ಬೆಂಗಳೂರು: 2017-18ನೇ ಸಾಲಿನಲ್ಲಿ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ (KAS) ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (Karnataka Public Service Commission) ಸಿಹಿ ಸುದ್ದಿ ನೀಡಿದೆ. ಹೌದು, 2017-18ರಲ್ಲಿ ಕೆಎಎಸ್ ನೇಮಕಾತಿಗೆ ಅರ್ಜಿ ಸಲ್ಲಿಸಿದವರಿಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಸಾವಿರಾರು ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ.
2024ರ ಜುಲೈ 6ರಿಂದ ಜುಲೈ 21ರವರೆಗೆ 2017-18ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗವು ಅವಕಾಶ ನೀಡಿದೆ. ಈ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 25ರಂದು ನಡೆಸಲು ಕೂಡ ಕರ್ನಾಟಕ ಲೋಕಸೇವಾ ಆಯೋಗವು ತೀರ್ಮಾನಿಸಿದೆ. ಕೆಎಎಸ್ ಸೇರಿ ಇತರ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಜುಲೈ 21ರಂದು ನಡೆಸಲಾಗುವುದು ಎಂದು ಈಗಾಗಲೇ ಕೆಪಿಎಸ್‌ಸಿ ತಿಳಿಸಿತ್ತು. ಅಭ್ಯರ್ಥಿಗಳ ಮನವಿ ಮೇರೆಗೆ ಪರೀಕ್ಷಾ ದಿನಾಂಕ ಮುಂದೂಡಲಾಗಿತ್ತು.
ಕೆಪಿಎಸ್‌ಸಿ ಅಧಿಸೂಚನೆ
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳು 26-02-2024 ರಂದು ಹೊರಡಿಸಿರುವ ಅಧಿಸೂಚನೆಯ ಹುದ್ದೆಗಳಿಗೆ / ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಕೆಪಿಎಸ್‌ಸಿ 15 ದಿನಗಳ ಕಾಲಾವಕಾಶ ನೀಡಬೇಕೆಂದು ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಈಗ ಕೆಪಿಎಸ್‌ಸಿಯು ಅರ್ಜಿ ಸಲ್ಲಿಸಲು ಅವಕಾಶ ನೀಡುವ ಜತೆಗೆ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಘೋಷಿಸಿದೆ.
ವಿಶೇಷ ಸೂಚನೆ
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಗೆ ಅರ್ಜಿ ಸಲ್ಲಿಸಿದವರಿಗೆ ಕೆಪಿಎಸ್‌ಸಿಯು ವಿಶೇಷ ಸೂಚನೆ ನೀಡಿದೆ. ಅಭ್ಯರ್ಥಿಗಳು ಈಗಾಗಲೇ ಕೆಪಿಎಸ್‌ಸಿ ಉದ್ಯೋಗ ಸಾಫ್ಟ್‌ವೇರ್‌ನಲ್ಲಿ ಒಟಿಆರ್ ಅನ್ನು ರಚಿಸಿದ್ದರೆ ಅವರು ನೇರವಾಗಿ ವೆಬ್‌ಸೈಟ್‌ಗೆ (https://kpsconline.karnataka.gov.in) ಭೇಟಿ ನೀಡಿ, ಲಾಗ್‌ಇನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು. ಒಟಿಆರ್ ರಚಿಸದವರು ವೆಬ್‌ಸೈಟ್‌ಗೆ ಭೇಟಿ ನೀಡಿ, ಮೊದಲು ಒಟಿಆರ್ ರಚಿಸಿ, ನಂತರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ: Bengaluru News : ಕೆಎಎಸ್ ಅಧಿಕಾರಿ ಪತ್ನಿ ಅನುಮಾನಾಸ್ಪದ ಸಾವು; ಹೈಕೋರ್ಟ್ ವಕೀಲೆಗೆ ಕಾಡಿದ್ದೇನು?