ಕಲಬುರಗಿ: ಕೆಂಡ ಹಾಯುವಾಗ ಆಯತಪ್ಪಿ ಬಿದ್ದು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ (Kalaburagi News) ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಯಲ್ಲಿ ಕೆಂಡ ಹಾಯುತ್ತಿದ್ದಾಗ ಅವಘಡ ನಡೆದಿದೆ.
ಒಬ್ಬೊಬ್ಬರೆ ಅಗ್ನಿ ಕೊಂಡ ಹಾಯುವಾಗ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಸೋಲಾಪುರ ಮೂಲದ ಮಹಿಳೆ ಸೇರಿದಂತೆ ಮೂವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿವೆ. ಕೈಕಾಲು, ಕತ್ತಿನ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | ಪ್ರೇಯಸಿಯನ್ನು ಕೊಂದು, ಆಕೆಯ ಶವದ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್ ಇಟ್ಟ ಯುವಕ
ಯಸಳೂರು ಆರ್‌ಎಫ್ಒ ಅಮಾನತು
ಹಾಸನ: ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಸಕಲೇಶಪುರ ತಾಲೂಕು ಯಸಳೂರು ಆರ್‌ಎಫ್‌ಒ ಅಮಾನತುಗೊಂಡಿದ್ದಾರೆ. ಆರ್‌ಎಫ್‌ಒ ಅವರನ್ನು ಅಮಾನತುಗೊಳಿಸಿ ಶಿಸ್ತು ಪ್ರಾಧಿಕಾರಿ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಆದೇಶ ಹೊರಡಿಸಿದ್ದಾರೆ.
ಯಸಳೂರು ಆರ್‌ಎಫ್‌ಒ ಜಗದೀಶ್ ಅಮಾನತುಗೊಂಡವರು. ಕಾಮಗಾರಿಯೊಂದರ ವೇಳೆ ವಶಕ್ಕೆ ಪಡೆದಿದ್ದ ಜೆಸಿಬಿ ಬಿಡುಗಡೆಗಾಗಿ 1.20 ಲಕ್ಷಕ್ಕೆ ಜಗದೀಶ್ ಬೇಡಿಕೆ ಇಟ್ಟಿದ್ದರು. ಬಾಚೀಹಳ್ಳಿ ವ್ಯಾಪ್ತಿಯಲ್ಲಿ ರಸ್ತೆ-ಚರಂಡಿ ನಿರ್ಮಾಣ ಮಾಡುವ ವೇಳೆ ಜೆಸಿಬಿ ಸೀಜ್ ಮಾಡಿ, ಎಫ್‌ಐಆರ್ ದಾಖಲಿಸಲಾಗಿತ್ತು. ಆರ್‌ಎಫ್‌ಒ ವಿರುದ್ಧ ಅಧಿಕಾರ ದುರ್ಬಳಕೆ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ
ಹುಬ್ಬಳ್ಳಿ: ಲಂಚ ಪಡೆಯುತ್ತಿದ್ದ ವೇಳೆ ಕುಂದಗೋಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕರ ಪಿಂಚಣಿಗೆ ಸಂಬಂಧಿಸಿ ಲಂಚ ಪಡೆಯುವ ವೇಳೆ ಬಿಇಒ ಸಿಕ್ಕಿಬಿದ್ದಿದ್ದಾರೆ.
ಬಿಇಒ ವಿದ್ಯಾ ಕುಂದರಗಿ ಆರೋಪಿ. 8 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ರೆಡ್‌ಹ್ಯಾಂಡ್ ಆಗಿ ಬಿಇಒ ಸಿಕ್ಕಿಬಿದ್ದಿದ್ದಾರೆ. ಮೊದಲು ಹಣ ಕೊಡಲು ನಿವೃತ್ತ ಶಿಕ್ಷಕ ನಿರಾಕರಿಸಿದ್ದಾರೆ. ಆದರೆ, ಕಡತಕ್ಕೆ ಸಹಿ ಮಾಡದೆ ಸತಾಯಿಸಿದ ಹಿನ್ನೆಲೆಯಲ್ಲಿ ಕೊನೆಗೆ ನಿವೃತ್ತ ಶಿಕ್ಷಕ ಲೋಕಾಯುಕ್ತ ಮೊರೆ ಹೋಗಿದ್ದರು.
ಲೋಕಾಯುಕ್ತ ಎಸ್‌ಪಿ ಸತೀಶ್ ಚಿಟಗುಪ್ಪಿ ಮಾರ್ಗದರ್ಶನದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಧಾರವಾಡ ಜಿಲ್ಲೆಯ ಕುಂದಗೋಳ ಬಿಇಒ ವಿದ್ಯಾ ಕುಂದರಗಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