ಬೆಂಗಳೂರು: ದೂರದೂರಿನಿಂದ ಆಗಮಿಸಿ ಬದುಕು ಕಟ್ಟಿಕೊಳ್ಳಬೇಕಾದವರು, ಯಾರದ್ದೋ ಮಾತು ಕೇಳಿ ಈಗ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ತಲಘಟ್ಟಪುರ ಬಳಿ ಒಂಟಿ ಮನೆಗೆ ನುಗ್ಗಿ ಕಳ್ಳತನ (Thief case) ಮಾಡಲು ಮುಂದಾದ ಆರೋಪಿಗಳ ಬಂಧನವಾಗಿದೆ.
ದೂರದ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಒಡಿಸ್ಸಾದಿಂದ ಕೆಲ ಯುವಕರು ಬೆಂಗಳೂರಿನ ಸಣ್ಣ ಪುಟ್ಟ ಹೋಟೆಲ್, ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡಿಕೊಂಡು ಇದ್ದವರಿಗೆ ಶೇಕ್ ಕಲೀಂ ಎಂಬಾತ ಮಾಸ್ಟರ್ ಮೈಂಡ್ ಪರಿಚಯವಾಗಿದ್ದ.
ಉಂಡಾಡಿಗುಂಡ ಆಗಿದ್ದ ಶೇಕ್ ಕಲೀಂ ಹೆಬ್ಬಗೋಡಿ, ಎಲೆಕ್ಟ್ರಾನಿಕ್ ಸಿಟಿ ಸುತ್ತ ಮುತ್ತ ಓಡಾಡಿಕೊಂಡಿದ್ದ. ಕೈನಲ್ಲಿ ಕೆಲಸ ಇಲ್ಲದೇ ಇದ್ದರೂ ತನ್ನ ಕ್ರಿಮಿನಲ್ ಐಡಿಯಾ ಮೂಲಕ ಹೊಟ್ಟೆತುಂಬಿಸಿಕೊಳ್ಳುತ್ತಿದ್ದ. ಹೀಗೆ ಓಡಾಡಿಕೊಂಡಿದ್ದ ಈತನ ಕಣ್ಣಿಗೆ ಸಾಬ್ ಇಂಡಿಯಾ ಕಂಪನಿ ಕಂಡಿತ್ತು. ಎರಡು ಸಾವಿರಕ್ಕೂ ಅಧಿಕ ನೌಕರರು ಕೆಲಸ ಮಾಡುತ್ತಿದ್ದ ಕಾರಣ, ಅಷ್ಟೊಂದು ಜನರಿಗೆ ಸಂಬಳ ನೀಡುತ್ತಿರುವ ಕಂಪನಿಯ ಮಾಲೀಕ ಅಜಯ್ ಬಾಲಗೋಪಾಲ್ ಮನೆಯಲ್ಲಿ ಕೋಟಿ ಕೋಟಿ ಹಣ ಇರಬಹುದೆಂದು ಹಣ ಲೂಟಿ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ.
ಕಳ್ಳತನಕ್ಕೆ ಬಂದಿದ್ದ ಬಾಂಬೆ ಯುವಕರು
ಈ ಶೇಕ್ ಕಲೀಂ ಯೋಜನೆಯಂತೆ ಎರಡು ತಿಂಗಳು ಸಾಬ್ ಇಂಡಿಯಾ ಕಂಪನಿಯ ಮಾಲೀಕರ ಮನೆಯ ಸುತ್ತಮುತ್ತ ಓಡಾಡಿಕೊಂಡು, ಬಂಗಲೆಗೆ ಯಾವ ಕಡೆಯಿಂದ ನುಗ್ಗಬೇಕೆಂದಲ್ಲ ಸ್ಕೆಚ್ ಹಾಕಿದ್ದಾನೆ. ಪ್ಲ್ಯಾನ್ ಮಾಡಿ ತನಗೆ ಪರಿಚಯವಿದ್ದ ಬಿಹಾರದ ಮೊಹಮ್ಮದ್ ನಿನಾಜ್ ಜತೆಗೆ ಮತ್ತೆ ನಾಲ್ವರೊಂದಿಗೆ ಕಳ್ಳತನಕ್ಕೆ ಮುಂದಾಗುತ್ತಾನೆ. ಅಷ್ಟು ಸಾಲದೆಂಬಂತೆ ಬಾಂಬೆಯಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರಿಗೆ ಕರೆ ಮಾಡಿ ಕರೆಸಿಕೊಂಡಿದ್ದ.
