Site icon Vistara News

MLC Election: ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನ ಮೂವರು ಅವಿರೋಧ ಆಯ್ಕೆ; ಶೆಟ್ಟರ್‌ ಕಮ್‌ ಬ್ಯಾಕ್‌

New MLC Jagadish Shettar NS Boseraju and Tippanna Kamakanoor

#image_title

ಬೆಂಗಳೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ (MLC Election) ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧ ಅಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಅವರ ಅವಿರೋಧ ಆಯ್ಕೆ ಘೋಷಿಸಲಾಗಿದೆ.

ನಾಮಪತ್ರ ವಾಪಸ್ ಪಡೆಯಲು ಶುಕ್ರವಾರ ಕೊನೆಯ ದಿನವಾಗಿತ್ತು. ಪಕ್ಷೇತರ ಅಭ್ಯರ್ಥಿ ಡಾ.ಕೆ ಪದ್ಮರಾಜನ್‌ ಅವರ ನಾಮಪತ್ರ ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದೆ. ಹೀಗಾಗಿ ಉಳಿದ ಮೂವರು ಕಾಂಗ್ರೆಸ್‌ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಧಾನಸಭಾ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಮಾಹಿತಿ ನೀಡಿದ್ದಾರೆ.

ಶೆಟ್ಟರ್‌ 5 ವರ್ಷ, ಬೋಸರಾಜು 1 ವರ್ಷ, ಕಮಕನೂರು 3 ವರ್ಷ ಎಂಎಲ್‌ಸಿ

ರಾಜ್ಯದಲ್ಲಿ ಖಾಲಿಯಾಗಿರುವ ವಿಧಾನ ಪರಿಷತ್‌ನ (MLC Election) ಮೂರು ಸ್ಥಾನಗಳಿಗೆ ಜೂನ್‌ 30ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನು ಇವರ ಅಧಿಕಾರಾವಧಿ ನೋಡುವುದಾದರೆ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ 5 ವರ್ಷ, ಹಾಲಿ ಸಚಿವ ಎನ್.ಎನ್‌. ಬೋಸ್‌ ರಾಜು 1 ವರ್ಷ ಮತ್ತು ತಿಪ್ಪಣ್ಣ ಕಮಕನೂರು 3 ವರ್ಷ ಎಂಎಲ್‌ಸಿಯಾಗಿ ಇರಲಿದ್ದಾರೆ.

ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್‌ ನಡೆಯುವ ಚುನಾವಣೆ ಇದಾಗಿದೆ. 135 ಶಾಸಕರನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಎಲ್ಲ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ | ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ? ಸುಳಿವು ಬಿಚ್ಚಿಟ್ಟ ಸಿ.ಪಿ.ಯೋಗೇಶ್ವರ್

ಶೆಟ್ಟರ್‌ಗೆ ದೊಡ್ಡ ಗೌರವ

ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಯಲ್ಲಿ ಟಿಕೆಟ್‌ ನಿರಾಕರಿಸಲ್ಪಟ್ಟು ಕಾಂಗ್ರೆಸ್‌ ಸೇರಿದ್ದ ಜಗದೀಶ್‌ ಶೆಟ್ಟರ್‌ ಅವರು ಚುನಾವಣೆಯಲ್ಲಿ ಸೋಲು ಕಂಡರೂ ಅವರಿಗೆ ಪಕ್ಷ ದೊಡ್ಡ ಗೌರವವನ್ನೇ ನೀಡಿದೆ. ಬಾಬುರಾವ್‌ ಚಿಂಚನಸೂರು ಅವರಿಂದ ತೆರವಾಗಿರುವ ಸ್ಥಾನಕ್ಕೆ ಜಗದೀಶ್‌ ಶೆಟ್ಟರ್‌ ಅವರು ಆಯ್ಕೆಯಾಗಿದ್ದು, ಐದು ವರ್ಷ ಸದಸ್ಯರಾಗಿರಲಿದ್ದಾರೆ.

ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಆಗಿದ್ದರಿಂದ ಈ ಬಾರಿ ಕಾಂಗ್ರೆಸ್ ಗೆ ಲಾಭವಾಗಿತ್ತು. 39 ಲಿಂಗಾಯತ ಸಮುದಾಯದ ಶಾಸಕರು ಗೆಲ್ಲುವುದರಲ್ಲಿ ಶೆಟ್ಟರ್‌ ಅವರ ವರ್ಚಸ್ಸಿನ ಪ್ರಭಾವವೂ ಇದೆ ಎಂದು ಕಾಂಗ್ರೆಸ್‌ ಕಂಡುಕೊಂಡಿದೆ. ಇದರ ಲಾಭವನ್ನು ಲೋಕಸಭಾ ಚುನಾವಣೆಯಲ್ಲಿಯೂ ಪಡೆಯಲು ಶೆಟ್ಟರ್‌ಗೆ ಮಣೆ ಹಾಕಲಾಗಿದೆ ಎಂದು ಹೇಳಲಾಗಿದೆ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಶೆಟ್ಟರ್ ಗೆ ಐದು ವರ್ಷಗಳ ಅವಧಿ ಇರೋ ಎಂಎಲ್ಸಿ ಸ್ಥಾನವನ್ನು ಕಾಂಗ್ರೆಸ್‌ ಕೊಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ | Congress Guarantee: ರಾಜ್ಯ ಬಿಜೆಪಿ ಅಧ್ಯಕ್ಷ ಮನೆಗೆ ಮಾರಿ ಪರರಿಗೆ ಉಪಕಾರಿ: ಸಚಿವ ದಿನೇಶ್‌ ಗುಂಡೂರಾವ್‌ ವಾಗ್ದಾಳಿ

ಎನ್.ಎಸ್‌. ಬೋಸರಾಜು ಅವರಿಗೆ 1 ವರ್ಷ ಅವಕಾಶವಿರುವ ಪರಿಷತ್‌ ಸದಸ್ಯತ್ವವನ್ನು ನೀಡಲಾಗಿದೆ. ಬೋಸರಾಜು ಅವರನ್ನು ಈಗಾಗಲೇ ಸಣ್ಣ ನೀರಾವರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಇವರು ಆರ್‌.ಶಂಕರ್‌ ಅವರಿಂದ ತೆರವಾಗಿರುವ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಇತ್ತ ತಿಪ್ಪಣ್ಣ ಕಮಕನೂರು ಅವರಿಗೆ ಲಕ್ಷ್ಮಣ ಸವದಿ ಅವರಿಂದ ತೆರವಾದ ಮೂರು ವರ್ಷಗಳ ಅವಧಿಯ ಮೇಲ್ಮನೆ ಸ್ಥಾನವನ್ನು ನೀಡಲಾಗಿದೆ.

Exit mobile version