Site icon Vistara News

Tiger Nail : ಸೆಲೆಬ್ರಿಟಿಗಳಿಗೆ ಉಗುರು ಸಂಕಷ್ಟ; ದರ್ಶನ್‌, ರಾಕ್‌ಲೈನ್‌, ಜಗ್ಗೇಶ್‌, ನಿಖಿಲ್‌ ಮನೆಗೇ ನೋಟಿಸ್‌

Darshan and tiger nail

ಬೆಂಗಳೂರು: ಬಿಗ್‌ ಬಾಸ್‌ ಸ್ಪರ್ಧಿ (BBK season 10), ಕೃಷಿಕ ವರ್ತೂರು ಸಂತೋಷ್‌ (Varthur Prakash) ಅವರನ್ನು ಹುಲಿಯುಗುರು ಹೊಂದಿರುವ ಕಾರಣಕ್ಕಾಗಿ ಬಂಧಿಸಿರುವ ಅಧಿಕಾರಿಗಳಿಗೆ ಈಗ ತಮ್ಮ ಬಳಿ ಹುಲಿಯುಗುರು ಇದೆ ಎಂದು ಹೇಳಿಕೊಂಡ, ತೋರಿಸಿಕೊಂಡ ಸೆಲೆಬ್ರಿಟಿಗಳ ಮೇಲೆ ಕ್ರಮ ಕೈಗೊಳ್ಳಬೇಕಾದ ಒತ್ತಡ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಅಧಿಕಾರಿಗಳು ನಟರಾದ ದರ್ಶನ್‌ (Actor Darshan), ನಿಖಿಲ್‌ ಕುಮಾರಸ್ವಾಮಿ (Nikhil Kumaraswamy), ರಾಕ್‌ಲೈನ್‌ ವೆಂಕಟೇಶ್‌ (Rockline Venkatesh) ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್‌ (Actor Jaggesh) ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ನಾಲ್ಕು ತಂಡಗಳು ನಾಲ್ಕು ಸೆಲೆಬ್ರಿಟಿಗಳ ಮನೆಗೆ ತೆರಳಿ ನೋಟಿಸ್‌ ಜಾರಿಗೊಳಿಸಿವೆ. ನಾಲ್ವರ ಮನೆಯ ಗೋಡೆಗೆ ಈ ನೋಟಿಸ್‌ಗಳನ್ನು ಅಂಟಿಸಲಾಗಿದೆ.

ವರ್ತೂರು ಸಂತೋಷ್‌ ಅವರು ಹುಲಿಯುಗುರು ಧರಿಸಿದ್ದನ್ನು ಟಿವಿಯಲ್ಲಿ ವೀಕ್ಷಿಸಿದ ಅಧಿಕಾರಿಗಳು ಬಿಗ್‌ ಬಾಸ್‌ ಮನೆಗೇ ನುಗ್ಗಿ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಆಗ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಇದಾದ ಬಳಿಕ ಹುಲಿಯುಗುರು ಧರಿಸಿದ ಸೆಲೆಬ್ರಿಟಿಗಳು, ಕುಣಿಗಲ್‌ನ ಧನಂಜಯ ಗುರೂಜಿ, ಗೌರಿ ಗದ್ದೆಯ ವಿನಯ ಗುರೂಜಿ ಮೊದಲಾದ ಧಾರ್ಮಿಕ ವ್ಯಕ್ತಿಗಳ ಮೇಲೂ ಹುಲಿಯುಗುರು ಮತ್ತು ಹುಲಿ ಚರ್ಮ ಹೊಂದಿರುವ ಆಪಾದನೆ ಮಾಡಲಾಗಿತ್ತು. ಅವರ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ಧನಂಜಯ ಗುರೂಜಿ ಮತ್ತು ವಿನಯ ಗುರೂಜಿ ಅವರ ಮಠಕ್ಕೇ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಕ್‌ಲೈನ್‌ ವೆಂಕಟೇಶ್‌ ಅವರ ಮನೆಗೆ ನೋಟಿಸ್‌