ಕ್ರೈಂ ಶಾರ್ಟ್ ಮೂವಿ ನೋಡಿ ಕಳ್ಳತನ
ಬೆಂಗಳೂರಿನಲ್ಲಿರುವ ಭವ್ಯ ಬಂಗಲೆ ರಾಬರಿ ಮಾಡಿದರೆ ಕೋಟಿ ಕೋಟಿ ರೂಪಾಯಿ ಸಿಗುತ್ತದೆ ಎಂದು ಶೇಕ್ ಕಲೀಂ ಆಸೆ ಹುಟ್ಟಿಸಿದ್ದ. ಶೇಕ್ ಕಲೀಂ ಮಾತು ಕೇಳಿದ ಯುವಕರು, ಬೆಂಗಳೂರಿಗೆ ಬಂದವರೇ ಕೆಲ ಕ್ರೈಂ ಶಾರ್ಟ್ ಮೂವಿಗಳನ್ನು ನೋಡಿ ಕಳ್ಳತನಕ್ಕೆ ಪ್ಲ್ಯಾನ್ ಮಾಡಿದ್ದರು. ಪ್ಲ್ಯಾನ್‌ನಂತೆ ಮನೆಗೆ ನುಗ್ಗಲು ಬೇಕಾದ ಸಲಕರಣೆಗಳು, ಮನೆಯಲ್ಲಿದ್ದವರು ಎದುರಾದರೆ ಅವರನ್ನು ಕಟ್ಟಿ ಹಾಕಲು ಹಗ್ಗ, ಚಿಲ್ಲಿ ಪೌಡರ್ ತೆಗೆದುಕೊಂಡು ಹೋಗಿದ್ದರು.
ಕೋಟಿ ಕೋಟಿ ಸಿಗುವ ಕನಸು ಕಂಡಿದ್ದವರಿಗೆ 3-4 ಗಂಟೆ ಮನೆ ಪೂರ್ತಿ ಜಾಲಾಡಿದವರಿಗೆ ಕೇವಲ ಐದು ಸಾವಿರ ರೂ.ಮಾತ್ರ ಸಿಕ್ಕಿದೆ. ಸದ್ಯ ರಾಬರಿ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ಯಾವುದೇ ಹಳೇ ಕೇಸ್‌ಗಳಿಲ್ಲ ಎಂದು ತಿಳಿದು ಬಂದಿದೆ. ಕಂಪನಿ ಹಾಗೂ ಮನೆ ನೋಡಿ ಕೋಟಿ ಹಣ ಇರುವುದಾಗಿ ಊಹೆ ಮಾಡಿಕೊಂಡಿದ್ದ ಪ್ರಮುಖ ಆರೋಪಿ ಶೇಕ್ ಕಲೀಂ ಜೈಲುಪಾಲಾಗಿದ್ದಾನೆ. ತಲಘಟ್ಟಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Murder Case | ಕತ್ತಿಯಿಂದ ಕೊಚ್ಚಿ ಕೊಡಗಿನ ಕುವರಿಯ ಬರ್ಬರ ಹತ್ಯೆ ಪ್ರಕರಣ; ಸ್ಥಳದಲ್ಲಿ ವ್ಯಕ್ತಿಯ ಹೆಲ್ಮೆಟ್ ಪತ್ತೆ