Site icon Vistara News

Karnataka Election: ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿ; ನಗದು, ಮದ್ಯ ಸೇರಿ 53.28 ಲಕ್ಷ ರೂ.ಮೌಲ್ಯದ ವಸ್ತುಗಳ ವಶ

#image_title

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election) ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆಗೆ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಅಕ್ರಮವಾಗಿ, ದಾಖಲೆ ಇಲ್ಲದೆ ಸಾಗಿಸುವ ಹಣ, ಮದ್ಯ ಹಾಗೂ ಮತದಾರರಿಗೆ ಹಂಚಲು ಸಾಗಿಸುವ ಉಡುಗೊರೆಗಳನ್ನು ಪೊಲೀಸರು ಜಪ್ತಿ ಮಾಡುತ್ತಿದ್ದಾರೆ. ಈ ನಡುವೆ ಬಾಗಲಕೋಟೆ, ಕೋಲಾರ, ರಾಮನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಗದು, ಮದ್ಯ ಸೇರಿ 53.28 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಕಬ್ಬಿನ ಸಿಪ್ಪೆಯಲ್ಲಿ ಮರೆಮಾಚಿ ಸಾಗಾಟ; 34.14 ಲಕ್ಷ ರೂ ಮೌಲ್ಯದ ಗೋಡೆ ಗಡಿಯಾರಗಳ ಜಪ್ತಿ

ಬಾಗಲಕೋಟೆ: ಕಬ್ಬಿನ ಸಿಪ್ಪೆಯಲ್ಲಿ (ಬಗ್ಯಾಸ್) ಮರೆಮಾಚಿ ಸಾಗಿಸುತ್ತಿದ್ದ 34.14 ಲಕ್ಷ ರೂಪಾಯಿ ಮೌಲ್ಯದ 2 ಲೋಡ್‌ ಗೋಡೆ ಗಡಿಯಾರಗಳನ್ನು ನಗರದಲ್ಲಿ ವಶಕ್ಕೆ ಪಡೆಯಲಾಗಿದೆ. ಗಡಿಯಾರಗಳ ಮೇಲೆ ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್‌ ನಾಯಕ ಎಸ್.ಆರ್. ಪಾಟೀಲ್ ಭಾವಚಿತ್ರ ಕಂಡುಬಂದಿದೆ. ಮತದಾರರಿಗೆ ಹಂಚಲು ಗೋಡೆ ಗಡಿಯಾರಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಗಡಿಯಾರಗಳನ್ನು ನವಗನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ | Robbery Case: ಅತ್ತ ಸರಸಕ್ಕಾಗಿ ಸರ ಕದ್ದ ಮೂವರು ಹೆಂಡಿರ ಮುದ್ದಿನ ಗಂಡ; ಇತ್ತ ದರೋಡೆಗಿಳಿದ ಆಟೊ ಚಾಲಕರಿಬ್ಬರ ಸೆರೆ

ಒಂದು ಲಾರಿಯಲ್ಲಿ 420 ಹಾಗೂ ಮತ್ತೊಂದು ಲಾರಿಯಲ್ಲಿ 390 ಬಾಕ್ಸ್ ಪತ್ತೆಯಾಗಿವೆ. ಒಂದೊಂದು ಬಾಕ್ಸ್‌ನಲ್ಲಿ 10 ಗೋಡೆ ಗಡಿಯಾರಗಳಿವೆ. ಎಸ್.ಆರ್. ಪಾಟೀಲ್ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬಾಗಲಕೋಟೆ ಎಪಿಎಮ್‌ಸಿ ಕ್ರಾಸ್ ಬಳಿ ಬುಧವಾರ ತಡರಾತ್ರಿ ಲಾರಿಗಳನ್ನು ವಶಕ್ಕೆ ಪಡೆದಿದ್ದು, ಗೋಡೆ ಗಡಿಯಾರಗಳ ನಿಖರ ಮೌಲ್ಯ, ಎಲ್ಲಿಂದ ಎಲ್ಲಿಗೆ ಸಾಗಿಸುತ್ತಿದ್ದರು ಎಂಬ ಬಗ್ಗೆ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ನವನಗರದ ಡಿಎಆರ್ ಕಚೇರಿ ಬಳಿ ನಿಲ್ಲಿಸಲಾಗಿದ್ದ ಲಾರಿಗಳನ್ನು ಬಾಗಲಕೋಟೆ ಡಿಸಿ ಪಿ. ಸುನಿಲ್ ಕುಮಾರ,‌ ಸಿಇಒ ಟಿ. ಭೂಬಾಲನ್, ಎಸ್.ಪಿ.ಜಯಪ್ರಕಾಶ್, ಎಸಿ ಶ್ವೇತಾ ಬಿಡಿಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಜಿಎಫ್‌ ಬಾರ್‌ನಲ್ಲಿ 11.14 ಲಕ್ಷ ರೂಪಾಯಿ ಮೌಲ್ಯದ ಮದ್ಯ ವಶ

ಕೋಲಾರ: ಜಿಲ್ಲೆಯ ಕೆಜಿಎಫ್ ನಗರದ ಎಲಿಗೆಂಟ್ ಬಾರ್‌ನಲ್ಲಿ‌ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 11.14 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಾರ್‌ನಲ್ಲಿದ್ದ ನಾಗೇಶ್ ಹಾಗೂ ಬಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ.‌

ರಾಮನಗರದಲ್ಲಿ 7 ಲಕ್ಷ ರೂಪಾಯಿ ವಶಕ್ಕೆ

ಹಾರೋಹಳ್ಳಿ ತಾಲೂಕಿನ ತಟ್ಟೆಕೆರೆ ಚೆಕ್ ಪೋಸ್ಟ್‌ನಲ್ಲಿ 2 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ.

