Site icon Vistara News

HD Devegowda: ಕಾವೇರಿ ವಿಚಾರದಲ್ಲಿ ನಾನು ಮಾತನಾಡುವ ಟೈಮ್ ಬರಬೇಕು, ಆಗ ಮಾತಾಡ್ತೇನೆ: ಎಚ್‌.ಡಿ.ದೇವೇಗೌಡ

Ex PM HD Deve Gowda

ಹಾಸನ: ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಅದರ ಬಗ್ಗೆ ನಾನು ಇನ್ನೂ ಏನೂ ಮಾತನಾಡಿಲ್ಲ. ನನಗೆ ಜವಾಬ್ದಾರಿ‌ ಇದೆ, ನಾನು ಮಾತನಾಡುವ ಟೈಮ್ ಬರಬೇಕು, ಬಂದಾಗ ಮಾತನಾಡುತ್ತೇನೆ. ಈಗ ನಾನು ಏನೂ ಮಾತನಾಡುವುದಿಲ್ಲ. ಪ್ರಧಾನ ಮಂತ್ರಿವರೆಗೂ ನಾನೇ ಹೋಗಬೇಕು ಎಂಬ ಸನ್ನಿವೇಶ ಬಂದಾಗ ಮಾತನಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಹೇಳಿದ್ದಾರೆ.

ತಾಲೂಕಿನ ಬೈಲಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕಾವೇರಿ ನೀರಿನ ವಿಷಯದಲ್ಲಿ ನಿಮ್ಮ ‌ಮುಂದೆ ಹೇಳುವಷ್ಟು ಶಕ್ತಿ ಇಲ್ಲ. ಕುಮಾರಸ್ವಾಮಿಯವರು ಸಿದ್ದರಾಮಯ್ಯರವರ ಸಭೆಯಲ್ಲಿ ಮಾತನಾಡಿದ್ದಾರೆ. ಸಭೆಯಲ್ಲಿ‌ ನಡೆದ ಮಾತಿನ ಸಾರಾಂಶವನ್ನು ಕುಮಾರಸ್ವಾಮಿ ಹೇಳಿದ್ದಾರೆ. ಒಂದುಕಡೆ ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಕೊಡಲಿಲ್ಲ. ಪ್ರಾಧಿಕಾರ ಇನ್ನೂ‌ ಏನೂ ತೀರ್ಮಾನ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಅಕ್ರಮಗಳ ತನಿಖೆ ಮಾಡಬೇಡಿ ಎಂದವರಾರು?

ಎಲ್ಲಾ ಜಲಾಶಯ, ನೀರಾವರಿ ವಿವರವನ್ನು ಅಧಿಕಾರಿಗಳು ಕೊಡುತ್ತಿಲ್ಲ. ನೀರಾವರಿ ಮಂತ್ರಿಗಳು ಯಾವುದೇ ಮಾಹಿತಿಯನ್ನು ಹೊರ ಹಾಕದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದ ಅವರು, ಬಿಜೆಪಿ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ತನಿಖೆ ಮಾಡಬೇಡಿ‌ ಅಂತ ಹಿಡಿದುಕೊಂಡಿರುವವರು ಯಾರು? ಬಿಟ್ ಕಾಯಿನ್ ಹಗರಣ ಬಗ್ಗೆ ತನಿಖೆ ಮಾಡುತ್ತೇವೆ ಎಂದಿದ್ದರು. ಬಿಬಿಎಂಪಿ ಅಕ್ರಮಗಳ ತನಿಖೆ ಮಾಡುತ್ತೇವೆ ಎಂದಿದ್ದರು. ಈಗ ನೀವೆ ಅಧಿಕಾರದಲ್ಲಿದ್ದೀರಿ, ಯಾಕೆ ತನಿಖೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಗೃಹ ಲಕ್ಷ್ಮಿ ಯೋಜನೆ ಚಾಲನೆ ವೇಳೆ ಚಾಮುಂಡೇಶ್ವರಿಗೂ 2 ಸಾವಿರ ರೂ. ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಚಾಮುಂಡಿಯೂ ಹೆಣ್ಣು ದೇವತೆ, ಆ ತಾಯಿಗೂ ಎರಡು ಸಾವಿರ ರೂ. ಕೊಟ್ಟಿದ್ದಾರೆ. ಅವರು ಹುಂಡಿಗೆ ಹಣ ಹಾಕಲಿಲ್ಲ. ಆ ತಾಯಿಗೆ ಹಣ ಕೊಟ್ಟು ಯೋಜನೆಗೆ ಶಕ್ತಿ ತುಂಬಲು ಬೇಡಿದ್ದಾರೆ. ಈ ಯೋಜನೆಗಳು ಎಷ್ಟು ವರ್ಷ ಇರುತ್ತವೆ ನೋಡೋಣ. ಮೂರು ನಾಲ್ಕು ತಿಂಗಳಲ್ಲೇ ಅದರ ಬಗ್ಗೆ ವ್ಯಾಖ್ಯಾನಿಸುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು.

