ಕೊಡಗು: ಜಿಲ್ಲೆಯ ಹೈಸೂಡ್ಳೂರು ಗ್ರಾಮದ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಯುವತಿಯರ ಶವ ಪತ್ತೆಯಾಗಿದೆ. ಅಶ್ವಿನಿ (48), ನಿಖಿತಾ (21) ಹಾಗೂ ನವ್ಯಾ (18) ಮೃತರು. ಕೊಡಗು ಜಿಲ್ಲೆಯಲ್ಲಿ (Kodagu District) ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯಲ್ಲಿ ಸೇವಾ ಪ್ರತಿನಿಧಿಯಾಗಿದ್ದ ಅಶ್ವಿನಿ ಅವರು ಇಬ್ಬರು ಪುತ್ರಿಯರೊಂದಿಗೆ ಮನೆಯಿಂದ ಹೊರಗೆ ಹೋದವರು ಶವವಾಗಿ ಪತ್ತೆಯಾಗಿದ್ದಾರೆ. ಇವರ ಸಾವು ಆತ್ಮಹತ್ಯೆಯೋ, ಕಾಲು ಜಾರಿ ಹೊಳೆಗೆ ಬಿದ್ದಿದ್ದಾರೋ ಅಥವಾ ಕೊಲೆಗೀಡಾಗಿದ್ದಾರೋ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಶ್ವಿನಿ ಅವರು ಇಬ್ಬರು ಮಕ್ಕಳೊಂದಿಗೆ ಹುದಿಕೇರಿಯಲ್ಲಿ ವಾಸವಿದ್ದರು. ನಿಖಿತಾ ಅವರು ಗೋಣಿಕೊಪ್ಪಲು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ನವ್ಯಾ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ತಾಯಿ ಹಾಗೂ ಇಬ್ಬರು ಮಕ್ಕಳು ಭಾನುವಾರ (ಡಿಸೆಂಬರ್ 3) ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಸಂಜೆ ಮೂವರ ಶವ ಪತ್ತೆಯಾಗಿದೆ. ಅಶ್ವಿನಿ ಅವರ ಪತಿ ಮಂಡ್ಯದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀಮಂಗಲ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಬಳಿ ನಿಂತಿದ್ದ ಕಾರಿನಲ್ಲಿ ವೈದ್ಯರೊಬ್ಬರು ಶವವಾಗಿ ಪತ್ತೆಯಾಗಿದ್ದರು. ಮಂಡ್ಯ ಜಿಲ್ಲೆ ಪಾಂಡವಪುರದ ಶಿವಳ್ಳಿ ಗ್ರಾಮದ ಡಾ. ಸತೀಶ್ (47) ಅವರೇ ಮೃತಪಟ್ಟವರು. ಇವರ ಹೆಸರು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಭ್ರೂಣ ಹತ್ಯೆ ಪ್ರಕರಣಕ್ಕೆ ತಳುಕು ಹಾಕಿಕೊಂಡಿತ್ತು. ಹೀಗಾಗಿ ಅವರು ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರೇ ಎಂಬ ಪ್ರಶ್ನೆಯೂ ಕೇಳಿಬಂದಿತ್ತು.
ಇದನ್ನೂ ಓದಿ: Actor Vinod Thomas: ಕಾರಿನಲ್ಲಿ ಖ್ಯಾತ ನಟನ ಶವ ಪತ್ತೆ; ನಿಗೂಢ ಸಾವಿಗೆ ಕಾರಣವೇನು?
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಂಪು ಕಾರೊಂದರಲ್ಲಿ ಸತೀಶ್ ಮೃತದೇಹವು ಪತ್ತೆಯಾಗಿತ್ತು. ಡಾ ಸತೀಶ್ ಅವರು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕೊಣಸೂರು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಡ್ರೈವರ್ ಸೀಟಿನಲ್ಲೇ ಕುಳಿತಿರುವ ಸತೀಶ್ ಅವರಿಗೆ ಹೃದಯಾಘಾತವಾಗಿದೆಯಾ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಅವಳಿ ಪ್ರಶ್ನೆಗಳು ಕೇಳಿಬಂದಿದ್ದವು. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.