ್ಸಿಗೇ ʻವೃತ್ತಿʼ ಆರಂಭಿಸಿದ್ದ. ಕಳೆದ ೨೩ ವರ್ಷಗಳಲ್ಲಿ ತುಂಬ ಎತ್ತರಕ್ಕೆ ಬೆಳೆದುಬಿಟ್ಟಿದ್ದಾನೆ. ಅಂದ ಹಾಗೆ ಅವನು ೧೬ನೇ ವಯಸ್ಸಿಗೆ ಆರಂಭಿಸಿದ್ದ ವೃತ್ತಿ: ದೇವಸ್ಥಾನಗಳಲ್ಲಿ ಚಪ್ಪಲಿ ಕದಿಯುವುದು. ಈಗ ಬಡ್ತಿ ಹೊಂದಿ ಮನೆ ಕಳ್ಳನಾಗಿದ್ದಾನೆ. ಹಾಗಂತ ಇವನು ಸಾಮಾನ್ಯ ಮನೆ ಕಳ್ಳನೇನೂ ಅಲ್ಲ. ಅತ್ಯಂತ ಚಾಣಾಕ್ಷ ಮನೆ ಕಳ್ಳ. ಅವನ ಕಳ್ಳತನದ ಶೈಲಿ ನೋಡಿ ಪೊಲೀಸರೇ ಒಂದರೆಕ್ಷಣ ಅಚ್ಚರಿಗೊಂಡಿದ್ದಾರೆ.
ಈ ಐಷಾರಾಮಿ ಕಳ್ಳನ ಹೆಸರು ಪ್ರಕಾಶ್ ಅಲಿಯಾಸ್ ಬಾಲಾಜಿ (೩೯). ಎಚ್‌ಎಸ್‌ಆರ್ ಲೇಔಟ್‌ನ ಪೊಲೀಸರು ಈತನನ್ನು ಬಂಧಿಸಿ ಭಾರಿ ಪ್ರಮಾಣದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ನಗರದಲ್ಲಿ ೪೬ ಕಳವು ಕೃತ್ಯ ನಡೆಸಿದ್ದಾನೆ. ಈತನ ಬಂಧನದೊಂದಿಗೆ ಏಳು ಮನೆಗಳ ಕಳವು ಪ್ರಕರಣ ಬಯಲಾಗಿದೆ. ಆತನಿಂದ ಈಗ ಸಿಕ್ಕಿರುವ ಚಿನ್ನಾಭರಣದ ಪ್ರಮಾಣ ೭೫೦ ಗ್ರಾಂ ಚಿನ್ನ. ಹಾಗಿದ್ದರೆ, ಉಳಿದದ್ದು ಎಲ್ಲಿ ಹೋಯಿತು ಎಂದರೆ ಅವನ ಐಷಾರಾಮಿ ಬದುಕಿನಲ್ಲಿ ಕಳೆದುಹೋಗಿದೆ.
ಪ್ರಕಾಶ ಅಲಿಯಾಸ್ ಬಾಲಾಜಿ ಈಗ ವಾಸವಾಗಿರುವುದು ಮುರುಗೇಶ್ ಪಾಳ್ಯ ಪಾರ್ಥಿವ್ ಹೈಟ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದೆ. ಇದು ಪ್ರಧಾನ ಮನೆ. ಮೂರು ಹೆಂಡಿರ ಮುದ್ದಿನ ಗಂಡನಾಗಿರುವ ಈ ಮೂರು ಮೂರು ಕಡೆ ಮನೆ ಮಾಡಿದ್ದಾನೆ. ಒಳ್ಳೆ ಐಷಾರಾಮಿ ಬದುಕು ಬಾಳುವ ಈತನಿಗೆ ಕಳವು ಮಾಡಲು ತುಂಬ ಅವಸರ ಏನೂ ಇಲ್ಲ. ಭಾರಿ ಪ್ಲ್ಯಾನ್ ಮಾಡಿ, ಒಳ್ಳೆ ಸ್ಕೆಚ್ ಹಾಕಿ ಆರಾಮವಾಗಿ ಕಳವು ಮಾಡುವುದು ಇವನ ಕಾರ್ಯತಂತ್ರ.