ಇದನ್ನೂ ಓದಿ | HD Kumaraswamy : ಸ್ಟ್ರೋಕ್ ಆದರೆ ಕ್ಷಣವೂ ತಡ ಮಾಡದೆ ಆಸ್ಪತ್ರೆಗೆ ಬನ್ನಿ: ಜನತೆಗೆ ಎಚ್‌.ಡಿ. ಕುಮಾರಸ್ವಾಮಿ ಕರೆ

ಹಾಸನಕ್ಕೆ ನಾನು ಆಗಾಗ್ಗೆ ಬರುತ್ತಿರುತ್ತೇನೆ. ಕೆಲವು ಆಯ್ದ ಜಿಲ್ಲೆಗಳಿಗೆ ನಾನು ಪ್ರವಾಸ ಮಾಡುತ್ತೇನೆ. ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ದಳ ನಾಯಕರು ‌ಪ್ರವಾಸ ಮಾಡುತ್ತಿದ್ದಾರೆ. ಈಗಾಗಲೇ ಎರಡು ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ನಮ್ಮ‌ ಒಬ್ಬ ಕಾರ್ಯಕರ್ತ ಕೂಡ ಪಕ್ಷ ಬಿಡಲು ಅವಕಾಶ ಇಲ್ಲ. ನನ್ನ ಜೀವನದ ಅಂತ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕಾಗಿ ಹೋರಾಡುತ್ತಿದ್ದೇನೆ. ಕೊನೆ ಉಸಿರು ಇರುವವರೆಗೆ ಪಕ್ಷಕ್ಕಾಗಿ ಹೋರಾಡುತ್ತೇನೆ ಎಂದು ಹೇಳಿದರು.

