Site icon Vistara News

Karnataka Politics : ನಾವು ಯಾರಿಗೂ ತಾರತಮ್ಯ ಮಾಡಿಲ್ಲ; ಇದು ಝೀರೊ ಅನುದಾನದ ಸರ್ಕಾರವೆಂದ ಬೊಮ್ಮಾಯಿ

Basavaraj Bommai infront of vidhanasoudha

ಚಿಕ್ಕಬಳ್ಳಾಪುರ: ರಾಜ್ಯ ರಾಜಕೀಯದಲ್ಲಿ (Karnataka Politics) ಈಗ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಅನುದಾನದ ವಾರ್‌ ನಡೆಯುತ್ತಿದೆ. ಕಾಂಗ್ರೆಸ್‌ ಸರ್ಕಾರವು (State Congress Government) ದ್ವೇಷದ ರಾಜಕಾರಣ (Hate politics) ಮಾಡುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ. ಈಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿದ್ದು, “ಇದು ಝೀರೊ ಅನುದಾನದ ಸರ್ಕಾರವಾಗಿದ್ದು, ಯಾರಿಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಾವು ಅನುದಾನ ಹಂಚಿಕೆಯಲ್ಲಿ ಯಾರಿಗೂ ತಾರತಮ್ಯ ಮಾಡಿರಲಿಲ್ಲ” ಎಂದು ಹೇಳಿದ್ದಾರೆ‌.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ನಾವು ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡಿದ್ದೇವೆ. ನಾವು ಎಲ್ಲರನ್ನೂ ಸಮಾನವಾಗಿ ನೋಡಿದ್ದೆವು ಮತ್ತು ಅನುದಾನವನ್ನು ಸಮನಾಗಿ ನೀಡಿದ್ದೆವು ಎಂದು ಹೇಳಿದರು.

ಇದನ್ನೂ ಓದಿ :Karnataka Politics : ಬಿಎಸ್‌ವೈ ಹೇಳಿದ್ದಕ್ಕೆ ಪ್ರತಿಭಟನೆ ಕೈಬಿಟ್ಟು, ಡಿಕೆಶಿ ಹುಡುಕಿಕೊಂಡು ಹೊರಟ ಮುನಿರತ್ನ!

ಮಾಗಡಿ ಶಾಸಕ ಎಚ್.‌ಸಿ. ಬಾಲಕೃಷ್ಣ ಅವರು ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ನೀಡಲಾಗುತ್ತಿದೆ ಎಂದಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಬಾಲಕೃಷ್ಣ ಅವರು ಸರ್ಕಾರ ಅಲ್ಲ. ಅವರು ಮೊದಲು ತಮ್ಮ ಅನುದಾನವನ್ನು ಪಡೆಯಲಿ. ಮಾಗಡಿಯಲ್ಲಿ ಹಿಂದೆ ನಮ್ಮ ಶಾಸಕರು ಇರಲಿಲ್ಲ. ಆದರೂ ‌ಆ ಕ್ಷೇತ್ರಕ್ಕೆ ನಾವು ಅನುದಾನ ನೀಡಿದ್ದೆವು. ಬಾಲಕೃಷ್ಣ ಅವರು ಮೊದಲು ತಮಗೆ ಅನುದಾನ ಪಡೆಯಲಿ. ನಾವು ನಮ್ಮ ಅನುದಾನವನ್ನು ಪಡೆದುಕೊಳ್ಳುತ್ತೇವೆ. ಈ ಸರ್ಕಾರದಲ್ಲಿ ಯಾರಿಗೂ ಅನುದಾನ ಇಲ್ಲ. ಇದು ಝೀರೊ ಅನುದಾನದ ಸರ್ಕಾರ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದರು.

ಇನ್ನು ಇದೊಂದು ರೈತ ವಿರೋಧಿ ಸರ್ಕಾರವಾಗಿದ್ದು, ನಮ್ಮ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡದೆ ಬಂದ್ ಆಗಿವೆ.
ಕಿಸಾನ್ ಸಮ್ಮಾನ್ ಹಣ ನೀಡಿಲ್ಲ. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಿಲ್ಲ. ವಿದ್ಯಾನಿಧಿ, ರೈತ ಶಕ್ತಿ ಯೋಜನೆ ನಿಡಿದ್ದೇವೆ. ಅವೆಲ್ಲವನ್ನೂ ನಿಲ್ಲಿಸಿದ್ದಾರೆ ಎಂದು ಹೇಳಿದರು.

ಏನಿದು ಅನುದಾನ ವಾಪಸ್‌ ಗಲಾಟೆ?

ಆರ್.ಆರ್. ನಗರ ಸೇರಿದಂತೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಳೆದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇಲ್ಲಿ ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ ಇವರಲ್ಲಿ ಬಿಜೆಪಿಯ ಶಾಸಕರೊಬ್ಬರ ಕ್ಷೇತ್ರವೂ ಸೇರಿದೆ. ಅಂದರೆ, ಯಶವಂತಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್.ಟಿ. ಸೋಮಶೇಖರ್‌ ಅವರ ಕ್ಷೇತ್ರಕ್ಕೂ ಅನುದಾನವನ್ನು ನೀಡಲಾಗಿದೆ.

ಇದನ್ನೂ ಓದಿ: OPS News : ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಹಳೆ ಪಿಂಚಣಿ ಜಾರಿ ಬಗ್ಗೆ ಸಿಎಂ BIG Update

ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದ 485 ಕೋಟಿ ರೂಪಾಯಿಗಳ ಅನುದಾನವನ್ನು ಕಾಂಗ್ರೆಸ್‌ ಸರ್ಕಾರ ಈಗ ವಾಪಸ್‌ ಪಡೆದಿದೆ. ವಾಪಸ್ ಪಡೆದು 11 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಇದು ಈಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

Exit mobile version