ಮೊದಲೇ ಹೇಳಿದಂತೆ ಇವನ ಬದುಕು ಆರಂಭವಾಗಿದ್ದು ಚಪ್ಪಲಿ ಕಳ್ಳತನದಿಂದ. ತಂದೆ ಸಾವಿನ ನಂತರ ಬದುಕಿಗಾಗಿ ಹೀಗೆ ಶುರು ಮಾಡಿದೆ ಎನ್ನುವುದು ಅವನು ಹೇಳುವ ಎಮೋಷನಲ್ ಕಥೆ. ಕಸಾಯಿಪಾಳ್ಯದಲ್ಲಿ ಕಾಟಯ್ಯ ಎಂಬ ಚಪ್ಪಲಿ ಕಳ್ಳ ಇದ್ದನಂತೆ. ಅವನು ಇವನ ಗುರು. ಅಲ್ಲಿಂದ ಹಂತ ಹಂತವಾಗಿ ಪ್ರಮೋಷನ್ ಪಡೆದು ಈಗ ಮನೆ ಕಳ್ಳನಾಗಿದ್ದಾನೆ. ಅವನು ಕಳ್ಳತನ ಮಾಡೋ ಸ್ಟೈಲು ಕೂಡಾ ಡಿಫರೆಂಟಾಗಿದೆ.
ಬೀಗದ ಫೋಟೊ ತೆಗೀತಾನೆ!
ಇವನು ಪ್ರಧಾನವಾಗಿ ಟಾರ್ಗೆಟ್ ಮಾಡುವುದು ಬಾಡಿಗೆ ಮನೆಗಳನ್ನು. ಮನೆ ಬಾಡಿಗೆಗೆ ಇದೆ ಎಂದು ಬೋರ್ಡ್ ಹಾಕಿರುವಲ್ಲಿ ಹೋಗುತ್ತಾನೆ. ಹೋಗಿ ಅಲ್ಲಿ ಮನೆ ನೋಡಿದಂತೆ ಮಾಡುತ್ತಾನೆ. ಬಳಿಕ ಅಲ್ಲಿನ ಬೀಗ (ಲಾಕ್) ಫೋಟೊ ಹೊಡೆಯುತ್ತಾನೆ. ಆ ಫೋಟೊದ ಆಧಾರದಲ್ಲಿ ಕೀ ಮಾಡಿಸಬಹುದಾ ಎಂದು ನೋಡುತ್ತಾನೆ. ಯಾವುದರದ್ದು ಸಾಧ್ಯವೋ ಅದರದ್ದು ಮಾಡಿಸುತ್ತಾನೆ.
ನಕಲಿ ಕೀ ಮಾಡಿಸಿಕೊಂಡು ಆ ಮನೆಗೆ ಯಾರು ಬರುತ್ತಾರೆ ಎಂದು ಕಾಯುತ್ತಾನೆ. ಸ್ವಲ್ಪ ಶ್ರೀಮಂತರು ಬಂದಿರಬಹುದಾ ಎಂದು ನೋಡುತ್ತಾನೆ. ಹಾಗೆ ನೋಡುತ್ತಲೇ ಇನ್ನೊಂದು ಸ್ಕೆಚ್ ಶುರುವಾಗುತ್ತದೆ. ಆ ಮನೆಯಲ್ಲಿ ಯಾರೂ ಇಲ್ಲದ ಸಮಯ ಯಾವುದೆಂದು ಕಾಯುತ್ತಾನೆ. ಅವರ್ಯಾರೂ ಇಲ್ಲದ ಹೊತ್ತಿನಲ್ಲಿ ಹೋಗಿ ಚಿನ್ನಾಭರಣ, ವಸ್ತುಗಳನ್ನು ಎತ್ತಿಕೊಂಡು ಬರುತ್ತಾನೆ! ಅದನ್ನು ಬಳಸಿಕೊಂಡು ಮೂರು ಹೆಂಡಿರ ಜತೆಗೆ ಖುಷಿಯಾಗಿ ಬಾಳುತ್ತಾನೆ.
ಆದರೆ, ಆತನ ಒಳ್ಳೆ ಟೈಮ್ ಈಗ ಮುಗಿದ ಹಾಗಿದೆ. ಎಚ್‌ಆರ್‌ಎಸ್ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ| Spy camera | ಮಹಿಳೆಯರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದವನ ಸೆರೆ, ಎಲ್ಲಿ ಅಡಗಿರುತ್ತಿತ್ತು ಕಳ್ಳ ಕ್ಯಾಮೆರಾ?