ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು (Praveen Nettaru) ಬರ್ಬರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಪಕ್ಷ ಹಾಗೂ ಸಿದ್ಧಾಂತಕ್ಕೆ ಹೋರಾಡುತ್ತಿರುವ ಕಾರ್ಯಕರ್ತರ ಪ್ರಾಣಕ್ಕೆ ಬಿಜೆಪಿ ಸರ್ಕಾರದಲ್ಲೇ ರಕ್ಷಣೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ನೂರಾರು ಕಾರ್ಯಕರ್ತರು, ಮುಖಂಡರು ತಮ್ಮ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿದ್ದಾರೆ. ಪ್ರವೀಣ್ ಹತ್ಯೆಗೆ ನ್ಯಾಯ ಸಿಗುವವರೆಗೆ ಪಕ್ಷದ ಕಾರ್ಯಕಲಾಪಗಳಲ್ಲಿ ಸಕ್ರಿಯವಾಗುವುದಿಲ್ಲ ಎಂದು ಈ ಮೂಲಕ ವರಿಷ್ಠರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಕ್ಷದ ವಿರುದ್ಧವೇ ಬಿಜೆಪಿ ಯುವ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದ್ದು, ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದಾರೆ. ಇಂದಿನ ಕಾಲಘಟ್ಟದಲ್ಲೂ ಕೂಡ ಸೈದ್ಧಾಂತಿಕ ವಿಚಾರಧಾರೆಗೆ ಹೋರಾಡುವಂತಹ ದುರ್ಗತಿ ಬಂದು ಒದಗಿರುವುದು ಕಾರ್ಯಕರ್ತರಿಗೆ ನೋವಾಗುತ್ತಿದೆ. ಪ್ರವೀಣ್ ನೆಟ್ಟಾರು ಸಾವು ಹಿಂದು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಬಿಜೆಪಿ ಯುವ ಮೋರ್ಚಾ ಹೇಳಿದೆ.
ಹಿಂದೆಲ್ಲ ನಡೆದಂತಹ ಕೊಲೆಗಳಿಗೆ ಯಾವ ರೀತಿಯಲ್ಲಿ ನ್ಯಾಯ ಸಿಕ್ಕಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ. ಕಠಿಣ ಕ್ರಮ ಎನ್ನುವ ಭರವಸೆ ಭರವಸೆಯಾಗಿಯೇ ಉಳಿದಿರುವ ಕಾರಣ ಬಿಜೆಪಿ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸಂದೀಪ್ ಹರವಿನಗಂಡಿ ಸೇರಿ ಜಿಲ್ಲೆಯ ಯುವಮೋರ್ಚಾದ ಎಲ್ಲ ಪದಾಧಿಕಾರಿಗಳು ಹಾಗೂ 9 ಮಂಡಲದ ಅಧ್ಯಕ್ಷರು ಸೇರಿ ಪಕ್ಷದ ಜವಾಬ್ದಾರಿಗಳಿಗೆ ಸಾಮೂಹಿಕ ರಾಜಿನಾಮೆ ನೀಡುತ್ತಿರುವುದಾಗಿ ಯುವ ಮೋರ್ಚಾ ಘಟಕ ತಿಳಿಸಿದೆ.
ಇದನ್ನೂ ಓದಿ | Praveen nettar| ಮುಗ್ಧ ಪ್ರಾಣಿಗಳ ಮೇಲೆ ಅಪಾರ ಪ್ರೀತಿ, ಅನಾಥ ನಾಯಿ ಮರಿಗಳಿಗೆ ಆಸರೆ ಒದಗಿಸಿದ್ದರು ಪ್ರವೀಣ್
ಇನ್ನು ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು, ಪ್ರವೀಣ್ ಹತ್ಯೆಗೆ ನ್ಯಾಯ ಸಿಗುವವರೆಗೆ ಸಂಘಟನೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೊಸದುರ್ಗ ಮಂಡಲ ಉಪಾಧ್ಯಕ್ಷ ಮಂಜು ಸಾಣೇಹಳ್ಳಿ, ಕಾರ್ಯದರ್ಶಿ ಎನ್.ಆರ್.ಜಗದೀಶ್, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ರಮೇಶ್ ಗೂಳಿಹಟ್ಟಿ ತಿಳಿಸಿದ್ದು, ಅಗತ್ಯಬಿದ್ದರೆ ರಾಜೀನಾಮೆಗೂ ಸಿದ್ಧ ಎಂದು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರೂ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ. ಈಗಾಗಲೇ ಕೊಪ್ಪಳ ಗ್ರಾಮೀಣ ಮಂಡಲದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶೇಖರ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಅದೇ ರೀತಿ ತುಮಕೂರು ಸಾಮಾಜಿಕ ಜಾಲತಾಣ ಪ್ರಕೋಷ್ಟ ಪದಾಧಿಕಾರಿ ಶಕುಂತಲಾ ನಟರಾಜ್ ಎಂಬುವವರು ರಾಜೀನಾಮೆ ನೀಡಿದ್ದಾರೆ.