ರಾಮನಗರ: ಜಿಲ್ಲೆಯ ಎರಡು ಸ್ಥಳಗಳಲ್ಲಿ ದಾಖಲೆಯಿಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ 7 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಮನಗರ ತಾಲೂಕಿನ ಹನುಮಂತನಗರ ಚೆಕ್‌ಪೋಸ್ಟ್‌ನಲ್ಲಿ ಇನ್ನೋವಾ ಕಾರಿನಿಂದ 5 ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಜಯಂತ್ ಎಂಬುವವರು ಹಣ ಸಾಗಿಸುತ್ತಿದ್ದಾಗ ಪೋಲಿಸರು ಹಣ ಜಪ್ತಿ ಮಾಡಿದ್ದಾರೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Drugs Case : ಅಕ್ರಮ ಗಾಂಜಾ ಮಾರಾಟ; ಮೂವರು ಆರೋಪಿಗಳು ಮಾಲು ಸಮೇತ ಬಂಧನ

ಮತ್ತೊಂದೆಡೆ ಹಾರೋಹಳ್ಳಿ ತಾಲೂಕಿನ ತಟ್ಟೆಕೆರೆ ಚೆಕ್ ಪೋಸ್ಟ್‌ನಲ್ಲಿ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಗಣಿ ಮಾರ್ಗವಾಗಿ ಹಾರೋಹಳ್ಳಿ ಬರುತಿದ್ದ ಶಿವಣ್ಣ ಎಂಬುವವರ ಕಾರನ್ನು ತಪಾಸಣೆ ಮಾಡಿದಾಗ ಹಣ ಪತ್ತೆಯಾಗಿದೆ. ಹಾರೋಹಳ್ಳಿ ತಹಸೀಲ್ದಾರ್ ವಿಜಿಯಣ್ಣ ಹಾರೋಹಳ್ಳಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ಚನ್ನಪಟ್ಟಣದಲ್ಲಿ 975 ಅಕ್ಕಿ ಮೂಟೆ ವಶ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಲೂರು ಚೆಕ್ ಪೋಸ್ಟ್‌ನಲ್ಲಿ ಮದ್ದೂರಿನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 25 ಕೆ‌.ಜಿ ತೂಕದ 975 ಅಕ್ಕಿ ಮೂಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದಾಗಿ ಕಂಟೈನರ್ ಚಾಲಕ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರಿಗೆ ಕಣ್ತಪ್ಪಿಸಿ ಕಂಟೈನರ್ ಚಾಲಕ ಪರಾರಿಯಾಗಿದ್ದಾನೆ. ಮೇಲ್ನೋಟಕ್ಕೆ ಪಡಿತರ ಅಕ್ಕಿ ಎಂದು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಚನ್ನಪಟ್ಟಣ ನಿವಾಸಿ ಸೈಯದ್ ಮಿರಾಜುದ್ದಿನ್ ಹಾಗೂ ಚಾಲಕನ ಮೇಲೆ ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವಾಸಿಗರ ಕಾರಿನಲ್ಲಿದ್ದ 1 ಲಕ್ಷ ರೂಪಾಯಿ ಸೀಜ್

ಚಿಕ್ಕಮಗಳೂರು: ಜಿಲ್ಲೆಗೆ ಬಂದ ಪ್ರವಾಸಿಗರಿಗೂ ಚುನಾವಣೆ ನೀತಿ ಸಂಹಿತೆ ಎಫೆಕ್ಟ್ ಆಗಿದೆ. ಮೂಡಿಗೆರೆ ತಾಲೂಕಿನ ಕೋಟಿಗೆರ ಚೆಕ್ ಪೋಸ್ಟ್‌ನಲ್ಲಿ ಪ್ರವಾಸಿಗರ ಕಾರಿನಲ್ಲಿದ್ದ 1 ಲಕ್ಷ ಹಣವನ್ನು ಸೀಜ್‌ ಮಾಡಲಾಗಿದೆ. ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಮನಗರದ ಬಂದಿದ್ದ ಪ್ರವಾಸಿಗರು ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಹೊರಟಿದ್ದರು. ಪೊಲೀಸರು ಹಣ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅತ್ತ ಪ್ರವಾಸಕ್ಕೂ ಹೋಗದೆ ಇತ್ತ ಹಣವು ಇಲ್ಲದೆ ಪರದಾಡಬೇಕಾಯಿತು. ಒಂದು ಲಕ್ಷ ರೂಪಾಯಿಗೆ ಯಾವ ದಾಖಲೆ ಕೊಡೋಣ ಎಂದು ಪ್ರವಾಸಿಗರು ಅಳಲು ತೋಡಿಕೊಂಡಿದ್ದಾರೆ.

Exit mobile version