Site icon Vistara News

ಪೊಲೀಸರಂತೆ ಬಂದು ಚಿನ್ನ ದೋಚಿದ ದುಷ್ಕರ್ಮಿಗಳು; 6ವರ್ಷಗಳ ಬಳಿಕ ಬಂದು ಮತ್ತೆ ಅರೆಸ್ಟ್ ಆದ ಕಳ್ಳ!

Highway And thief Asif

ಕಲಬುರಗಿ: ಪೊಲೀಸರಂತೆ ಬಂದ ಕಳ್ಳರು ಚಿನ್ನಾಭರಣ (Gold Theft) ದೋಚಿ ಪರಾರಿಯಾಗಿದ್ದಾರೆ. ಇಲ್ಲಿನ ಚಿಂಚೋಳಿ ತಾಲೂಕಿನ ಸುಲೇಪೇಟ್​ ಬಳಿಯ ರಾಯಚೂರು-ವನ್ಮಾರಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಪಂಚನಪಳ್ಳಿ ಗ್ರಾಮದ ಚಂದ್ರಶೇಖರ್ ಅವರ ಬಳಿಯಿದ್ದ 12 ಗ್ರಾಂ ಚಿನ್ನದ ಉಂಗುರ, 6 ಗ್ರಾಂ. ತೂಕದ ಹರಳಿನ ಉಂಗುರವನ್ನು ಕಸಿದು ಪರಾರಿಯಾಗಿದ್ದಾರೆ (Theft Case).

ಚಂದ್ರಶೇಖರ್​ ಅವರು ಪೇಪರ್​ ತರಲೆಂದು ಇದೇ ಮಾರ್ಗದಲ್ಲಿ ಬೈಕ್​​ನಲ್ಲಿ ಹೋಗುತ್ತಿದ್ದರು. ಈ ವೇಳೆ ಕಳ್ಳರೂ ಕೂಡ ಬೈಕ್​ನಲ್ಲಿ ಬಂದಿದ್ದಾರೆ. ತಮ್ಮನ್ನು ತಾವು ಪೊಲೀಸ್​ ಅಧಿಕಾರಿಗಳು, ಬೈಕ್ ತಪಾಸಣೆ ಮಾಡಬೇಕು ಎಂದು ಹೇಳಿಕೊಂಡು ಚಂದ್ರಶೇಖರ್ ಬೈಕ್ ನಿಲ್ಲಿಸಿದ್ದಾರೆ. ಅವರನ್ನು ನಂಬಿ ಚಂದ್ರಶೇಖರ್​ ನಿಂತರು. ಆದರೆ ಆ ಕಳ್ಳರು ಬಳಿಕ ಅಸಲಿ ಮುಖ ತೋರಿಸಿದ್ದಾರೆ. ಚಾಕು ತೋರಿಸಿ, ಹಣ, ಚಿನ್ನ ಕೊಡುವಂತೆ ಕೇಳಿದ್ದಾರೆ. ಹೆದರಿದ ಚಂದ್ರಶೇಖರ್ ತಮ್ಮ ಬಳಿಯಿದ್ದ ಚಿನ್ನಾಭರಣ ಕೊಟ್ಟಿದ್ದಾರೆ. ಸುಲೇಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಳ್ಳನ ಭಯವೋ, ಭಕ್ತಿಯೋ; ಆಂಜನೇಯನ ಗುಡಿಯಲ್ಲಿ ಕಳವು ಮಾಡುವುದಕ್ಕೂ ಮುನ್ನ ಆತ ಮಾಡಿದ್ದೇನು?

6ವರ್ಷಗಳ ಬಳಿಕ ಮತ್ತೆ ಬಂದ ಕಳ್ಳ!

ಕ್ಯಾಸಿನೊ ಹುಚ್ಚು ಹಿಡಿಸಿಕೊಂಡು, ಅದಕ್ಕಾಗಿ ದುಡ್ಡು ಸುರಿಯಲು ಕಳ್ಳತನ ಮಾಡುತ್ತಿದ್ದ ಕಳ್ಳ ಆಸಿಫ್​ ಈಗ 6ವರ್ಷಗಳ ಬಳಿಕ ಮತ್ತೆ ಬೆಂಗಳೂರಿಗೆ ಬಂದು, ಮತ್ತೆ ಬಂಧಿತನಾಗಿದ್ದಾನೆ. ಈ ಕಳ್ಳ 6ವರ್ಷಗಳ ಹಿಂದೆ ಬೆಂಗಳೂರಲ್ಲೇ ಇದ್ದ. ಹಲವು ಕಳ್ಳತನ ಕೇಸ್​ಗಳು ಇವನ ಮೈಮೇಲೆ ಇದ್ದವು. 2013ರಲ್ಲಿ ವಿದ್ಯಾರಣ್ಯಪುರ ಪೊಲೀಸರು ಆಸಿಫ್​​ನನ್ನು ಬಂಧಿಸಿದ್ದರು. ಬಿಡುಗಡೆಯಾದ ಬಳಿಕ ಬೆಂಗಳೂರು ಬಿಟ್ಟು ಹುಬ್ಬಳ್ಳಿ-ಧಾರವಾಡ ಸೇರಿದ್ದ.

ಹುಬ್ಬಳ್ಳಿ -ಧಾರವಾಡದಲ್ಲಿ ಆಸಿಫ್​ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರೂ ಕ್ಯಾಸಿನೊ ಹುಚ್ಚು ಬಿಟ್ಟಿರಲಿಲ್ಲ. ಹೀಗಾಗಿ ಯಥಾಪ್ರಕಾರ ಕಳ್ಳತನ ಶುರುವಿಟ್ಟುಕೊಂಡಿದ್ದ. ಹುಬ್ಬಳ್ಳಿಯಲ್ಲೂ ಕೂಡ ಜೈಲು ಸೇರಿದ್ದ. ಈ ವರ್ಷ ಬಿಡುಗಡೆಯಾಗಿ ಮತ್ತೆ ಬೆಂಗಳೂರಿಗೆ ಕಾಲಿಟ್ಟಿದ್ದ. ಆದರೆ ಇಲ್ಲಿಯೂ ಹಳೇಬುದ್ಧಿ ತೋರಿಸಿದ್ದಾನೆ. ಮಾಗಡಿ ರಸ್ತೆಯ ಕೈಗಾರಿಕಾ ಕಾರ್ಖಾನೆ ಕಚೇರಿಯನ್ನು ಕೊಳ್ಳೆ ಹೊಡೆದು ಸಿಕ್ಕಿಬಿದ್ದಿದ್ದಾನೆ. ತನ್ನ ಜತೆಗಾರರಾದ ಶಬೀರ್ ಮತ್ತು ನೌಸದ್​ರೊಂದಿಗೆ ಕಚೇರಿಯ ಮೇಲ್ಛಾವಣಿ ತೆರೆದು ಒಳನುಸುಳಿದ್ದ. ಸಿಸಿಟಿವಿ ದೃಶ್ಯ ಆಧರಿಸಿ, ಮಾಗಡಿ ರಸ್ತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 5.45 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ.

Exit mobile version