ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೆಕೋಡ್ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಸಜೀವವಾಗಿ ದಹನಗೊಂಡಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಅರ್ಚಕರಾಗಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55) ಹಾಗೂ ಹಿರಿಯ ಪುತ್ರ ಶ್ರೀರಾಮ್ (30) ಮೃತರು. ಮತ್ತೊಬ್ಬ ಪುತ್ರ ಭರತ್ (28) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಸುಟ್ಟು ಕರಕಲಾದ ಮನೆ
ಮನೆಯ ಕೋಣೆಯೊಳಗೆ ಸೌದಿ ಜಮೆ ಮಾಡಿಕೊಂಡಿದ್ದ ಇವರು, ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Self Harming: ಕ್ಲಾಸ್‌ಮೇಟ್‌ಗಳಿಂದಲೇ ಲೈಂಗಿಕ ದೌರ್ಜನ್ಯ, ಅಕ್ಕ-ತಂಗಿ ಆತ್ಮಹತ್ಯೆ; ಇದೆಂಥ ಅನ್ಯಾಯ!
ಮಂಡ್ಯದಲ್ಲಿ ಅಗ್ನಿ ಅವಘಡ
ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ ಗ್ರಾಮದ ಬಳಿ ಇರುವ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಮಲ್‌ಮುಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮದ್ದೂರು ತಾಲೂಕಿನ ಗ್ರಾಮದಲ್ಲಿರುವ ಮನ್‌ಮುಲ್‌ನಲ್ಲಿರುವ ಪ್ಯಾಕಿಂಗ್ ಸೆಕ್ಷನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸಿವೆ. ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.