Site icon Vistara News

B.S. Yediyurappa: ರಾಜ್ಯದ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಕೊನೆಯ ಅಧಿವೇಶನ ಇದು: ಗೌರವದ ಬೀಳ್ಕೊಡುಗೆ ನೀಡುವುದೇ ವಿಧಾನ ಮಂಡಲ?

this-may-be-tha-last-assembly-session-of-b-s-yediyurappa

#image_title

ರಮೇಶ ದೊಡ್ಡಪುರ, ಬೆಂಗಳೂರು
ನಾಡಿನ ಧೀಮಂತ ರಾಜಕೀಯ ಮುಖಂಡರಲ್ಲೊಬ್ಬರಾದ ಹಾಗೂ ರೈತ ನಾಯಕ, ಹೋರಾಟಗಾರ ಎಂದೇ ಪ್ರಸಿದ್ಧವಾದ ಬಿ.ಎಸ್. ಯಡಿಯೂರಪ್ಪ ಅವರ ಜೀವನದ ಅತ್ಯಂತ ಮಹತ್ವದ ಘಟ್ಟವೊಂದು ಶುಕ್ರವಾರದಿಂದ ಆರಂಭವಾಗಲಿದೆ. ಐದು ದಶಕಗಳಿಂದ ರಾಜ್ಯ ರಾಜಕಾರಣದ ಪ್ರಮುಖ ಬಿಂದುವಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಧಾನ ಮಂಡಲದಲ್ಲಿ ಭಾಗವಹಿಸುವ ಕೊನೆಯ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದೆ.

ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಯಡಿಯೂರಪ್ಪ ಈಗಾಗಲೆ ಹೇಳಿದ್ದಾರೆ. ಜತೆಗೆ, ತಮ್ಮ ಕರ್ಮಭೂಮಿ ಶಿಕಾರಿಪುರ ಕ್ಷೇತ್ರದಲ್ಲಿ ಪುತ್ರ ಬಿ.ವೈ. ವಿಜಯೇಂದ್ರ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದೂ ಘೋಷಣೆ ಮಾಡಿದ್ದಾರೆ. ಮತ್ತೆ ಸ್ಪರ್ಧೆ ಮಾಡಬೇಕು, ವಿಧಾನಸಭೆ ಪ್ರವೇಶಿಸಬೇಕು ಎಂದು ಅಭಿಮಾನಿಗಳು, ಪಕ್ಷದ ನಾಯಕರು ಒತ್ತಾಯ ಮಾಡುತ್ತಿದ್ದಾರಾದರೂ ಯಡಿಯೂರಪ್ಪ ಮಾತ್ರ ಬಿಲ್ಕುಲ್ ಒಪ್ಪುತ್ತಿಲ್ಲ.

ಈ ಬಗ್ಗೆ ಜನವರಿ 29ರಂದು ಬೆಳಗಾವಿಯಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದ ಯಡಿಯೂರಪ್ಪ, ಈಗಾಗಲೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವನು ನಾನು. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ರಾಘವೇಂದ್ರ ಈಗಾಗಲೆ ಸಂಸದರಾಗಿದ್ದಾರೆ. ವಿಜಯೇಂದ್ರ ಸಹ ರಾಜಕಾರಣದಲ್ಲಿ ಬೆಳೆಯುತ್ತಿದ್ದಾರೆ, ರಾಜ್ಯಾದ್ಯಂತ ಸಂಚಾರ ನಡೆಸುತ್ತಿದ್ದಾರೆ. ನಾನಂತೂ ರಾಷ್ಟ್ರ ರಾಜಕಾರಣಕ್ಕೆ ತೆರಳುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಕರೆದಾಗಲೇ ಹೋಗಿಲ್ಲ. ಈಗಂತೂ ಹೋಗುವ ಮಾತಿಲ್ಲ ಎಂದು ಹೇಳಿದ್ದರು.

ದೊರಕುವುದೇ ಗೌರವದ ವಿದಾಯ?

ಸಾಮಾನ್ಯವಾಗಿ ಚುನಾವಣೆಗೆ ಮುನ್ನ ನಡೆಯುವ ಅಧಿವೇಶನದಲ್ಲಿ, ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಲಾಗುತ್ತದೆ. ಮುಂದಿನ ಅಧಿವೇಶನದಲ್ಲಿ ಮತ್ತೆ ಯಾರು ಗೆದ್ದು ಬರುತ್ತಾರೊ ಇಲ್ಲವೋ ಎಂದು ಜನರು ತೀರ್ಮಾನ ಮಾಡುವುದು ಜನರು. ಹೀಗಾಗಿ ಅಧಿವೇಶನದ ಎಲ್ಲ ಸದಸ್ಯರೂ ಫೋಟೊ ತೆಗೆಸಿಕೊಳ್ಳುವ ಸಂಪ್ರದಾಯವೂ ಇದೆ.

