Site icon Vistara News

Davanagere News: ಮತ್ತಿ ಗ್ರಾಮದಲ್ಲಿ ಸಾಂಕ್ರಾಮಿಕ ವಾಂತಿ-ಭೇದಿ; ಒಂದೇ ವಾರದಲ್ಲಿ ಮೂವರು ವೃದ್ಧರ ಸಾವು

matti village

ದಾವಣಗೆರೆ: ತಾಲೂಕಿನ ಮತ್ತಿ ಗ್ರಾಮದಲ್ಲಿ (Davanagere News) ವಾಂತಿ-ಭೇದಿಯಿಂದ ಅಸ್ವಸ್ಥಗೊಂಡು ಒಂದೇ ವಾರದಲ್ಲಿ ಮೂವರು ವೃದ್ಧರು ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಇನ್ನೂ ಹಲವರಲ್ಲಿ ಸಾಂಕ್ರಾಮಿಕ ವಾಂತಿ-ಭೇದಿ ಕಾಣಿಸಿಕೊಂಡಿದ್ದರೂ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯತಿ, ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ಶನಿವಾರ ಶಾಂತಮ್ಮ (80), ಭಾನುವಾರ ಸೋಮಣ್ಣ (70) ಮೃತಪಟ್ಟಿದ್ದರು. ಅದೇ ರೀತಿ ಶನಿವಾರ ಚಿಗಟೇರಿ ಆಸ್ಪತ್ರೆಯಲ್ಲಿ ಕೆಂಚಮ್ಮ ಎಂಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಹಲವರು ವಾಂತಿ- ಭೇದಿಯಿಂದ ತೀವ್ರ ಅಸ್ವಸ್ಥವಾಗಿ ಆಸ್ಪತ್ರೆ ಸೇರುತ್ತಿದ್ದಾರೆ. ಮತ್ತೊಬ್ಬ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದರಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧರೊಬ್ಬರು ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾಂತಿ ಭೇದಿಯಿಂದ 30ಕ್ಕೂ ಹೆಚ್ಚು ಒಳರೋಗಿ ಹಾಗೂ ಹೊರ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಗ್ರಾಮದಲ್ಲಿ ಅಸ್ವಸ್ಥಗೊಳ್ಳುವವರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಆದರೆ, ಇದಕ್ಕೆ ವೈದ್ಯರು ಕಾರಣವನ್ನೇ ತಿಳಿಸಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ | Murder Case : ಕೊಡಲಿಯಿಂದ ಹೊಡೆದು ಪತ್ನಿಯನ್ನೇ ಕೊಂದ ಕುಡುಕ ಪತಿ!

ಆರೋಗ್ಯ ಇಲಾಖೆ ಸ್ಪಷ್ಟನೆ

ಮತ್ತಿ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟನೆ ನೀಡಿದೆ. ಅ.9ರಂದು ಒಂದೇ ಕುಟುಂಬದ 75 ವರ್ಷದ ವ್ಯಕ್ತಿ, ಪತ್ನಿ ಮತ್ತು ಮೊಮ್ಮಗ ಹೊಟ್ಟೆ ನೋವು, ವಾಂತಿ ಭೇದಿಯಿಂದ ಚಿಗಟೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ವೃದ್ಧ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಉಳಿದವರು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದಾರೆ.

ಇನ್ನೊಂದು ಕುಟುಂಬದಲ್ಲಿ ಇದೇ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಇಬ್ಬರಿಗೆ ಚಿಕಿತ್ಸೆ ನೀಡಲಾಗಿದೆ. ಕೆಲವು ದಿನಗಳ ಹಿಂದೆ 70 ವರ್ಷದ ವೃದ್ಧೆ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ನೀರಿನ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ. ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.

ಇದಕ್ಕೂ ಮೊದಲು ಚಿತ್ರದುರ್ಗದ ಚಿಕ್ಕಂದವಾಡಿ ಗ್ರಾಮಕ್ಕೆ ಹೋಗಿ ಬಂದಿದ್ದ ಮೂವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Exit mobile version