ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಚಂಗೌಡನಹಳ್ಳಿ ಬಳಿಯ ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು (Three People Drowned) ನೀರುಪಾಲಾಗಿದ್ದಾರೆ. ಮೊದಲು ಯುವತಿಯೊಬ್ಬಳು ಕಾಲು ಜಾರಿ ನಾಲೆಗೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ತಂದೆ-ತಾಯಿಯೂ ನಾಲೆಗೆ ಜಿಗಿದಿದ್ದಾರೆ. ಯುವತಿಯನ್ನೂ ರಕ್ಷಿಸಲು ಆಗದೆ ಆಕೆಯ ತಂದೆ-ತಾಯಿ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಮೊಹಮ್ಮದ್ ಖಲೀಫ್ (42), ಶಾವರಾ ಭಾನು (35) ಹಾಗೂ ಶಾಹಿರಾ ಭಾನು (20) ಎಂದು ಗುರುತಿಸಲಾಗಿದೆ. ಮೊಹಮ್ಮದ್ ಖಲೀಫ್ ಅವರ ತಾಯಿಯ ತಿಥಿ ಕಾರ್ಯಕ್ಕೆಂದು ಖಲೀಫ್ ಕುಟುಂಬಸ್ಥರು ಸರಗೂರು ಗ್ರಾಮಕ್ಕೆ ಆಗಮಿಸಿದ್ದರು. ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈಕಾಲು ತೊಳೆಯಲು ಹೋದಾಗ ಶಾಹಿರಾ ಭಾನು ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಈಕೆಯನ್ನು ರಕ್ಷಿಸಲು ಹೋದ ತಂದೆ-ತಾಯಿಯೂ ನೀರುಪಾಲಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಯು ಬೋಟ್ ಮೂಲಕ ಮೂವರ ಶವಗಳನ್ನು ಹೊರತೆಗೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಸಾಗರ ತಾಲೂಕಿನ ವಡನ್ ಬೈಲ್ ಬಳಿಯ ದೇವಿಗುಂಡಿಯಲ್ಲಿ ಕೃಷಿ ಅಧಿಕಾರಿ ಕುಮಾರ್, ಐಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಅರುಣ್ ಅವರು ಈಜಲು ಹೋದಾಗ ಮುಳುಗಿ ಮೃತಪಟ್ಟಿದ್ದರು.
ಇದನ್ನೂ ಓದಿ: Shivamogga News: ಸಾಗರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು
ಮೃತರು ವಡನ್ ಬೈಲ್ ಸಮೀಪದ ದೇವಿಗುಂಡಿಗೆ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಮಧ್ಯಾಹ್ನ ಊಟ ಮುಗಿಸಿದ ನಂತರ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದರು ಇಬ್ಬರ ಶವವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿತ್ತು. ಸ್ಥಳಕ್ಕೆ ಕಾರ್ಗಲ್ ಸಬ್ ಇನ್ಸ್‌ಪೆಕ್ಟರ್ ಹೊಳಬಸಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.