ಆದರೆ ಯಡಿಯೂರಪ್ಪ ಎಂಬ ರಾಜ್ಯ ರಾಜಕಾರಣದ ಪ್ರಮುಖ ಕೇಂದ್ರವು ಜನಮಾನಸದಲ್ಲಿ ಹಸಿರಾಗಿರುವಾಗಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಮೂಲತಃ ಮಂಡ್ಯದ ಬೂಕನಕೆರೆಯಲ್ಲಿ ಜನಸಿದ ಯಡಿಯೂರಪ್ಪ, ಶಿವಮೊಗ್ಗವನ್ನು ಕರ್ಮಭೂಮಿ ಮಾಡಿಕೊಂಡವರು.

ಚಿತ್ರ: ಶಾದಿ ಭಾಗ್ಯ ಯೋಜನೆಯನ್ನು ಎಲ್ಲ ಸಮುದಾಯಗಳಿಗೂ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿ 2013ರಲ್ಲಿ ಸದನದಲ್ಲೇ ಎರಡು ದಿನ ಧರಣಿ ನಡೆಸಿದ್ದ ಬಿ.ಎಸ್‌. ಯಡಿಯೂರಪ್ಪ

ಆರ್‌ಎಸ್ಎಸ್ ಹಿನ್ನೆಲೆಯಿಂದ ಬಂದವರಾಗಿ, ರೈತರು ಹಾಗೂ ಕಾರ್ಮಿಕರ ಹೋರಾಟಗಳನ್ನು ಜೀವನದ ಉಸಿರಾಗಿಸಿಕೊಂಡವರು. ಬಿಜೆಪಿಯು ಪ್ರತಿಪಾದಿಸುವ ಹಿಂದುತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದರೂ ಎಂದಿಗೂ ಇತರೆ ಸಮುದಾಯಗಳನ್ನು ಧ್ವೇಷಿಸಿದವರಲ್ಲ. ತಮ್ಮ ಬೆಂಬಲಿಗರನ್ನು ಎಂದಿಗೂ ಕೈಬಿಡುವುದಿಲ್ಲ ಎನ್ನುವ ಅಚಲ ವಿಶ್ವಾಸವನ್ನು ಮೂಡಿಸಿದವರು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತಿನಂತೆಯೇ ಅಕ್ಷರಶಃ ಗುಡುಗುವುದು ಯಡಿಯೂರಪ್ಪ ಅವರ ಸ್ವಭಾವ. 1943ರ ಫೆಬ್ರವರಿ 27ರಂದು ಜನಿಸಿದ ಯಡಿಯೂರಪ್ಪ ಅವರು ಇದೇ ತಿಂಗಳು 80 ವರ್ಷ ಪೂರೈಸಲಿದ್ದಾರೆ.

ಆಗಿಂದಾಗ್ಗೆ ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ ಯಡಿಯೂರಪ್ಪ. 2007ರ ನವೆಂಬರ್ 12ರಿಂದ ನವೆಂಬರ್ 19ರವರೆಗೆ ಕೇವಲ ೭ ದಿನ ಮೊದಲ ಬಾರಿಗೆ ಮುಖ್ಯಮಂತ್ರಿ ಆದರು. ನಂತರ 2008ರ ಮೇ 30ರಿಂದ 2011ರ ಆಗಸ್ಟ್ 5ರವರೆಗೆ ಮೂರು ವರ್ಷ 65 ದಿನ ಅಂದರೆ ಒಟ್ಟು 1162 ದಿನ ಸಿಎಂ ಆಗಿದ್ದರು. ಮೂರನೇ ಬಾರಿ 2018ರ ಮೇ 17ರಿಂದ 2018ರ ಮೇ 23ರವರೆಗೆ ಕೇವಲ ಆರು ದಿನ ಸಿಎಂ ಆಗಿದ್ದರು. 2019ರ ಜುಲೈ 26ರಿಂದ 2021ರ ಜುಲೈ 28ರವರೆಗೆ 2 ವರ್ಷ 2 ದಿನ ಅಂದರೆ 733 ದಿನ ಮುಖ್ಯಮಂತ್ರಿಯಾದರು. ಎಲ್ಲ ನಾಲ್ಕೂ ಅವಧಿಯನ್ನು ಸೇರಿಸಿದರೆ 2908 ದಿನಗಳು. ಅಂದರೆ 5 ವರ್ಷ 2 ತಿಂಗಳು 3 ವಾರ ಕರ್ನಾಟಕದ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಿದ್ದಾರೆ. ಒಟಾರೆ ಐದು ವರ್ಷ ಪೂರೈಸಿದ್ದಾರಾದರೂ ಪೂರ್ಣ ಐದು ವರ್ಷ ನಿರಂತರವಾಗಿ ಅಧಿಕಾರ ನಡೆಸುವ ಅವಕಾಶ ಸಿಗಲೇ ಇಲ್ಲ. ಇದಕ್ಕೆ ರಾಜ್ಯ ರಾಝಕಾರಣ ವಿವಿಧ ಪರಿಸ್ಥಿರಿ, ಪಕ್ಷದ ಆಂತರಿಕ ರಾಜಕಾರಣಿಗಳು ಸೇರಿ ಅನೇಕ ಕಾರಣಗಳಿವೆ.

ಯಡಿಯೂರಪ್ಪ ಅವರೇ ಅನೇಕ ಬಾರಿ ಸ್ಪಷ್ಟನೆ ನೀಡಿರುವ ಪ್ರಕಾರ ಇದೀಗ ಶುಕ್ರವಾರ ಆರಂಭವಾಗಲಿರುವ ಬಜೆಟ್ ಅಧಿವೇಶನವು ಬಿ.ಎಸ್. ಯಡಿಯೂರಪ್ಪ ಅವರ ಕೊನೆಯ ಅಧಿವೇಶನವಾಗಲಿದೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಯಡಿಯೂರಪ್ಪ ಅವರು, ನರೇಂದ್ರ ಮೋದಿಯವರು ಸೂಚನೆ ನೀಡಿದರೆ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವುದೂ ಅನುಮಾನ. ಆದರೆ ಅದೇನೇ ಇದ್ದರೂ ಮುಂದಿನ ದಿನಗಳಲ್ಲಿ ಪಕ್ಷದೊಳಗೆ ನಿರ್ಧಾರವಾಗುವ ವಿಚಾರ. ಸದ್ಯಕ್ಕೆ ಅಧಿವೇಶನವು ಮುತ್ಸದ್ದಿ ನಾಯಕನಿಗೆ ಗೌರವದ ವಿದಾಯ ನೀಡುವ ಮೂಲಕ ತನ್ನನ್ನು ತಾನು ಗೌರವಿಸಿಕೊಳ್ಳುವ ಅವಕಾಶವಂತೂ ಇದೆ. ಯಡಿಯೂರಪ್ಪ ಅವರ ಜನ್ಮದಿನದವರೆಗೆ (ಫೆಬ್ರವರಿ 27) ಅಧಿವೇಶನ ನಡೆಯುವುದು ಬಹುತೇಕ ಅನುಮಾನವಾದ್ಧರಿಂದ, ಹುಟ್ಟುಹಬ್ಬದ ಗೌರವವನ್ನೂ ಸಲ್ಲಿಸಿದಂತಾಗುತ್ತದೆ.

ಶಿಸ್ತಿನ ಸದಸ್ಯ
ಯಡಿಯೂರಪ್ಪ ಅವರು ನಾಲ್ಕು ಬಾರಿ ಸಿಎಂ ಆಗಿದ್ದರೂ ಇಂದಿಗೂ ಅಧಿವೇಶನದಲ್ಲಿ ಶಿಸ್ತಿನ ಸದಸ್ಯ. ಬೇರೆಯವರು ಮಾತನಾಡುತ್ತಿದ್ದರೆ ಕುಳಿತು ಕೇಳುವುದು, ಶ್ರದ್ಧೆಯಿಂದ ನೋಟ್‌ ಮಡಿಕೊಳ್ಳುವುದು ಇಂದಿಗೂ ರೂಡಿಸಿಕೊಂಡಿರುವ ಶಿಸ್ತು. ಪದೇಪದೆ ಎದ್ದು ಓಡಾಡುತ್ತಿರುವ, ಇತರರ ಜತೆಗೆ ಹರಟುತ್ತಿರುವಾನೇಕ ಯುವ ಶಾಸಕರು ಸ್ಪೀಕರ್‌ ಅವರಿಂದ ಬುದ್ಧಿ ಹೇಳಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ಯಡಿಯೂರಪ್ಪ ಮಾತ್ರ ಸದನದ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡವರಲ್ಲ. ಸದನ ಸೇರುವ ಸಮಯಕ್ಕೆ ಸರಿಯಾಗಿ ಆಗಮಿಸುವುದು, ವಿಷಯಕ್ಕೆ ತಕ್ಕಷ್ಟು ಮಾತ್ರ ಮಾತನಾಡುವುದೂ ಅವರ ಜೀವನಶೈಲಿ. ಈ ಅಧಿವೇಶನದಲ್ಲಾದರೂ ಸದಸ್ಯರು ಜನರ ಆಶೋತ್ತರಗಳ ಈಡೇರಿಕೆಗಾಗಿ, ಸಮಾಜದ ನಿಜವಾದ ವಿಚಾರಗಳನ್ನು ಚರ್ಚೆ ಮಾಡುವ ಮೂಲಕವೂ ಯಡಿಯೂರಪ್ಪ ಅವರಿಗೆ ಗೌರವದ ವಿದಾಯ ನೀಡುವ ಅವಕಾಶ ಈ ಬಾರಿಯ ವಿಧಾನಮಂಡಲಕ್ಕಿದೆ.

Exit mobile version