ಚಿತ್ರ ನಟರ ಮನೆಗೆ ನೋಟಿಸ್‌

ದರ್ಶನ್‌, ರಾಕ್‌ಲೈನ್‌, ಜಗ್ಗೇಶ್‌ ಮತ್ತು ನಿಖಿಲ್‌ ಕುಮಾರ್‌ ಅವರು ಧರಿಸಿರುವ ಹುಲಿಯುಗುರಿನ ಪೆಂಡೆಂಟ್‌ಗಳ ಬಗ್ಗೆ ದೂರುಗಳ ಮೂಲಕ ಗಮನ ಸೆಳೆಯಲಾಗಿತ್ತು. ಜಗ್ಗೇಶ್‌ ಅವರಂತೂ ಇದು ನನ್ನ ಅಮ್ಮ ಕೊಟ್ಟ ಅಸಲೀ ಹುಲಿಯುಗುರು ಎಂದು ಘಂಟಾಘೋಷವಾಗಿ ಪ್ರಕಟಿಸುವ ವಿಡಿಯೋಗಳು ಓಡಾಡುತ್ತಿವೆ. ಇತ್ತ ನಿಖಿಲ್‌ ಕುಮಾರಸ್ವಾಮಿ ಅವರು ಇದು ತಮ್ಮ ಮದುವೆ ವೇಳೆ ಸಿಕ್ಕಿದ ಉಡುಗೊರೆ, ಇದು ಒರಿಜಿನಲ್‌ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದೀಗ ಅರಣ್ಯಾಧಿಕಾರಿಗಳು ದರ್ಶನ್‌, ರಾಕ್‌ ಲೈನ್‌ ವೆಂಕಟೇಶ್‌, ಜಗ್ಗೇಶ್‌, ನಿಖಿಲ್‌ ಕುಮಾರಸ್ವಾಮಿ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ನೋಟಿಸ್‌ನಲ್ಲಿ ಅವರ ಬಳಿ ಇರುವ ಹುಲಿಯ ಉಗುರಿನ ಪೆಂಡೆಂಟ್‌ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ನೋಟಿಸ್‌ ನೋಡಿದ ಕೂಡಲೇ ತಮ್ಮಲ್ಲಿರುವ ಪೆಂಡೆಂಟ್‌ಗಳ ಸಹಿತ ವಿಚಾರಣೆಗೆ ಬರುವಂತೆ ತಿಳಿಸಿರುವ ನೋಟಿಸ್‌, ಅದಕ್ಕೆ ಸಂಬಂಧಿಸಿ ಇರುವ ಎಲ್ಲ ದಾಖಲೆಗಳನ್ನು ತರುವಂತೆ ಸೂಚಿಸಲಾಗಿದೆ.

ನಿಜವೆಂದರೆ ವನ್ಯ ಜೀವಿ ಕಾಯಿದೆಯನ್ನು ಉಲ್ಲಂಘಿಸಿ ಯಾವುದೇ ಪ್ರಾಣಿಗಳ ಉಗುರು, ಚರ್ಮ ಮೊದಲಾದವುಗಳನ್ನು ಯಾರಾದರೂ ಹೊಂದಿದ್ದರೆ ಅವರನ್ನು ಬಂಧಿಸುವುದಕ್ಕೆ ಮೊದಲು ನೋಟಿಸ್‌ ನೀಡಿ ಅವರಿಂದ ವಿವರಣೆ ಪಡೆದು, ವಿಚಾರಣೆ ನಡೆಸಿ ಬಳಿಕ ಅಗತ್ಯವಿದ್ದರೆ ಮಾತ್ರ ಬಂಧಿಸಬಹುದು ಎಂದು ಕಾನೂನು ಹೇಳುತ್ತದೆ. ವರ್ತೂರು ಸಂತೋಷ್‌ ಪ್ರಕರಣದಲ್ಲಿ ಈ ಪ್ರಕ್ರಿಯೆಯನ್ನು ಪಾಲಿಸದೆ ಇರುವುದು ಅರಣ್ಯಾಧಿಕಾರಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸೆಲೆಬ್ರಿಟಿಗಳ ವಿಷಯದಲ್ಲಿ ಭಾರಿ ಎಚ್ಚರಿಕೆಯ ಹೆಜ್ಜೆಯನ್ನು ಇಡಲು ಅರಣ್ಯ ಇಲಾಖೆ ಮುಂದಾಗಿದೆ.

ಮುಂದೇನಾಗಬಹುದು?

ನೋಟಿಸ್‌ ಪಡೆದವರು ಅದರಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಆಧರಿಸಿ ಮಾಹಿತಿಗಳನ್ನು ನೀಡಬೇಕಾಗುತ್ತದೆ. ವಿಚಾರಣೆಯನ್ನೂ ಎದುರಿಸಬೇಕಾಗುತ್ತದೆ. ದಾಖಲೆಗಳು ಸರಿ ಇದ್ದರೆ ಪ್ರಕರಣ ಮುಕ್ತಾಯಗೊಳ್ಳುತ್ತದೆ. ಒಂದೊಮ್ಮೆ ಕೆಲವರು ಹೇಳುವಂತೆ ತಮ್ಮ ಕೈಯಲ್ಲಿರುವುದು ಅಸಲಿ ಹುಲಿಯ ಉಗುರಲ್ಲ. ಕೃತಕ ಎಂದು ಹೇಳಿದರೆ ಅದನ್ನು ಪ್ರೂವ್‌ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.

ಯಾವುದೂ ಪ್ರೂವ್‌ ಆಗದೆ ಇದ್ದರೆ ಮುಂದೆ ಕಾನೂನು ಹೋರಾಟ ನಡೆಯುತ್ತದೆ. ಬಂಧನಕ್ಕೂ ಅವಕಾಶವಿದೆ. ತಪ್ಪಿತಸ್ಥರು ಎಂದು ಪ್ರೂವ್‌ ಆದರೆ ಮೂರರಿಂದ ಏಳು ವರ್ಷದವರೆಗೆ ಶಿಕ್ಷೆ ವಿಧಿಸಬಹುದು.

Exit mobile version