ಮಡಿಕೇರಿ: ಮಡಿಕೇರಿ ಸಮೀಪಪ ಪೊನ್ನಂಪೇಟೆಯಲ್ಲಿ ಬಾಲಕನೊಬ್ಬನನ್ನು ಹುಲಿ ಕೊಂದು ಹಾಕಿದ ಮರುದಿನವೇ, ಬೆಳ್ಳಂಬೆಳಗ್ಗೆ ಮತ್ತೆ ಹುಲಿ ದಾಳಿ ನಡೆಸಿದೆ. ಹುಲಿ ದಾಳಿಗೆ ರಾಜು(72) ಎಂಬವರು ಮೃತಪಟ್ಟಿದ್ದಾರೆ.
ಮೂಲತಃ ಮೈಸೂರು ಜಿಲ್ಲೆಯ ಕೊಳವಿಗೆ ಹಾಡಿಯ ನಿವಾಸಿಯಾದ ರಾಜು ಬಾಡಗ ಗ್ರಾಮಕ್ಕೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರು. ಪೂಣಚ್ಚ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಬಾಲಕನನ್ನು ಕೊಂದಿದ್ದ ತೋಟದಲ್ಲಿಯೇ ವೃದ್ಧನನ್ನೂ ಹುಲಿ ಕೊಂದು ಹಾಕಿದೆ. ಕೂಲಿ ಕಾರ್ಮಿಕರು ವಾಸಿಸುವ ಲೈನ್ ಮನೆಯ ಸಮೀಪವೇ ಹುಲಿ ದಾಳಿ ನಡೆಸಿದೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಪಲ್ಲೇರಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಹುಲಿ ದಾಳಿಗೆ ಮೃತಪಟ್ಟ ಇನ್ನೊಬ್ಬ ಬಾಲಕ ಪಲ್ಲೇರಿಯ ಚೇತನ್(12). ಪೂಣಚ್ಚ ಅವರ ಮನೆಯಲ್ಲೇ ಈತನೂ ಕೆಲಸ ಮಾಡುತ್ತಿದ್ದ. ಮೂಲತಃ ಪಂಚವಳ್ಳಿಯ ಬಾಲಕನಾದ ಈತ ಕಾಫಿ ಬೀಜ ಹೆಕ್ಕುತ್ತಿದ್ದಾಗ ಹುಲಿ ದಾಳಿ ಮಾಡಿ ಸಾಯಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ಮೃತ ದೇಹ ರವಾನಿಸಲಾಗಿದೆ.
ಕೊಡಗಿನಲ್ಲಿ ಕಾಫಿ ತೋಟಗಳಿಗೆ ಆನೆ ಕಾಟ ಸಾಮಾನ್ಯವಾಗಿದ್ದು, ರೈತರು ರೋಸಿ ಹೋಗಿದ್ದಾರೆ. ಅದರೊಂದಿಗೆ ಈಗ ಹುಲಿ ದಾಳಿಯೂ ಸೇರಿಕೊಂಡಿದ್ದು, ಈಗಾಗಲೇ ಕೆಲವರು ಬಲಿಯಾಗಿದ್ದಾರೆ. ದಕ್ಷಿಣ ಕೊಡಗಿನಲ್ಲಿ ಪದೇ ಪದೆ ಹುಲಿದಾಳಿಗೆ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಗರಂ ಆಗಿದ್ದಾರೆ. ರಾತ್ರೋರಾತ್ರಿ ಸ್ಥಳಕ್ಕೆ ಬೇಟಿ ನೀಡಿದ ರೈತ ಸಂಘಟನೆಗಳು ಶೀಘ್ರವೇ ನರಹಂತಕ ಹುಲಿಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Tiger attack: ಕೊಡಗಿನಲ್ಲಿ ಹುಲಿ ದಾಳಿ, ಬಾಲಕ ಬಲಿ