ಹಾಗೆಯೇ ಬಾಗಲಕೋಟೆ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ, ಪ್ರಧಾನ ಕಾರ್ಯದರ್ಶಿ ಭುವನೇಶ್ವರ ಪೂಜಾರ್ ಸೇರಿ 12 ಮಂಡಲಗಳ ಪದಾಧಿಕಾರಿಗಳು, ಕಾರ್ಯಕರ್ತರು, ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇನ್ನು ಮೈಸೂರಿನಲ್ಲೂ ಯುವ ಮೋರ್ಚಾ ಸದಸ್ಯರು ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ. ಮೈಸೂರು ನಗರದ ನರಸಿಂಹರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ ಸೇರಿ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಪ್ರವೀಣ್ ಹಂತಕರನ್ನು ಬಂಧಿಸುವಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ನಗರ ಬಿಜೆಪಿ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ನಗರ ಬಿಜೆಪಿ ಮಂಡಲದ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಸಂಘ ಪರಿವಾರ, ಹಿಂದುಪರ ಕಾರ್ಯಕರ್ತರ ಹತ್ಯೆ ನಿರಂತರವಾಗಿ ರಾಜ್ಯದಲ್ಲಿ ನಡೆಯುತ್ತಿದ್ದು, ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಜಿಹಾದಿ ಮನಸ್ಥಿತಿಯ ಹಂತಕರಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಕೂಡಲೇ ಸರ್ಕಾರ ಪ್ರವೀಣ್ ಅವರನ್ನು ಹತ್ಯೆ ಮಾಡಿದ ಹಂತಕರನ್ನು ಬಂಧಿಸಿ ಶೂಟ್‌ಔಟ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ: ಎಂ.ಪಿ.ರೇಣುಕಾಚಾರ್ಯ
ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ, ಕಾರ್ಯಕರ್ತರ ಸಾವಿನಿಂದ ನನಗೆ ಬೇಸರ ಆಗಿದೆ. ಪ್ರವೀಣ್ ನೆಟ್ಟಾರು ಹತ್ಯೆಗೈದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಹಲವು ಕಾರ್ಯಕರ್ತರು ನನಗೆ ಕರೆ ಮಾಡುತ್ತಿದ್ದಾರೆ, ಅವರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಪಕ್ಷ ಬಿ ಫಾರ್ಮ್ ಕೊಟ್ಟಿದೆ. ಆದರೆ, ಜನರು ನಮಗೆ ಅಧಿಕಾರ ಕೊಟ್ಟಿದ್ದಾರೆ. ಶಾಸಕ ಸ್ಥಾನ ಶಾಶ್ವತವಲ್ಲ, ಅಧಿಕಾರಕ್ಕೆ ನಾನು ಅಂಟಿಕೊಂಡು ಕುಳಿತಿಲ್ಲ. ನಾಳೆ ಕ್ಷೇತ್ರಕ್ಕೆ ಹೋಗಿ ಸಭೆ ಮಾಡಿ, ಕಾರ್ಯಕರ್ತರು ಏನು ಹೇಳುತ್ತಾರೋ ಅದನ್ನೇ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ | Praveen Nettaru | ಪ್ರವೀಣ್ ಕುಟುಂಬಕ್ಕೆ ಸಂಘ ಪರಿವಾರದಿಂದ 50 ಲಕ್ಷ ರೂ. ನೆರವು