ಮೈಸೂರು: ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಾರ್ವಜನಿಕರು ದೂರದ ಪ್ರದೇಶಗಳಿಂದ ವಿಧಾನಸೌಧ ಮತ್ತು ನನ್ನ ಮನೆ ಬಾಗಿಲಿಗೆ ಬರಬೇಕಾ? ಹಾಗಾದರೆ ನೀವೆಲ್ಲಾ ಯಾಕೆ ಇದ್ದೀರಿ? ಜನ ಬರಿಗಾಲಿನಲ್ಲಿ ಬಂದರೂ, ಚೆಡ್ಡಿ ಹಾಕಿಕೊಂಡು ಬಂದರೂ ಅವರೇ ಸರ್ಕಾರದ ಮಾಲೀಕರು. ಕಾರಿನಲ್ಲಿ ಓಡಾಡುವ ಅಧಿಕಾರಿಗಳು ಬರಿ ಗಾಲಿನಲ್ಲಿ ಬರುವವರನ್ನು ಗೌರವದಿಂದ ಕಾಣಬೇಕು. ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ಅಧಿಕಾರಿಗಳು-ಸಿಬ್ಬಂದಿ ಕೈಗೆ ಸಿಗಬೇಕು. ಖಾತೆ ಮಾಡಿಸಿಕೊಳ್ಳಲು, ಜಾತಿ ಪ್ರಮಾಣ ಪತ್ರಕ್ಕೆ ಜನ ವಿಧಾನಸೌಧಕ್ಕೆ ಬರಬೇಕಾ? ಜನರೇ ನಮ್ಮ ಮಾಲೀಕರು. ನಾವು ಜನರ ಸೇವಕರು. ಜನರ ಹಣದಲ್ಲಿ ನಿಮಗೆ, ನಮಗೆ ಎಲ್ಲಾ ರೀತಿಯ ಸವಲತ್ತುಗಳು ಸಿಗುತ್ತಿವೆ. ಹೀಗಾಗಿ ಜನರನ್ನು ಸಣ್ಣ ಪುಟ್ಟ ಕೆಲಸಕ್ಕೆ ಸರ್ಕಾರಿ ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ | KDP Meeting: ಸುಳ್ಳು ಸುದ್ದಿ ಹರಡುವ, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ: ಸಿಎಂ ಸಿದ್ದರಾಮಯ್ಯ
ಜನ ಸಣ್ಣ ಕೆಲಸಗಳಿಗೆ ವಿಧಾನಸೌಧ ಹಾಗೂ ನನ್ನನ್ನು ಹುಡುಕಿಕೊಂಡು ಮನೆಗೆ ಬರುತ್ತಾರೆ ಎಂದರೆ, ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥ. ಇದನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.
ಮೊದಲು ನನ್ನ ಜಿಲ್ಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಚುರುಕಾಗಬೇಕು. ನಿಯಮಬದ್ಧವಾಗಿ, ಕಾಲ ಮಿತಿಯಲ್ಲಿ ಕೆಲಸ ಮಾಡದಿದ್ದರೆ ಅದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನ ಯಾವ ನಿರೀಕ್ಷೆ ಇಟ್ಟುಕೊಂಡು ಸರ್ಕಾರವನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಿ. ಮೈಸೂರು ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ 16ನೇ ಸ್ಥಾನದಲ್ಲಿದೆ ಎಂದರೆ ನಾಚಿಕೆಗೇಡು. ಇದನ್ನು ನಾನು ಸಹಿಸಲ್ಲ. ಶಿಕ್ಷಣ, ಆರೋಗ್ಯ ಸೂಚ್ಯಂಕ ಸೇರಿ ಎಲ್ಲಾ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಸೂರು ಮಾದರಿ ಜಿಲ್ಲೆಯಾಗಲೇಬೇಕು. ಆ ರೀತಿ ದಕ್ಷತೆ ಮತ್ತು ಕಾರ್ಯಕ್ಷಮತೆ ಪ್ರದರ್ಶಿಸಿ ಎಂದು ಎಲ್ಲಾ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಆರು ತಿಂಗಳ ಬಳಿಕ ಮತ್ತೆ ಕೆಡಿಪಿ ಸಭೆ ನಡೆಸುತ್ತೇನೆ. ಅಷ್ಟರೊಳಗೆ ಪರಿಸ್ಥಿತಿ ಸುಧಾರಿಸಬೇಕು. ಪ್ರಗತಿಯ ವೇಗ ಹೆಚ್ಚಾಗಬೇಕು. ಇಲ್ಲದಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡುತ್ತೇನೆ. ಪ್ರೀ ಮೆಚೂರ್ ಎನ್ನುವುದನ್ನೂ ನೋಡದೆ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಮಳೆಯ ಅಭಾವ ಇರುವುದರಿಂದ ಜನರು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ಎಂದ ಸಿಎಂ, ಇನ್ಸ್‌ಪೆಕ್ಟರ್‌ಗಳ ಅರಿವಿಗೆ ಬಾರದಂತೆ ಅವರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯಲು ಸಾಧ್ಯವೇ ಇಲ್ಲ. ಈ ಬಗ್ಗೆ ಡಿಸಿಪಿಗಳು, ಎಸ್‌ಪಿಗಳು ಎಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಹೇಳಿದರು.