Site icon Vistara News

Group Clash: ಫ್ಲೆಕ್ಸ್‌ ಗಲಾಟೆಯಲ್ಲಿ ಕೈ-ಕಮಲ ಕಾರ್ಯಕರ್ತರ ಮಾರಾಮಾರಿ; 3 ಪ್ರತ್ಯೇಕ ಎಫ್ಐಆರ್ ದಾಖಲು

Three separate FIRs lodged in congressm bjp workers clash at govindaraja nagar in bangalore

#image_title

ಬೆಂಗಳೂರು: ಫ್ಲೆಕ್ಸ್‌ ಹಾಕುವ ವಿಚಾರವಾಗಿ ಸಚಿವ ವಿ.ಸೋಮಣ್ಣ ಹಾಗೂ ಮಾಜಿ ಶಾಸಕ ಪ್ರಿಯಕೃಷ್ಣ ಬೆಂಬಲಿಗರ ನಡುವೆ ಮಾರಾಮಾರಿ ನಡೆದ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜನಗರ ಠಾಣೆಯಲ್ಲಿ ಒಟ್ಟು ಮೂರು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಪೊಲೀಸರು ಒಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡರೆ, ಉಳಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ನೀಡಿರುವ ದೂರು-ಪ್ರತಿದೂರು ಆಧರಿಸಿ ಎರಡು ಪ್ರಕರಣಗಳು ದಾಖಲಾಗಿವೆ.

ಫ್ಲೆಕ್ಸ್ ಹಾಕುವ ವಿಚಾರಕ್ಕೆ ಶುಕ್ರವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜಿಎಸ್ ಮೈದಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ಭಾನುವಾರ ಬಿಜಿಎಸ್ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ಫ್ಲೆಕ್ಸ್​ ಹಾಕಲು ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಸ್ಥಳೀಯ ಯುವಕರು ತಡೆದ ಹಿನ್ನೆಲೆಯಲ್ಲಿ ವಾಗ್ವಾದ ಶುರುವಾಗಿತ್ತು. ನಂತರ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದರಿಂದ ಎರಡೂ ಗುಂಪುಗಳ ನಡುವೆ ಜಗಳ, ಕಲ್ಲು ತೂರಾಟ ನಡೆದಿತ್ತು.

ಗಲಾಟೆಯಲ್ಲಿ ಒಬ್ಬ ಬಿಜೆಪಿ ಮುಖಂಡ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದವು. ನಂತರ ಪೊಲೀಸರು ಲಾಠಿ ಚಾರ್ಜ್‌ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ನಂತರ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವ ಆರೋಪದ‌ ಮೇಲೆ ಮೂವತ್ತಾರು ಜನರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Bike Wheeling: ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್‌ ಕಿರಿಕ್‌; ಬೇಡ ಎಂದಿದ್ದಕ್ಕೆ ಲಾಂಗು, ಮಚ್ಚು ತೆಗೆದುಕೊಂಡು ಹೋದವ ಮೃತ್ಯು

ಇದಲ್ಲದೇ ಕಾಂಗ್ರೆಸ್ ಕಾರ್ಯಕರ್ತೆ ಪ್ರೇಮಲತಾ ನೀಡಿರುವ ದೂರಿನನ್ವಯ 10 ಜನರ ವಿರುದ್ಧ ಹಲ್ಲೆ ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಪ್ರತಿಯಾಗಿ ಬಿಜೆಪಿ ಕಾರ್ಯಕರ್ತೆ ರಮ್ಯಾ ಎಂಬುವವರು ಸಹ ದೂರು ನೀಡಿದ್ದು, ಅದರನ್ವಯ 8 ಜನರ ವಿರುದ್ಧ ಹಲ್ಲೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.

ಪರಸ್ಪರ ಕೆಸರೆರಚಾಟದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರು

ಇನ್ನು ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ, ಮಾರ್ಚ್ 18, 19ಕ್ಕೆ ಕಾಂಗ್ರೆಸ್ ಮಹಿಳಾ ಸದಸ್ಯರ ಸಮಾವೇಶ ಇತ್ತು. ಕಾರ್ಯಕ್ರಮ ಪಬ್ಲಿಸಿಟಿಗಾಗಿ ಫ್ಲೆಕ್ಸ್ ಹಾಕಲು ನಮ್ಮ ಕಾರ್ಯಕರ್ತರು ತೆರಳಿದ್ದರು. ಇದಕ್ಕೆ ಕೆಲವು ಕಿಡಿಗೇಡಿಗಳು ಅಡ್ಡಿಪಡಿಸಿದ್ದಾರೆ. ಕೆಲ ರೌಡಿಶೀಟರ್ಸ್ ಹಾಗೂ ಸಮಾಜಘಾತುಕ ಶಕ್ತಿಗಳು ನಮ್ಮ‌ ಮಹಿಳಾ ಕಾರ್ಯಕರ್ತರ ಜತೆ ಗಲಾಟೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್‌ ಮಾಡಿ ಬಿಜೆಪಿಗೆ ಸಪೋರ್ಟ್ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಡೆಯುವ ಹಾಗೆ ಮಾಡಿದ್ದಾರೆ. ಗಲಾಟೆ ನಡೆಯುವ ಮುನ್ನ ಅರುಣ್ ಸೋಮಣ್ಣ ಕೂಡ ಇದ್ದರು. ಬಿಜೆಪಿಯವರ ಕಾರಿನಲ್ಲಿ ಮಾರಾಕಾಸ್ತ್ರಗಳೂ ಇದ್ದವು ಎಂದು ಆರೋಪಿಸಿದ್ದಾರೆ.