ದೀದಿ ವಿರುದ್ಧ ದೇವೇಗೌಡರ ಅಸಮಾಧಾನ

ಅವಧಿ ಪೂರ್ವ ಲೋಕಸಭಾ ಚುನಾವಣೆ ನಡೆಸಲು ಬಿಜೆಪಿ ಪ್ಲಾನ್ ಮಾಡಿದೆ ಎಂಬ ಮಮತಾ ಬ್ಯಾನರ್ಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರು ದಿನಕ್ಕೊಂದು ಹೇಳಿಕೆಗಳನ್ನು ಕೊಡುತ್ತಾರೆ. ಮುಂಬೈನಲ್ಲಿ 28 ಪಕ್ಷಗಳ ಗುಂಪಿನ ಒಂದು ದೊಡ್ಡ ಮಹಾಸಭೆ ನಡೆಯಿತು. ಸೆ.30 ರೊಳಗೆ ಎಲ್ಲಾ ಸೀಟ್ ನಿಗದಿ ಮಾಡುತ್ತೇವೆ ಎಂದು ಹೇಳಿದ್ದರು, ಅದು ಏನಾಯ್ತು. ಒಂದು ಕಮಿಟಿ ಮಾಡಿದ್ದಾರೆ, ಅದರ ಲೀಡರ್ ಯಾರು? ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂದು ಹೆಸರು ಹೇಳಿದ್ದಾರಾ? ಅಥವಾ ಆ ಒಕ್ಕೂಟದ ಸಂಚಾಲಕರು ಯಾರು ಅಂತ ಹೇಳಿದ್ದಾರಾ? ಒಂದು ಕಮಿಟಿ ಮಾಡಿದ್ದಾರೆ, ಆ ಕಮಿಟಿಯವರು ಕಾಮನ್ ಮಿನಿಮಮ್ ಪ್ರೋಗ್ರಾಂ ಮಾಡಬೇಕು. ಇನ್ನೂ ಚುನಾವಣೆಗೆ ಏಳು-ಎಂಟು ತಿಂಗಳು ಇದೆ. ನೋಡೋಣ ಬನ್ನಿ ನಾನು ಬದುಕಿದ್ದೀನಿ ಎಂದು ಇಂಡಿಯಾ ಮೈತ್ರಿಕೂಟ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಇಂಡಿಯಾ ಮೈತ್ರಿಕೂಟದಲ್ಲಿ ಕೆಲ ಸ್ನೇಹಿತರಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿ ಪದಗ್ರಹಣಕ್ಕೆ ಹಲವರು ನಾಯಕರು ಬಂದಿದ್ದರು. ಆದರೆ, ಈಗಿನ ಸರ್ಕಾರ ಬೇರೆ, ಈ ಸರ್ಕಾರದ ಉದ್ದೇಶವು ಅವರಿಗೆ ಗೊತ್ತಿದೆ. ಆದ್ದರಿಂದ ಇದರ ಉದ್ದೇಶದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ನಾನು ಕರ್ನಾಟಕ ಬಿಟ್ಟು ಹೊರಗೆ ಹೋಗಿಲ್ಲ. ಮಾಧ್ಯಮದ ಸುದ್ದಿಗಳನ್ನ ನೋಡಿದರೆ, ಮೂರು ಬಾರಿ ಇಂಡಿಯಾದವರು ಮೀಟಿಂಗ್ ಮಾಡಿದ್ದಾರೆ. ಪ್ರಧಾನಮಂತ್ರಿ ‌ಅಭ್ಯರ್ಥಿ ಘೋಷಣೆ ಇರಲಿ, 28 ಪಾರ್ಟಿಗಳು ಸೇರಿ ಮೋದಿ, ಬಿಜೆಪಿಗೆ ಸೆಡ್ಡು ಹೊಡೆಯಲು ಹೊರಟಿದ್ದಾರೆ. ಸೆಪ್ಟೆಂಬರ್ ಒಳಗೆ ಒನ್ ಟು ಒನ್ ಕ್ಯಾಂಡಿಡೇಟ್‌ ಮಾಡುತ್ತೇವೆ ಎಂದಿದ್ದರು. ಇನ್ನು ಈ ನಿಮಿಷದವರೆಗೂ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನನ್ನು ಗುರುತು ಮಾಡಿಲ್ಲ. ನಾನು ಯಾರನ್ನೂ ಟೀಕಿಸಲು ಮಾತನಾಡಲ್ಲ ಎಂದರು.

ಇದನ್ನೂ ಓದಿ | CM Siddaramaiah : ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆ ಬಿಜೆಪಿಯಲ್ಲಿ ನಡುಕ ಹುಟ್ಟಿದೆ ಎಂದ ಸಿದ್ದರಾಮಯ್ಯ

ಕುಟುಂಬದ ಸಂಕಷ್ಟ ದೂರವಾಗಲಿ ಎಂದು ದೊಡ್ಡಗೌಡರ ಪೂಜೆ

ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅನಾರೋಗ್ಯ ಹಾಗೂ ಮೊಮ್ಮಗ ಪ್ರಜ್ವಲ್‌ ರೇವಣ್ಣ ಸಂಸದ ಸ್ಥಾನ ಅನರ್ಹಗೊಂಡ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟ ಪರಿಹಾರವಾಗಲಿ ಎಂದು ಪ್ರಾರ್ಥಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ದಂಪತಿ, ಹಾಸನ ತಾಲೂಕಿನ ಬೈಲಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ಜನಾರ್ಧನಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. 46 ಜನ ಕುಟುಂಬ ಸದಸ್ಯರ ಹೆಸರಿನಲ್ಲಿ ಪೂಜೆ ಸಲ್ಲಿಸಿದ ದೊಡ್ಡಗೌಡರು ಪೂಜೆ ಸಲ್ಲಿಸಿದರು. ಇದಕ್ಕೂ ಮೊದಲು ಶನಿವಾರ ಹುಟ್ಟೂರು ಹರದನಹಳ್ಳಿಯಲ್ಲಿ ದೇವೇಶ್ವರ ದೇವಾಲಯದಲ್ಲಿ ದೇವೇಗೌಡರು ಪತ್ನಿ ಚೆನ್ನಮ್ಮ ಜತೆ ತೆರಳಿ ಪೂಜೆ ಸಲ್ಲಿಸಿದ್ದರು.

Exit mobile version