Site icon Vistara News

Contaminated Water: ಕವಾಡಿಗರ ಹಟ್ಟಿಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು; ಮೂವರ ಅಮಾನತು

Those who fell ill after consuming contaminated water

ಚಿತ್ರದುರ್ಗ: ನಗರದ ಕವಾಡಿಗರ ಹಟ್ಟಿಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಆಗಿರುವುದು (Contaminated Water) ಜಿಲ್ಲಾ ಸರ್ವೇಕ್ಷಣಾ ಘಟಕದ ವರದಿಯಲ್ಲಿ ಬಯಲಾಗಿದೆ. ಮತ್ತೊಂದೆಡೆ ಘಟನೆಗೆ ಕಾರಣರಾದ ಯಾವುದೇ ಅಧಿಕಾರಿಯನ್ನು ಅಮಾನತು ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪಂಪ್ ಆಪರೇಟರ್ ಸೇರಿ ಮೂವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ. ಜತೆಗೆ ಎಇಇ ಮತ್ತು ಜೆ.ಇ.ಯನ್ನು ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ನಗರಸಭೆಯ ಪಂಪ್ ಆಪರೇಟರ್ ಪ್ರಕಾಶ್ ಬಾಬು, ವಾಲ್ ಮ್ಯಾನ್ ಪ್ರಕಾಶ್, ಸುರೇಶ್ ಅಮಾನತುಗೊಂಡಿದ್ದಾರೆ. ಎಇಇ ಮಂಜುನಾಥ್ ರೆಡ್ಡಿ, ಜೆಇ ಕಿರಣ್ ಅಮಾನತಿಗೆ ಸರ್ಕಾರಕ್ಕೆ ಶಿಪಾರಸು ಮಾಡಲಾಗಿದೆ. ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಬಂದ ನೀರಿನ ಪರೀಕ್ಷಾ ವರದಿಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಮಾಡಿರುವುದು ಉಲ್ಲೇಖವಾಗಿದೆ.

ಕವಾಡಿಗರ ಹಟ್ಟಿಯಲ್ಲಿ 5 ಸ್ಥಳದಲ್ಲಿ ಕುಡಿಯುವ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಈ ಪೈಕಿ ನಾಲ್ಕು ಸ್ಥಳಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು ಮಾಡಿರುವುದು ತಿಳಿದುಬಂದಿದ್ದು, ಮತ್ತೊಂದು ಸ್ಥಳದ ನೀರಿನ ಮಾದರಿಯ ಪರೀಕ್ಷಾ ಫಲಿತಾಂಶ ಕಾಯ್ದಿರಿಸಲಾಗಿದೆ.

ಇದನ್ನೂ ಓದಿ | Self Harming : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ

ವರದಿ ಹಿನ್ನೆಲೆಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರಿನ ಸರಬರಾಜನ್ನು ತಕ್ಷಣ ನಿಲ್ಲಿಸಿ, ಪರ್ಯಾಯ ವ್ಯವಸ್ಥೆ ಮಾಡಬೇಕು. ಪೈಪ್‌ಲೈನ್‌ ಸೋರಿಕೆ ಕಂಡುಬಂದರೆ ತಕ್ಷಣ ಸರಿಪಡಿಸಬೇಕು, ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿ ಕ್ಲೋರಿನೇಷನ್‌ ಮಾಡುವುದು, ಈ ಎಲ್ಲಾ ಕ್ರಮ ಕೈಗೊಂಡ ಬಳಿಕ ಮತ್ತೊಮ್ಮೆ ನೀರಿನ ಮಾದರಿ ಪರೀಕ್ಷೆ ಮಾಡಿಸಿ, ಆ ನೀರು ಕುಡಿಯಲು ಯೋಗ್ಯ ಎಂದು ತಿಳಿದುಬಂದರೆ, ಬಳಸಲು ಸೂಚನೆ ನೀಡಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಸೂಚಿಸಿದ್ದಾರೆ.

ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ 117ಕ್ಕೇರಿಕೆಯಾಗಿದೆ. ಬುಧವಾರ ಗುಣಮುಖರಾಗಿ ಹೋಗಿದ್ದ 4 ಮಂದಿ ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಗೆ ಕಾರಣರಾದವರನ್ನು ಅಮಾನತು ಮಾಡಿ: ಸಿಎಂ ಸೂಚನೆ

ಚಿತ್ರದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಸಾವು ಸಂಭವಿಸಿರುವ ಘಟನೆ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ಅವರು ಆದೇಶಿಸಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡು, ತಪ್ಪಿತಸ್ಥ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಜಿಲ್ಲಾಡಳಿತದಿಂದ ಹಾದಿ ತಪ್ಪಿಸುವ ಕೆಲಸ?

ಕಾವಾಡಿಗರ ಹಟ್ಟಿ ಕಲುಷಿತ ನೀರು ದುರಂತ ಪ್ರಕರಣವನ್ನು ಜಿಲ್ಲಾಡಳಿತ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿ ಪ್ರಕರಣ ಮುಚ್ಚಿ ಹಾಕುವ ಯತ್ನ. ನಡೆಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ ಸಿಎಂ ಸಿದ್ದರಾಮಯ್ಯಗೆ ಡಿಸಿ ದಿವ್ಯ ಪ್ರಭು ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಿ ಎಂದು ಸಿಎಂ ಸೂಚನೆ ನೀಡಿದ್ದಾರೆ. ಈ ಮೂಲಕ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿ ಕೇಸ್ ಕ್ಲೋಸ್‌ ಮಾಡಲು ಜಿಲ್ಲಾಡಳಿತ ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಜಾತಿ ವೈಷಮ್ಯದಿಂದ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡುತ್ತಿದ್ದಾರೆ. ಘಟನೆ ನಡೆದ ದಿನದಿಂದ ವಾಟರ್‌ ಮ್ಯಾನ್ ಸುರೇಶ್ ನಾಪತ್ತೆಯಾಗಿದ್ದಾನೆ. ಲ್ಯಾಬ್ ರಿಪೋರ್ಟ್ ಬರುವ ಮುನ್ನವೇ ಹೇಗೆ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಡಿಸಿ ದಿವ್ಯ ಪ್ರಭು ಹೇಳಿದ್ದಾರೆ. ಇಷ್ಟೆಲ್ಲಾ ಆಗಿದ್ದರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವುದು ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಕ್ಷೇತ್ರದಲ್ಲಿ ಕಾಣೆಯಾದ ಶಾಸಕ