ಪೊಲೀಸ್‌ ಕಮಿಷನರ್‌ಗೆ ಬಿಜೆಪಿ ದೂರು

ವಿಜಯನಗರ ಬಿಜೆಪಿ ನಿಯೋಗವು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಗೆ ದೂರು ನೀಡಿದೆ. ಪೊಲೀಸ್ ಅಧಿಕಾರಿಗಳು ನಮ್ಮ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಕಾಂಗ್ರೆಸ್ ಗೂಂಡಾಗಳು ಕಿರಿಕ್ ಮಾಡಿದ್ದಾರೆ. ಮಾ. 19 ರಂದು ಕಾರ್ಯಕ್ರಮ ಇದ್ದರೆ 18ರಂದು ಫ್ಲೆಕ್ಸ್ ಕಟ್ಟಬೇಕಿತ್ತು. ಆದರೆ, ಶುಕ್ರವಾರ ಕ್ರಿಕೆಟ್ ಆಡುತ್ತಿದ್ದವರಿಗೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಗಲಾಟೆ ಸಮಯದಲ್ಲಿ ಅರುಣ್ ಸೋಮಣ್ಣ ಸ್ಥಳದಲ್ಲಿಯೇ ಇರಲಿಲ್ಲ, ಯಾವುದೇ ಮಾರಕಾಸ್ತ್ರಗಳು ಕೂಡ ಇರಲಿಲ್ಲ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ | Murder Case: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನೇ ತುಂಡು ತುಂಡಾಗಿ ಕತ್ತರಿಸಿದ್ದ ಅಕ್ಕ; 8 ವರ್ಷಗಳ ಬಳಿಕ ಸೆರೆ ಸಿಕ್ಕಿದ್ದು ಹೇಗೆ?

ಕಾರಿನಲ್ಲಿ ಎರಡು ಪೆಟ್ರೋಲ್ ಕ್ಯಾನ್ ಪತ್ತೆ!

ಗೋವಿಂದರಾಜನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ ವೇಳೆ ಬಿಜೆಪಿಯವರು ಕಾರಿನಲ್ಲಿ ಮಾರಕಾಸ್ತ್ರಗಳನ್ನು ತಂದಿದ್ದರು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆರೋಪಿಸಿದ್ದರು. ಇದೀಗ ಪೆಟ್ರೋಲ್‌ ತುಂಬಿದ್ದ 2 ಕ್ಯಾನ್‌ಗಳು ಗಲಾಟೆ ವೇಳೆ ಕಂಡುಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಕಾರ್ಯಕರ್ತರು, ಸ್ವಿಫ್ಟ್ ಕಾರಿನಲ್ಲಿ ಬಿಜೆಪಿ ಕಡೆಯವರು ಪೆಟ್ರೋಲ್‌ ಕ್ಯಾನ್‌ಗಳನ್ನು ತಂದಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಪೆಟ್ರೋಲ್‌ ಕ್ಯಾನ್‌ಗಳನ್ನು ಯಾರು ತಂದಿದ್ದರು, ಕಾರು ಯಾರಿಗೆ ಸೇರಿದ್ದು ಎಂಬುದು ತಿಳಿದುಬಂದಿಲ್ಲ.

ಗಲಾಟೆ ವೇಳೆ ಪೆಟ್ರೋಲ್ ಕ್ಯಾನ್ ಅನ್ನು ಕೈಯಲ್ಲಿ ಹಿಡಿದು ಯುವಕನೊಬ್ಬ ಓಡುತ್ತಿರುವ ದೃಶ್ಯ‌ ಸೆರೆಯಾಗಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಬಿಜೆಪಿಯವರು ಗಲಾಟೆ ಮಾಡಲು ಪೆಟ್ರೋಲ್ ತಂದಿದ್ದರು ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಿರುವ ನಡುವೆ ಇದಕ್ಕೆ ಇಂಬು ನೀಡುವಂತೆ ಇಬ್ಬರು ಕ್ಯಾನ್ ಹಿಡಿದು ಓಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆದರೆ, ಈ ಪೆಟ್ರೋಲ್‌ ಕ್ಯಾನ್‌ಗಳನ್ನು ಸ್ಥಳಕ್ಕೆ ಯಾವ ಕಾರಣಕ್ಕೆ ತಂದಿದ್ದರು ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.

Exit mobile version