Site icon Vistara News

Shivamogga Violence: ಮತಾಂಧ ಶಕ್ತಿಗಳನ್ನು ಬೆಳೆಸಲು ಅಧಿಕಾರಕ್ಕೆ ಬಂದ ಸರ್ಕಾರವಿದು: ಪ್ರಲ್ಹಾದ್‌ ಜೋಶಿ ಕಿಡಿ

Union Minister pralhad joshi

ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದುಗಳ ಹಬ್ಬಕ್ಕೆ ನಿರ್ಬಂಧ ವಿಧಿಸಿ, ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ (ಮೆರವಣಿಗೆಗೆ) ಬೆಂಬಲ ನೀಡಲಾಗುತ್ತಿದೆ. ಮತಾಂಧ ಶಕ್ತಿಗಳನ್ನು (Shivamogga Violence) ಪೋಷಿಸಿ ಬೆಳೆಸಲೆಂದೇ ಅಧಿಕಾರಕ್ಕೆ ಬಂದ ಸರ್ಕಾರವಿದು ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದ್ದಾರೆ.

ಶಿವಮೊಗ್ಗ ಗಲಭೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಅಂದು ನಾಡ ವಿರೋಧಿ ಟಿಪ್ಪುವಿನ ವಿಜೃಂಭಣೆ, ಇಂದು ರಾಷ್ಟ್ರ ವಿರೋಧಿ ಔರಂಗಜೇಬನ ವಿಜೃಂಭಣೆ, ಎತ್ತ ಸಾಗುತ್ತಿದೆ ಕರ್ನಾಟಕ? ಶಿವಮೊಗ್ಗದಲ್ಲಿ ನಡೆದ ಘಟನೆಗೆ ನೇರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಬಲವಾಗಿ ನಿಂತಿದೆ ಮತ್ತು ಕರ್ನಾಟಕವನ್ನು ಗೂಂಡಾರಾಜ್ಯ ಮಾಡಲು ಪಣತೊಟ್ಟಂತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Shivamogga Violence : ಶಿವಮೊಗ್ಗ ಗಲಭೆಕೋರರನ್ನು ರಕ್ಷಣೆ ಮಾಡಲ್ಲ, 43 ಮಂದಿ ಅರೆಸ್ಟ್‌ ಎಂದ ಸಿದ್ದರಾಮಯ್ಯ

ಇತ್ತೀಚೆಗೆ ಕಾಂಗ್ರೆಸ್‌ ಪಕ್ಷದ ತುಷ್ಟೀಕರಣ ರಾಜಕೀಯದ ಪರಿಣಾಮ, ರಾಜ್ಯದಲ್ಲಿ ಮತಾಂಧರು ಹಾಗೂ ಇಸ್ಲಾಮಿಕ್‌ ಮತೀಯವಾದಿಗಳು ತಲೆ ಎತ್ತುತ್ತಿರುವುದನ್ನು ಕಾಣುತ್ತಿದ್ದೇವೆ. ಕೋಲಾರದಲ್ಲಿ ಬೃಹತ್‌ ಪ್ರಮಾಣದ ತಲ್ವಾರ್‌ ಅನ್ನು ಕಟ್ಟುವ ಮೂಲಕ ಜನರನ್ನು ಬೆದರಿಸುವ ಕೆಲಸವಾಗಿದೆ. ಆದೇ ರೀತಿ ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಹೆಸರಿನಲ್ಲಿ ಗಲಭೆ, ಕಲ್ಲುತೂರಾಟ ಮಾಡಲಾಗಿದೆ. ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಅನುಮತಿ ನೀಡುತ್ತಾರೆ. ಆದರೆ, ರಾಜ್ಯದ ವಿವಿಧೆಡೆ ಗಣೇಶ ಮೂರ್ತಿ ಮೆರವಣಿಗೆ ವೇಳೆ ಮಾತ್ರ ನಿರ್ಬಂಧ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ದೊಡ್ಡ ಗಾತ್ರದ ತಲ್ವಾರ್‌ಗಳ ಪ್ರದರ್ಶನವಾಗಿದ್ದರೂ, ರಾಜ್ಯದ ಗೃಹಮಂತ್ರಿಗಳು ಶಿವಮೊಗ್ಗಕ್ಕೆ ಗಲಭೆ ಏನಾದರೂ ಹೊಸತೇ ಎಂದು ಕೇಳುತ್ತಾರೆ. ಆದರೆ, ಈ ಕಾಂಗ್ರೆಸ್‌ ಆಡಳಿತದಲ್ಲಿ ಗಲಭೆ ಹೊಸತಲ್ಲ. ಯಾಕೆಂದರೆ, ಇವರು ತುಷ್ಟೀಕರಣ ಮಾಡುತ್ತಾ, ಒಂದು ಸಮುದಾಯಕ್ಕೆ ಹೆಚ್ಚು ಬೆಂಬಲ ನೀಡುವುದರಿಂದ, ಗೂಂಡಾ ಶಕ್ತಿಗಳು ದೌರ್ಜನ್ಯ ಮಾಡುತ್ತವೆ. ಇದರ ಭಾಗವೇ ಶಿವಮೊಗ್ಗದ ಪ್ರಕರಣವಾಗಿದೆ ಎಂದು ಕಿಡಿಕಾರಿದ್ದಾರೆ.

ಇನ್ನು ಶಿವಮೊಗ್ಗದಲ್ಲಿ ಟಿಪ್ಪು, ಔರಂಗಜೇಬ್‌ನ ಬ್ಯಾನರ್‌ ಹಾಕಿ ವಿಜೃಂಭಿಸಿರುವುದು ಕಂಡುಬಂದಿದೆ. ಇದರಿಂದ ನಿಮ್ಮ ಉದ್ದೇಶ ಏನು ಎಂಬುವುದು ಅರ್ಥವಾಗುತ್ತದೆ. ನೀವು ತುಷ್ಟೀಕರಣದ ಪರಾಕಾಷ್ಠೆ ತಲುಪಿದ್ದೀರಿ, ಈ ಗಲಭೆ ಹಿಂದಿರುವ ಶಕ್ತಿಗಳ ವಿರುದ್ಧ ಕ್ರಮ ಜರುಗಿಸಬೇಕು. ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕದಿದ್ದರೆ, ಜನರೇ ನಿಮಗೆ ಬುದ್ಧಿ ಕಲಿಸಲಿದ್ದಾರೆ. ಇಲ್ಲದಿದ್ದರೆ ಮುಂದಿನ ಹೋರಾಟಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | Shivamogga Riots : ಶಿವಮೊಗ್ಗಕ್ಕೆ ಇದೇನು ಹೊಸತಾ?; ಗೃಹ ಸಚಿವ ಪರಮೇಶ್ವರ್‌ ಉಡಾಫೆ ಹೇಳಿಕೆ

ಶಿವಮೊಗ್ಗ ಗಲಭೆ; 24 ಪ್ರಕರಣ, 60 ಮಂದಿ ಬಂಧನ

ಶಿವಮೊಗ್ಗ: ನಗರದ ರಾಗಿಗುಡ್ಡ ಪ್ರದೇಶದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ಭಾನುವಾರ ಸಂಜೆ ಗಲಭೆ, ಕಲ್ಲು ತೂರಾಟ ನಡೆದು 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ವೇಳೆ ಎರಡು ಸಮುದಾಯಗಳ ನಡುವೆ ಗಲಾಟೆಯಿಂದ ಹಲವು ಮನೆಗಳಿಗೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ 24 ಪ್ರಕರಣ ದಾಖಲಿಸಿ, 60 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version