ಕಲುಷಿತ ನೀರು ದುರಂತ ಪ್ರಕರಣದಲ್ಲಿ ಮೂರು ಸಾವಾಗಿದ್ದರೂ ಕ್ಷೇತ್ರದಲ್ಲಿ ಶಾಸಕರು, ಸಂಸದರು ಕಾಣಿಸುತ್ತಿಲ್ಲ. ಶಾಸಕ ವೀರೇಂದ್ರ ಪಪ್ಪಿ ಅವರು ಗೋವಾ ಟ್ರಿಪ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮಾನವೀಯತೆಯ ದೃಷ್ಟಿಯಿಂದಾದರೂ ಶಾಸಕರು ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಕೌನ್ಸಿಲರ್ ಜಯಣ್ಣ ಮನೆಗೆ ಮುತ್ತಿಗೆ

ಘಟನೆ ನಡೆದ ದಿನದಿಂದ ನಾಪತ್ತೆಯಾದ ಹಿನ್ನೆಲೆಯಲ್ಲಿ 17ನೇ ವಾರ್ಡ್‌ನಲ್ಲಿರುವ ಕೌನ್ಸಿಲರ್ ಜಯಣ್ಣ ಮನೆಗೆ ಕಾವಾಡಿಗರ ಹಟ್ಟಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಅವಾಚ್ಯ ಶಬ್ದಗಳಿಂದ ಬೈದ ಗ್ರಾಮಸ್ಥರು, ಕೌನ್ಸಿಲರ್ ಆದವನು ಆಸ್ಪತ್ರೆಗೆ ಬರಬೇಕಿತ್ತು. ಘಟನೆ ಏನಾಗಿದೆ ಎಂದಾದರೂ ಬರಬೇಕಲ್ಲವೇ? ಸಿಕ್ಕರೆ ಅವನಿಗೆ ಒಂದು ಗತಿ ಕಾಣಿಸುತ್ತೇವೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಗ್ರಾಮಸ್ಥರು ಬಂದ ಕೂಡಲೇ ಮನೆಯಿಂದ ಕೌನ್ಸಿಲರ್ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Assault Case : ಮಕ್ಕಳಿಗೆ ಬಲವಂತವಾಗಿ ವಿಷ ಕುಡಿಸಿ ಕಿಡಿಗೇಡಿಗಳು ಪರಾರಿ

ನೀರು ಬಿಡುವ ರಾತ್ರಿ ಲಿಂಗಾಯಿತ ಹಟ್ಟಿಗೆ ನೀರು ಕುಡಿಯಬೇಡಿ ಎಂದು ವಾಟರ್‌ ಮ್ಯಾನ್‌ ಹೇಳಿದ್ದಾನೆ. ಆದರೆ, ನಮಗೆ ಮಾತ್ರ ನೀರು ಬಿಟ್ಟಿದ್ದಾರೆ. ಬೇಕಂತಲೇ ನೀರಿಗೆ ವಿಷ ಹಾಕಿ ಸಾಯಿಸಿದ್ದಾರೆ. ಅವನಿಗೆ ದ್ವೇಷ ಇದ್ದರೆ ಎರಡು ಕುಟುಂಬಗಳು ಏನಾದ್ರೂ ಮಾಡಿಕೊಳ್ಳಲಿ. ಅದು ಬಿಟ್ಟು ಎಲ್ಲರನ್ನು ಸಾಯಿಸಲು ಹೊರಟಿರುವುದು ಸರಿಯೇ? ಮಗಳನ್ನು ದಲಿತ ಹುಡುಗ ಮದುವೆ ಆದ ಎಂದು ಹೀಗೆ ಮಾಡಿದ್ದಾನೆ. ನೂರಕ್ಕೆ ನೂರು ನೀರಿನಲ್ಲಿ ನೀರಗಂಟಿ ಸುರೇಶ್ ವಿಷ ಬೆರೆಸಿದ್ದಾನೆ ಎಂದು ಕಾವಾಡಿಗರ ಹಟ್ಟಿ ಗ್ರಾಮಸ್ಥರು ಆರೋಪಿಸಿದರು.

ರಸ್ತೆ ಮಧ್ಯೆ ಅಂಬೇಡ್ಕರ್ ಫೋಟೋ ಇಟ್ಟು ಪ್ರತಿಭಟನೆ ಮಾಡಿದ ಜನರು, ನ್ಯಾಯ ಸಿಗುವವರೆಗೆ ಪ್ರತಿಭಟನೆ ಕೈಬಿಡಲ್ಲ. ಕೂಡಲೇ ಶಾಸಕರು, ಸಂಸದರು ಸ್ಥಳಕ್ಕೆ ಬರಬೇಕು. ಸತ್ತವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ವಾಟರ್ ಮ್ಯಾನ್, ಕೌನ್ಸಿಲರ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

Exit mobile version